Site icon Vistara News

ವಿರಾಟ್‌ ದರ್ಶನ, ಟಿ20 ಮಾದರಿಯಲ್ಲಿ ಮೊದಲ ಸೆಂಚುರಿ, ಇನ್ನೂ ಹಲವು ದಾಖಲೆಗಳನ್ನು ಸೃಷ್ಟಿಸಿದ ಕೊಹ್ಲಿ

virat

ದುಬೈ : ಟೀಮ್‌ ಇಂಡಿಯಾದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ೨ ವರ್ಷ, ೯ ತಿಂಗಳು ಹಾಗೂ ೧೬ ದಿನಗಳ ಶತಕದ ಬರ ನೀಗಿಸಿಕೊಂಡಿದ್ದಾರೆ. ಅಫಘಾನಿಸ್ತಾನ ವಿರುದ್ಧದ ಏಷ್ಯಾ ಕಪ್‌ ಪಂದ್ಯದಲ್ಲಿ ಅವರು ಅಜೇಯ ೧೨೨ ರನ್‌ಗಳನ್ನು ಬಾರಿಸಿದ್ದು, ಮೊಟ್ಟ ಮೊದಲ ಟಿ೨೦ ಶತಕವನ್ನು ಪೂರೈಸಿದ್ದಾರೆ. ಅಜೇಯ ೯೪ ರನ್‌ ಅವರ ಇದುವರೆಗಿನ ಟಿ೨೦ ವೈಯಕ್ತಿಕ ಗರಿಷ್ಠ ರನ್‌ ಅಗಿತ್ತು. ಈ ದಾಖಲೆಯೊಂದಿಗೆ ಅವರು ಸಂಪೂರ್ಣವಾಗಿ ಫಾರ್ಮ್‌ಗೆ ಮರಳಿದ್ದೇನೆ ಎಂಬ ಸಂದೇಶ ರವಾನಿಸಿದರು.

೨೦೧೯ರ ನವೆಂಬರ್‌ ೨೩ರಂದು ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಅವರು ಕೊಟ್ಟಕೊನೆಯ ಅಂತಾರಾಷ್ಟ್ರಿಯ ಶತಕ ಬಾರಿಸಿದ್ದರು. ಆ ವೇಳೆ ಅವರ ಶತಕಗಳ ಸಂಖ್ಯೆ ೭೦ ಆಗಿತ್ತು. ಅಲ್ಲಿಂದ 1020 ದಿನಗಳ ಕಾಲ ಶತಕ ಬಾರಿಸಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ನಾನಾ ರೀತಿಯಲ್ಲಿ ಟೀಕೆಗೊಳಪಟ್ಟಿದ್ದರು. ಇದೀಗ ಹಾಲಿ ಆವೃತ್ತಿಯ ಏಷ್ಯಾ ಕಪ್‌ನಲ್ಲಿ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಹಾಂಕಾಂಗ್‌ ವಿರುದ್ಧ ಅರ್ಧ ಶತಕ ಬಾರಿಸಿದ್ದ ಅವರು ಪಾಕಿಸ್ತಾನ ವಿರುದ್ಧವೂ ಅರ್ಧ ಶತಕದ ಸಾಧನೆ ಮಾಡಿದ್ದರು. ಇದೀಗ ಶತಕ ಬಾರಿಸುವ ಮೂಲಕ ಅಭಿಮಾನಿಗಳು “ಕಿಂಗ್ ಇಸ್‌ ಬ್ಯಾಕ್‌’ ಎಂದು ಹೇಳುವಂತೆ ಮಾಡಿದ್ದಾರೆ.

6೨ ಎಸೆತಗಳನ್ನು ಎದುರಿಸಿದ ವಿರಾಟ್‌ ಕೊಹ್ಲಿ ೧೨ ಫೋರ್‌ ಹಾಗೂ ೬ ಸಿಕ್ಸರ್‌ಗಳನ್ನ ಬಾರಿಸಿದರು. ಅವರ ಪ್ರತಿಯೊಂದು ಹೊಡೆತವೂ ನೈಜ ಕ್ರಿಕೆಟ್‌ ಹೊಡೆತಗಳಾಗಿದ್ದವು. ಅಂತೆಯೇ ೫೩ ಎಸೆತಗಳಲ್ಲಿ ಶತಕ ಬಾರಿಸಿದ ಅವರು ಜತೆಗೆ ಬ್ಯಾಟ್‌ ಎತ್ತಿ ಸಂಭ್ರಮಿಸಿದರು. ಸಿಕ್ಸರ್‌ ಎತ್ತುವ ಮೂಲಕ ಶತಕ ಸಾಧನೆ ಮಾಡಿದ ಅವರು ಬಳಿಕ ಬೀರಿದ ನಗು, ಇದುವರೆಗೆ ಅವರ ಸಾಮರ್ಥ್ಯ ಪ್ರಶ್ನಿಸಿದ್ದವರಿಗೆ ಉತ್ತರ ಕೊಟ್ಟಂತಿತ್ತು.

