ಮುಂಬಯಿ: ಟಿ20 ವಿಶ್ವಕಪ್ ವಿಜೇತ ತಂಡದ ಆಟಗಾರರನ್ನು ಅಭಿನಂದಿಸುವ(Team India victory parade) ಸಲುವಾಗಿ ಮುಂಬೈಯ ಮರೀನ್ ಡ್ರೈವ್ ಪ್ರದೇಶದಲ್ಲಿ ಸೇರಿದ ಅಭಿಮಾನಿಗಳನ್ನು(Team India fans) ಕಾಣುವಾಗ ಅರಬ್ಬಿ ಸಮುದ್ರವೇ ನಾಚಿ ನೀರಾಗುವಷ್ಟು ಕ್ರಿಕೆಟ್ ಪ್ರೀತಿಯ ಸಾಗರ ಉಕ್ಕೇರಿತ್ತು. ಮಳೆಯನ್ನು ಲೆಕ್ಕಿಸದೇ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಜಮಾಯಿಸಿದ್ದರು. ಕಿಕ್ಕಿರಿದ ಜನಸಂದಣಿಯ ನಡುವೆಯೂ ಆ್ಯಂಬುಲೆನ್ಸ್ಗೆ(ambulance) ಟೀಮ್ ಇಂಡಿಯಾ(Team India) ಅಭಿಮಾನಿಗಳು ದಾರಿ ಮಾಡಿಕೊಡುವ ಮೂಲಕ ಮಾನವೀಯತೆ ತೋರಿ ಎಲ್ಲರ ಮನಗೆದ್ದಿದ್ದಾರೆ.
ಅಭಿಮಾನಿಗಳು ಆ್ಯಂಬುಲೆನ್ಸ್ಗೆ ದಾರಿ ಮಾಡಿಕೊಡುತ್ತಿರುವ ವಿಡಿಯೊ ಎಲ್ಲಡೆ ವೈರಲ್ ಆಗಿದ್ದು(Viral Video), ಅಭಿಮಾನಿಗಳ ಈ ನಡೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಉತ್ಸಾಹಿ ಕ್ರಿಕೆಟ್ ಅಭಿಮಾನಿಗಳ ನಡುವೆ ಆ್ಯಂಬುಲೆನ್ಸ್ ಯಾವ ಸಮಸ್ಯೆಯೂ ಇಲ್ಲದಂತೆ ಸರಾಗವಾಗಿ ಮುನ್ನಡೆಯುತ್ತಿರುವ ವಿಡಿಯೊವನ್ನು ಎಎನ್ಐ ಸುದ್ದಿ ಸಂಸ್ಥೆ ತನ್ನ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ನೆಟ್ಟಿಗರು ಈ ವಿಡಿಯೊಗೆ ಕಮೆಂಟ್ ಮಾಡಿದ್ದು, ಟೀಮ್ ಇಂಡಿಯಾ ಅಭಿಮಾನಿಗಳಿಗೆ ದೊಡ್ಡ ಚಪ್ಪಾಳೆ ನೀಡಬೇಕು ಎಂದಿದ್ದಾರೆ.
