ಅಹಮದಾಬಾದ್: ಆರ್ಸಿಬಿ(RCB) ವಿರುದ್ಧ ನಿನ್ನೆ(ಬುಧವಾರ) ನಡೆದ ಐಪಿಎಲ್ನ(IPL 2024) ಎಲಿಮಿನೇಟರ್(RCB vs RR Eliminator) ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್(Rajasthan Royals) ತಂಡ ನಾಲ್ಕು ವಿಕೆಟ್ಗಳ ಗೆಲುವು ಸಾಧಿಸಿ ಕ್ವಾಲಿಫೈಯರ್ ಹಂತಕ್ಕೆ ತೇರ್ಗಡೆಗೊಂಡಿತು. ಆದರೆ, ಇದೇ ಪಂದ್ಯದಲ್ಲಿ ಔಟಾದ ಹತಾಶೆಯಲ್ಲಿ ಯುವ ಆಟಗಾರ ಯಶಸ್ವಿ ಜೈಸ್ವಾಲ್(Yashasvi Jaiswal) ತಾಳ್ಮೆ ಕಳೆದುಕೊಂಡ(Yashasvi Jaiswal Loses Cool) ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ.
ಚೇಸಿಂಗ್ ವೇಳೆ ಜೈಸ್ವಾಲ್ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದರು. 45 ರನ್ ಗಳಿಸಿದ್ದ ವೇಳೆ ರಿವರ್ಸ್ ಸ್ವೀಪ್ ಮಾಡುವ ಯತ್ನಕ್ಕೆ ಕೈ ಹಾಕಿ ಇದರಲ್ಲಿ ವಿಫಲವಾಗಿ ಕ್ಯಾಚ್ಗೆ ಬಲಿಯಾದರು. ಒಂದೆಡೆ ಅರ್ಧಶತಕ ತಪ್ಪಿದ ಮತ್ತು ತಂಡಕ್ಕೆ ಹಿನ್ನಡೆಯಾದ ಸಿಟ್ಟಿನಲ್ಲಿ ಡ್ರೆಸ್ಸಿಂಗ್ ರೂಮ್ಗೆ ತೆರಳುವ ವೇಳೆ ಜೈಸ್ವಾಲ್ ಡಗೌಟ್ನ ಸ್ಟ್ಯಾಂಡ್ನ ಬೇಲಿಗೆ ತಮ್ಮ ಕೈಯನ್ನು ಜೋರಾಗಿ ಬಡಿದಿದ್ದಾರೆ. ಅಲ್ಲದೆ ಜೋರಾಗಿ ಕಿರುಚಾಟ ಕೂಡ ನಡೆಸಿದ್ದಾರೆ. ಇದರ ವಿಡಿಯೊ ವೈರಲ್ ಆಗಿದ್ದು ನೆಟ್ಟಿಗರು ಈ ರೀತಿಯ ವರ್ತನೆ ಸರಿಯಲ್ಲ ಎಂದು ಬುದ್ಧಿಮಾತು ಹೇಳಿದ್ದಾರೆ.
ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ ಜೈಸ್ವಾಲ್ 14 ಪಂದ್ಯ ಆಡಿ 625 ರನ್ ಗಳಿಸಿದ್ದರು. ಆದರೆ ಈ ಆವೃತ್ತಿಯಲ್ಲಿ ಅಷ್ಟಾಗಿ ಉತ್ತಮ ಪ್ರದರ್ಶನ ನೀಡಿಲ್ಲ. ಮುಂಬೈ ವಿರುದ್ಧದ ಪಂದ್ಯದಲ್ಲಿ ತಕವೊಂದನ್ನು ಬಾರಿಸಿದ್ದು ಬಿಟ್ಟರೆ ಇವರ ಬ್ಯಾಟ್ನಿಂದ ದೊಡ್ಡ ಇನಿಂಗ್ಸ್ ಕಂಡುಬಂದಿಲ್ಲ. ಮುಂದಿನ ತಿಂಗಳು ನಡೆಯುವ ಟಿ20 ವಿಶ್ವಕಪ್ಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಜೈಸ್ವಾಲ್ ಕೂಡ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ IPL 2024 : 17 ವರ್ಷ ಕಾದರೂ ಟ್ರೋಫಿ ಇಲ್ಲ: ಆರ್ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ
ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ 8 ವಿಕೆಟಿಗೆ 172 ರನ್ ಗಳಿಸಿತು. ರಾಜಸ್ಥಾನ್ 19 ಓವರ್‌ಗಳಲ್ಲಿ 6 ವಿಕೆಟಿಗೆ 174 ರನ್ ಬಾರಿಸಿ ಜಯಭೇರಿ ಮೊಳಗಿಸಿತು. ಚೇಸಿಂಗ್ ವೇಳೆ ರಾಜಸ್ಥಾನ್ ಬಿರುಸಿನ ಆಡವಾಡಿತು. ಜೈಸ್ವಾಲ್ (45)-ಕ್ಯಾಡ್‌ಮೋರ್ (20) ಮೊದಲ ವಿಕೆಟ್ಗೆ 46 ರನ್ ಜತೆಯಾಟ ನಿಭಾಯಿಸಿದರು. ಆ ಬಳಿಕ ಜೈಸ್ವಾಲ್-ಸ್ಯಾಮ್ಸನ್ ಜತೆಗೂಡಿ 35 ರನ್ ಕಲೆಹಾಕಿದರು. 112ಕ್ಕೆ 4 ವಿಕೆಟ್ ಬಿದ್ದಾಗ ಪಂದ್ಯ ಕುತೂಹಲ ಘಟ್ಟ ತಲುಪಿತು. ಆದರೆ ಪರಾಗ್-ಹೆಟ್‌ಮೈರ್ ಸಿಡಿದು ನಿಂತು 45 ರನ್ ಜತೆಯಾಟ ನಿಭಾಯಿಸಿ ಆರ್‌ಸಿಬಿಗೆ ಸೋಲುಣಿಸಿದರು. ಮೂರು ಓವರ್ ತನಕ ಉತ್ತಮ ಲಯದಲ್ಲಿದ್ದ ಕ್ಯಾಮರೂನ್ ಗ್ರೀನ್ ನಾಲ್ಕನೇ ಓವರ್ನಲ್ಲಿ ದುಬಾರಿಯಾದರು. ಹೆಟ್‌ಮೈರ್ ಈ ಓವರ್ನಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಮೂಲಕ ಬಿಸಿ ಮುಟ್ಟಿಸಿದರು.
ಈ ಸೋಲಿನೊಂದಿಗೆ ಆರ್ಸಿಬಿ ತಂಡದ 2024ರ ಐಪಿಎಲ್ ಅಭಿಯಾನ ಮುಕ್ತಾಯಗೊಂಡಿತು. ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದಿರುವುದೇ ರೆಡ್ ಆರ್ಮಿಯ ದೊಡ್ಡ ಸಾಧನೆ ಎನಿಸಿಕೊಂಡಿತು. ಜತೆಗೆ ಆರ್ಸಿಬಿಯ ಅಪಾರ ಅಭಿಮಾನಿಗಳ ಹೃದಯ ಛಿದ್ರಗೊಂಡಿತು. ಈ ಬಾರಿಯಾದರೂ ಕಪ್ ಗೆಲ್ಲಬೇಕೆಂಬ ಆಸೆ ಕಮರಿತು. ಕಷ್ಟದಲ್ಲಿ ಪ್ಲೇಆಫ್ ಹಂತಕ್ಕೇರಿದ ಹೊರತಾಗಿಯೂ ಮುಂದಿನ ಹಂತಕ್ಕೆ ಹೋಗಲು ಸಾಧ್ಯವಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಚೆನ್ನೈ ವಿರುದ್ಧದ ಲೀಗ್ ಪಂದ್ಯದಲ್ಲಿ ಹೆಚ್ಚು ನಿಖರವಾಗಿ ಆಡಿದ್ದ ಆರ್ಸಿಬಿ ಈ ಪಂದ್ಯದಲ್ಲಿ ನಿರ್ಲಕ್ಷ್ಯ ತೋರಿತು. ಬ್ಯಾಟಿಂಗ್ನಲ್ಲಿ ಅನಗತ್ಯವಾಗಿ ವಿಕೆಟ್ ಒಪ್ಪಿಸಿದರೆ ಬೌಲಿಂಗ್ ವೇಳೆಯೂ ಕ್ಯಾಚ್ ಕೈಚೆಲ್ಲಿ, ಕಳಪೆ ಫೀಲ್ಡಿಂಗ್ ಮಾಡಿ, ರನ್ಔಟ್ ಚಾನ್ಸ್ ಕಳೆದುಕೊಂಡಿತು. ಇದು ಸೋಲಿಗೆ ಕಾರಣವಾಯಿತು.