Site icon Vistara News

Viral video: ಒಂದೇ ಎಸೆತದಲ್ಲಿ 18 ರನ್​ ಬಿಟ್ಟುಕೊಟ್ಟ ನಾಯಕ​; ವಿಡಿಯೊ ವೈರಲ್​

Tamil Nadu Premier League

ಚೆನ್ನೈ: ಕ್ರಿಕೆಟ್​ನಲ್ಲಿ 6 ಎಸೆತಕ್ಕೆ 6 ಸಿಕ್ಸರ್​, ಹ್ಯಾಟ್ರಿಕ್ ವಿಕೆಟ್​ ಹೀಗೆ ಹಲವು ನಿದರ್ಶನಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಆದರೆ ತಮಿಳುನಾಡು ಪ್ರೀಮಿಯರ್ ಲೀಗ್​ನಲ್ಲಿ ಬೌಲರ್​ ಒಬ್ಬರು ಒಂದೇ ಎಸೆತಕ್ಕೆ ಬರೋಬ್ಬರಿ 18 ರನ್​ ಬಿಟ್ಟುಕೊಟ್ಟು ಕಳಪೆ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಅವರ ಈ ಬೌಲಿಂಗ್​ನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral video) ಆಗಿದೆ.​

ಮಂಗಳವಾರ ಇಲ್ಲಿ ನಡೆದಿದ್ದ ಸೇಲಂ ಸ್ಪಾರ್ಟನ್ಸ್ ಮತ್ತು ಚೆಪಾಕ್ ಸೂಪರ್ ಗಿಲ್ಲಿಸ್ ತಂಡದ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಸೇಲಂ ಸ್ಪಾರ್ಟನ್ಸ್ ನಾಯಕ ಮತ್ತು ವೇಗಿ ಅಭಿಷೇಕ್ ತನ್ವಾರ್(Abhishek Tanwar) ಅವರು ಒಂದೇ ಎಸೆತದಲ್ಲಿ 18 ಬಿಟ್ಟುಕೊಟ್ಟ ಆಟಗಾರನಾಗಿದ್ದಾರೆ.

ಅಚ್ಚರಿ ಎಂದರೆ ಚೆಪಾಕ್ ತಂಡದ ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ಈ ರನ್​ ಹರಿದು ಬಂದಿರುವುದು. ಮೊದಲ 5 ಎಸೆತಗಳನ್ನು ಉತ್ತಮ ರೀತಿಯಲ್ಲಿ ಎಸೆದಿದ್ದ ಅಭಿಷೇಕ್ ಅಂತಿಮ ಎಸೆತವನ್ನು ಯಾರ್ಕರ್​ ಎಸೆದಿದ್ದರು. ಇದನ್ನು ಎದುರಿಸುವಲ್ಲಿ ವಿಫಲವಾದ ಬ್ಯಾಟರ್​ ಕ್ಲೀನ್​ ಬೌಲ್ಡ್​ ಆದರು. ಔಟಾದ ಬೇಸರದಲ್ಲಿ ಸಂಜಯ್ ಯಾದವ್​(Sanjay Yadav) ತಲೆ ತಗ್ಗಿಸಿ ಪೆವಿಲಿಯನ್​ ಕಡೆಗೆ ಮುಖ ಮಾಡಿದ್ದ ವೇಳೆ ಅಂಪೈರ್​ ನೋ ಬಾಲ್​ ಸಿಗ್ನಲ್​ ನೀಡಿದರು.

ಇದನ್ನೂ ಓದಿ WTC Final 2023 : ಸೋಲಿನ ಬಳಿಕ ರಹಸ್ಯ ಸಂದೇಶ ಪೋಸ್ಟ್​ ಮಾಡಿದ ವಿರಾಟ್​ ಕೊಹ್ಲಿ!

ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಸಂಜಯ್ ಯಾದವ್​ ಫ್ರೀ ಹಿಟ್​​ ಎಸೆತವನ್ನು ಸಿಕ್ಸರ್​ಗೆ ಬಡಿದಟ್ಟಿದರು. ಆದರೆ ಅದು ಕೂಡ ನೋ ಬಾಲ್​ ಆಗಿತ್ತು. ಮುಂದಿನ ಎಸೆತದಲ್ಲಿ ಎರಡು ರನ್ ಓಡಿದರು. ಅದು ಕೂಡ ಮತ್ತೆ ನೋ ಎಸೆತ ಆಗಿತ್ತು. ಮುಂದಿನ ಎಸೆತ ವೈಡ್ ಬಾಲ್. ಕೊನೆಗೆ ತನ್ವಾರ್ ಸರಿಯಾದ ಎಸೆತ ಹಾಕಿದರು. ಆದರೆ ಆ ಎಸೆತವನ್ನು ಸಂಜಯ್ ಯಾದವ್ ಸಿಕ್ಸರ್ ಬಾರಿಸಿದರು. ಅಲ್ಲಿಗೆ ಒಂದೇ ಎಸೆತದಲ್ಲಿ 18 ರನ್​ ಹರಿದು ಬಂತು.

ಅಭಿಷೇಕ್ ತನ್ವಾರ್ ಅವರ ಕೊನೆಯ ಓವರ್ ಹೀಗಿತ್ತು: 1 4 0 1 N 1 N N6 N2 Wd 6

ಪಂದ್ಯ ಗೆದ್ದ ಚೆಪಾಕ್ ಸೂಪರ್ ಗಿಲ್ಲಿಸ್

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆಪಾಕ್ ಸೂಪರ್ ಗಿಲ್ಲಿಸ್ ನಿಗದಿತ 20 ಓವರ್​ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 217 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಸೇಲಂ ಸ್ಪಾರ್ಟನ್ಸ್ 165 ರನ್​ಗಳಿಗೆ ಸರ್ವಪತನ ಕಂಡು ಹೀನಾಯ ಸೋಲು ಕಂಡಿತು.

Exit mobile version