ಬಾರ್ಬಡೋಸ್‌ನಿಂದ ಬುಧವಾರ ಬೆಳಿಗ್ಗೆ ಪ್ರಯಾಣ ಆರಂಭಿಸಿದ್ದ ಭಾರತ ತಂಡವು ಗುರುವಾರ ಬೆಳಗ್ಗೆ ನವದೆಹಲಿಗೆ ಬಂದಿಳಿದಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಆತಿಥ್ಯ ಸ್ವೀಕರಿಸಿದ ನಂತರ ಮಧ್ಯಾಹ್ನ 3.42ಕ್ಕೆ ಮುಂಬೈಗೆ ಪ್ರಯಾಣ ಬೆಳೆಸಿತ್ತು. ಸಂಜೆ ಐದು ಗಂಟೆಯ ನಂತರ ವಿಮಾನವು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಆಟಗಾರರು ಬಂದೊಡನೆಯೇ ಕ್ರಿಕೆಟ್ ಪ್ರೇಮಿಗಳ ಜಯಘೋಷ ಮೊಳಗಿತು. ಅಭಿಮಾನಿಗಳ ಅಬ್ಬರಕ್ಕೆ ಅರಬ್ಬಿ ಸಮುದ್ರ ಕೂಡ ಒಂದು ಕ್ಷಣ ಸ್ಥಬ್ಧವಾಗಿತ್ತು. ವಿಶೇಷ ವಿನ್ಯಾಸದ ತೆರೆದ ವಾಹನದಲ್ಲಿ ವಿಶ್ವಕಪ್ ಟ್ರೋಫಿ ಹಿಡಿದು ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಬೂಮ್ರಾ, ಪಾಂಡ್ಯ, ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಎಲ್ಲ ಆಟಗಾರರು ವಿಜಯಯಾತ್ರೆಯ ಮೆರವಣಿಗೆಯಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಸಾವಿರಾರು ಅಭಿಮಾನಿಗಳು ಘೋಷಣೆ ಕೂಗಿ ಅಭಿನಂದನೆಗಳ ಸಲ್ಲಿಸಿದರು.
ಇದನ್ನೂ ಓದಿ Team India: ವಾಂಖೆಡೆ ಸ್ಟೇಡಿಯಂನಲ್ಲಿ ವಂದೇ ಮಾತರಂ ಹಾಡಿದ ಟೀಮ್ ಇಂಡಿಯಾ; ವಿಡಿಯೊ ಹಂಚಿಕೊಂಡ ಎ.ಆರ್. ರೆಹಮಾನ್
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವತಿಯಿಂದ ಚಾಂಪಿಯನ್ ಭಾರತ ತಂಡಕ್ಕೆ ಘೋಷಿಸಿದ್ದ 125 ಕೋಟಿ ರೂಪಾಯಿ ಮೊತ್ತದ ಚೆಕ್ ಅನ್ನು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ, ಕಾರ್ಯದರ್ಶಿ ಜಯ್ ಶಾ ಹಸ್ತಾಂತರಿಸಿದರು.
ಜೂನ್ 29ರಂದು ಬಾರ್ಬಾಡೋಸ್‌ನಲ್ಲಿ ನಡೆದಿದ್ದ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರು ಜಯಿಸಿತ್ತು. ಆದರೆ ಕೆರೀಬಿಯನ್ ದ್ವೀಪದಲ್ಲಿ ಚಂಡಮಾರುತ ಬೀಸಿದ್ದ ಕಾರಣ ವಿಮಾನಯಾನ ಸೌಲಭ್ಯ ರದ್ದಾಗಿತ್ತು. ಆದ್ದರಿಂದ ಬುಧವಾರದವರೆಗೂ ತಂಡವು ಬಾರ್ಬಾಡೋಸ್‌ನಲ್ಲಿಯೇ ಉಳಿದಿತ್ತು.
ಟ್ರೋಫಿ ಪರೇಡ್ ನಡೆಸಿದ ಬಳಿಕ ವಾಂಖೆಡೆ ಕ್ರೀಡಾಂಗಣದಲ್ಲಿ ವಿಶ್ವಕಪ್ ವಿಜೇತ ಆಟಗಾರರು ಅಭಿಮಾನಿಗಳ ಮುಂದೆ ‘ವಂದೇ ಮಾತರಂ'(Vande Mataram) ಹಾಡನ್ನು ಹಾಡಿದ್ದರು. ಜತೆಗೆ ನೃತ್ಯ ಕೂಡ ಮಾಡಿ ಅಭಿಮಾನಿಗಳಿಗೆ ಮನರಂಜನೆ ನೀಡಿದರು. ಒಟ್ಟಾರೆ ಆಟಗಾರರು ಮತ್ತು ಮುಂಬೈ ಜನತೆ ನಿನ್ನೆ ಸಂತಸ ಅಲೆಯಲ್ಲಿ ತೇಲಾಡಿತ್ತು.