ಲಂಡನ್: ಭಾನುವಾರ ನಡೆದಿದ್ದ ಲೆಜೆಂಡ್ಸ್ ವಿಶ್ವ ಚಾಂಪಿಯನ್ ಶಿಪ್(World Championship of Legends 2024) ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿದ್ದ ಬದ್ಧ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಗೆಲುವಿನ ಬಳಿಕ ಟೀಮ್ ಇಂಡಿಯಾ ಆಟಗಾರರಾದ ಯುವರಾಜ್ ಸಿಂಗ್(Yuvraj Singh), ಹರ್ಭಜನ್ ಸಿಂಗ್(Harbhajan Singh) ಮತ್ತು ಸುರೇಶ್ ರೈನಾ(Suresh Raina) ವಿಚಿತ್ರ ಶೈಲಿಯಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ವಿಡಿಯೊ ವೈರಲ್(Viral Video) ಆಗಿದೆ.
ಎಜ್ಬಾಸ್ಟನ್ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಅದ್ಧೂರಿ ಗೆಲುವು ಸಾಧಿಸಿದ ಬಳಿಕ ಡ್ರೆಸ್ಸಿಂಗ್ ರೂಮ್ಗೆ ಮರಳಿದ ಭಾರತದ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹಾಗೂ ಸುರೇಶ್ ರೈನಾ ಗಾಯಾಳಾಗಿ ಕುಂಟುತಾ ಬಂದಂತೆ ಬಾಗಿಲು ತೆರೆದುಕೊಂಡು ನಡೆದು ಬಂದ ವಿಡಿಯೊ ಹಂಚಿಕೊಂಡಿದ್ದಾರೆ.
ಈ ವಿಡಿಯೊ ಕಂಡ ನೆಟ್ಟಿಗರು ಇದು ಪಾಕ್ ಕ್ರಿಕೆಟ್ ತಂಡದ ಫಿಟ್ನೆಸ್ ಹೇಗಿದೆ ಎನ್ನುವುದನ್ನು ತೋರಿಸಿದಂತಿದೆ ಎಂದು ಹಾಸ್ಯಮಯ ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಪಾಕಿಸ್ತಾನ ತಂಡದಲ್ಲಿರುವ ವೇಗದ ಬೌಲರ್ಗಳನ್ನು ವ್ಯಂಗ್ಯ ಮಾಡಿದರೇ? ಎಂದು ಪ್ರಶ್ನಿಸಿದ್ದಾರೆ. ಏಕೆಂದರೆ, ಪಾಕ್ ಆಟಗಾರರು ಎರಡು ತಿಂಗಳಿಗೊಮ್ಮೆ ಗಾಯಗೊಂಡು ಆಟದಿಂದ ದೂರ ಸರಿಯುತ್ತಾರೆ. ಫೈನಲ್ ಪಂದ್ಯದಲ್ಲಿ ಮಿಸ್ಬಾ ಉಲ್ ಹಕ್ ಕೂಡ ಗಾಯಗೊಂಡಿದ್ದರು. ಬಳಿಕ ಇವರನ್ನು ರಾಬಿನ್ನ್ ಉತ್ತಪ್ಪ ಸೇರಿ ಕೆಲ ಆಟಗಾರರ ನೆರವಿನಿಂದ ಮೈದಾನದ ಹೊರಗಡೆ ತರಲಾಗಿತ್ತು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ಶೋಯೆಬ್ ಮಲಿಕ್ ಸಣ್ಣ ಮಟ್ಟಿನ ಬ್ಯಾಟಿಂಗ್ ಹೋರಾಟದ ನೆರವಿನಿಂದ 156 ರನ್ ಬಾರಿಸಿತು. ಮಲಿಕ್ 41 ರನ್ ಗಳಿಸಿದರು. ಉಳಿದಂತೆ ಕಮ್ರಾನ್ ಅಕ್ಮಲ್ 24 ರನ್, ಮಕ್ಸೂದ್ 21 ರನ್ ಮತ್ತು ಕೊನೆಯಲ್ಲಿ ತನ್ವೀರ್ 19 ರನ್ ಗಳಿಸಿದರು. ಭಾರತದ ಪರ ಅನುರೀತ್ ಸಿಂಗ್ ಮೂರು ವಿಕೆಟ್ ಕಿತ್ತರೆ, ಇರ್ಫಾನ್ ಪಠಾಣ್, ಪವನ್ ನೇಗಿ ಮತ್ತು ವಿನಯ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು. ಗುರಿ ಬೆನ್ನತ್ತಿದ ಭಾರತ 19.1 ಓವರ್ಗಳಲ್ಲಿ 5 ವಿಕೆಟ್ಗೆ 159 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಇದನ್ನೂ ಓದಿ Legends World Cup 2024 : ಪಾಕಿಸ್ತಾನ ತಂಡವನ್ನು ಸೋಲಿಸಿ ಲೆಜೆಂಡ್ಸ್ ವಿಶ್ವ ಕಪ್-2024 ಟ್ರೋಫಿ ಗೆದ್ದ ಭಾರತ
ಚೇಸಿಂಗ್ ವೇಳೆ ಭಾರತಕ್ಕೆ ರಾಯುಡು ಆಸರೆಯಾದರು. 30 ಎಸೆತ ಎದುರಿಸಿದ ಅಂಬಾಟಿ ರಾಯುಡು 50 ರನ್ ಗಳಿಸಿದರು. ಬಳಿಕ ಗುರುಕೀರತ್ ಮಾಣ್ 34 ರನ್, ಯೂಸುಫ್ ಪಠಾಣ್ 30 ರನ್ ಮಾಡಿದರು. ನಾಯಕ ಯುವರಾಜ್ ಅಜೇಯ 15 ರನ್ ಗಳಿಸಿದರು. ಅಂಬಾಟಿ ರಾಯುಡು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರೆ, ಯೂಸುಫ್ ಪಠಾಣ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.