ಡಬ್ಲಿನ್: ಬೆನ್ನು ನೋವಿನ ಸಮಸ್ಯೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಸುಮಾರು 11 ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ ಜಸ್ಪ್ರೀತ್ ಬುಮ್ರಾ(Jasprit Bumrah) ಅಪಾಯದಿಂದ ಪಾರಾಗಿದ್ದಾರೆ. ಶುಕ್ರವಾರ ನಡೆದ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಫಿಲ್ಡಿಂಗ್ ವೇಳೆ ಜಿಗಿಯಲು ಹೋಗಿ ಬುಮ್ರಾ ಸ್ವಲ್ಪದರಲ್ಲೇ ಗಾಯಗೊಳ್ಳುವುದರಿಂದ ಪಾರಾಗಿದ್ದಾರೆ. ಈ ವಿಡಿಯೊ ವೈರಲ್(Viral Video) ಆಗಿದೆ.
ಬೌಂಡರಿ ತಡೆಯುವ ಪ್ರಯತ್ನದಲ್ಲಿ ನಡೆದ ಘಟನೆ
ಈ ಘಟನೆ ನಡೆದಿದ್ದು ಭಾರತದ ಬೌಲಿಂಗ್ ಇನಿಂಗ್ಸ್ನ 14ನೇ ಓವರ್ನಲ್ಲಿ ವಾಷಿಂಗ್ಟನ್ ಸುಂದರ್ ಅವರ ಈ ಓವರ್ನಲ್ಲಿ ಐರ್ಲೆಂಡ್‌ನ ಕರ್ಟಿಸ್ ಕ್ಯಾಂಪ್‌ಫರ್ ಆಫ್ ಸೈಡ್ ಕಡೆಗೆ ಜೋರಾಗಿ ಬ್ಯಾಟ್ ಬೀಸಿದರು. ಬೌಂಡರಿಯನ್ನು ತಪ್ಪಿಸುವ ಸಲುವಾಗಿ ಬುಮ್ರಾ ಓಡಿದರು. ಅತ್ತ ಲಾಂಗ್ ಆನ್ನಲ್ಲಿ ಫಿಲ್ಡಿಂಗ್ ಮಾಡುತ್ತಿದ್ದ ರವಿ ಬಿಷ್ಣೋಯಿ ಕೂಡ ಚೆಂಡು ತಡೆಯಲು ಪ್ರಯತ್ನಿಸಿದರು. ಓಡಿ ಬಂದು ಡೈ ಹಾರಿದರು. ಇದೇ ವೇಳೆ ಮತ್ತೊಂದು ಕಡೆಯಿಂದ ಓಡಿ ಬರುತ್ತಿದ್ದ ಬುಮ್ರಾ ತಮ್ಮ ವೇಗವನ್ನು ನಿಯಂತ್ರಿಸಲು ಸಾದ್ಯವಾಗದೆ ಬಿಷ್ಣೊಯಿ ಅವರ ಮೇಲಿನಿಂದ ಹಾರಿ ಬೌಂಡರಿ ಲೈನ್ಗೆ ಅಡ್ಡಲಾಗಿಸಿರಿದ ಬೋರ್ಡ್ ಮೇಲೆ ಬಿದ್ದಿದ್ದಾರೆ. ಅದೃಷ್ಟವಶಾತ್ ಸಂಭವನೀಯ ಗಾಯದ ದುರಂತವೊಂದರಿಂದ ಪಾರಾದರು.
ಬುಮ್ರಾ ಮೇಲೆ ಬೆಟ್ಟದಷ್ಟು ನಿರೀಕ್ಷೆ
11 ತಿಂಗಳ ಬಳಿಕ ಕ್ರಿಕೆಟ್‌ಗೆ ಮರಳಿದ ಬುಮ್ರಾ ಮೇಲೆ ಏಷ್ಯಾ ಕಪ್ ಮತ್ತು ವಿಶ್ವಕಪ್ ದೃಷ್ಟಿಯಿಂದ ಬಿಸಿಸಿಐ ಮತ್ತು ಭಾರತ ತಂಡ ಬೆಟ್ಟದಷ್ಟು ನಿರೀಕ್ಷೆ ಇರಿಸಿದೆ. ಒಂದೊಮ್ಮೆ ಅವರು ಮತ್ತೆ ಗಾಯಗೊಂಡರೆ ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಕಲೇ ಅವರ ಅನುಪಸ್ಥಿತಿಯಲ್ಲಿ ಐಸಿಸಿ ಟೆಸ್ಟ್ ವಿಶ್ವಕಪ್ ಕಳೆದ ವರ್ಷ ನಡೆದ ಏಷ್ಯಾ ಕಪ್ ಮತ್ತು ತ20 ವಿಶ್ವಕಪ್ನಲ್ಲಿ ಭಾರತ ಸೋಲು ಕಂಡಿತ್ತು. ಅದೃಷ್ಟಕ್ಕೆ ಅವರು ಗಾಯಗೊಳ್ಳುವ ಅನಾಹುತದಿಂದ ಪಾರಾಗಿದ್ದಾರೆ.
ಘಾತಕ ಬೌಲಿಂಗ್
ಜಸ್ಪ್ರೀತ್ ಬುಮ್ರಾ ಹಲವು ದಿನಗಳ ಬಳಿಕ ಕ್ರಿಕೆಟ್‌ಗೆ ಮರಳಿದರೂ ತಮ್ಮ ಹಳೇಯ ಲಯದಲ್ಲೇ ಬೌಲಿಂಗ್ ನಡೆಸಿ ಗಮನ ಸೆಳೆದರು. ಇನಿಂಗ್ಸ್ನ ಮೊದಲ ಓವರ್ನಲ್ಲಿಯೇ ಐರ್ಲೆಂಡ್ಗೆ ಅವಳಿ ಆಘಾತವಿಕ್ಕಿದರು. ಮೊದಲ ಎಸೆತದಲ್ಲಿ ಬೌಂಡರಿ ಹೊಡೆಸಿಕೊಂಡಾಗ ಬುಮ್ರಾ ಬೌಲಿಂಗ್ ಫಾರ್ಮ್ ಕಳೆದುಕೊಂಡಿದ್ದಾರೆ ಎನ್ನುವ ಯೋಜನೆ ಅಭಿಮಾನಿಗಳಲ್ಲಿ ಮೂಡಿಸಿತು. ಆದರೆ ಮುಂದಿನ ಎಸೆತದಲ್ಲಿ ಬಾಲ್ಬಿರ್ನಿ (4) ಅವರನ್ನು ಬೌಲ್ಡ್ ಮಾಡಿ ಮಿಂಚಿದರು. ಇಲ್ಲಿಗೆ ನಿಲ್ಲದ ಅವರ ವಿಕೆಟ್ ಬೇಟೆ 5ನೇ ಎಸೆತದಲ್ಲಿ ಟ್ಯುಕರ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಈ ಮೂಲಕ ತಾನು ಇನ್ನೂ ಕೂಡ ಹಿಂದಿನ ಫಾರ್ಮ್ನಲ್ಲಿಯೇ ಇದ್ದೇನೆ ಎನ್ನುವ ಸ್ಪಷ್ಟ ಸಂದೇಶವೊಂದನ್ನು ನೀಡಿದರು.
ಇದನ್ನೂ ಓದಿ Jasprit Bumrah: ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ
ಪಂದ್ಯಶ್ರೇಷ್ಠ ಪ್ರಶಸ್ತಿ
ಡೆತ್ ಓವರ್‌ಗಳಲ್ಲೂ ಮಿಂಚಿದ ಬುಮ್ರಾ ಒಟ್ಟು 4 ಓವರ್ ಎಸೆದು 24 ರನ್ ನೀಡಿ 2 ವಿಕೆಟ್ ಕಬಳಿಸಿದರು. ಇದರಲ್ಲಿ 9 ಡಾಟ್ ಬಾಲ್‌ಗಳು ಸೇರಿವೆ. ಅವರ ಈ ಸಾಧನೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಕೂಡ ಒಲಿಯಿತು. ಮೊದಲ ಓವರ್‌ನಲ್ಲೇ 2 ವಿಕೆಟ್ ಹಾರಿಸುವ ಮೂಲಕ ಬುಮ್ರಾ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದರು. ಈ ಸಾಧನೆ ಮಾಡಿದ ಭಾರತದ 4ನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಆರ್. ಅಶ್ವಿನ್, ಭುವನೇಶ್ವರ್ ಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ಈ ಸಾಧನೆ ಮಾಡಿದ್ದರು.