ಕಳೆದ ಎರಡು ವರ್ಷದಲ್ಲಿ ಸಾಕಷ್ಟು ಪಾಠ ಕಲಿತಿದ್ದೇನೆ. ಹೊಸ ಆವೃತ್ತಿಯ ವಿರಾಟ್‌ ಕೊಹ್ಲಿ ಟೀಮ್‌ ಇಂಡಿಯಾದ ಸೇವೆಗೆ ಸಜ್ಜಾಗಿದೆ ಎಂದು ಶತಕದ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದ ವಿರಾಟ್‌ ಕೊಹ್ಲಿ, ಮೊಟ್ಟ ಮೊದಲ ಟಿ೨೦ ಅಂತಾರಾಷ್ಟ್ರೀಯ ಶತಕವನ್ನು ಪತ್ನಿ ಅನುಷ್ಕಾ ಶರ್ಮ ಹಾಗೂ ಪುತ್ರಿ ವಾಮಿಕಾಗೆ ಅರ್ಪಿಸಿದ್ದಾರೆ.

೩,೫೦೦ ರನ್‌

ಈ ಶತಕದ ಜತೆಗೆ ವಿರಾಟ್ ಕೊಹ್ಲಿ ಟಿ೨೦ ಮಾದರಿಯಲ್ಲಿ ೩,೫೦೦ ರನ್‌ಗಳ ಗಡಿಯನ್ನು ದಾಟಿದರು. ೧೨೨ ರನ್‌ಗಳೊಂದಿಗೆ ಅವರು ಒಟ್ಟಾರೆಯಾಗಿ 3,584 ರನ್‌ ಬಾರಿಸಿದ್ದು, ೧೦೪ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಅವರು ಟಿ೨೦ ಮಾದರಿಯಲ್ಲಿ ಗರಿಷ್ಠ ರನ್‌ ಬಾರಿಸಿದ ವಿಶ್ವದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. 3,620 ರನ್‌ ಬಾರಿಸಿರುವ ರೋಹಿತ್‌ ಶರ್ಮ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

೧೦೦ ಸಿಕ್ಸರ್‌ಗಳು

ವಿರಾಟ್‌ ಕೊಹ್ಲಿ ಇದೇ ವೇಳೆ ಟಿ೨೦ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ೧೦೦ ಸಿಕ್ಸರ್‌ಗಳ ಗಡಿ ದಾಟಿದ ದಾಖಲೆಯನ್ನೂ ಮಾಡಿದರು. ಆಫ್ಘನ್ ವಿರುದ್ಧ ೨ ಸಿಕ್ಸರ್‌ ಬಾರಿಸಿದ ತಕ್ಷಣ ಅವರು ೧೦೦ರ ಗಡಿ ತಲುಪಿದ್ದು, ಇದೀಗ ೧೦೪ ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಗುರುವಾರದ ಪಂದ್ಯದಲ್ಲಿ ಅವರು ೬ ಸಿಕ್ಸರ್‌ ಬಾರಿಸಿದ್ದಾರೆ.

ಅಭಿನಂದನೆಗಳ ಮಹಾಪೂರ

ಫಾರ್ಮ್‌ಗೆ ಮರಳಿ ಶತಕ ಬಾರಿಸಿದ ವಿರಾಟ್‌ ಕೊಹ್ಲಿಗೆ ಕ್ರಿಕೆಟ್‌ ಕ್ಷೇತ್ರದ ಮಾಜಿ, ಹಾಲಿ ಆಟಗಾರರು ಶುಭಾಶಯ ತಿಳಿಸಿದ್ದಾರೆ. ಅದರಲ್ಲೂ ಆರ್‌ಸಿಬಿಯ ಗೆಳೆಯ ಎಬಿಡಿ ವಿಲಿಯರ್ಸ್‌ ಅವರು, ಕೊಹ್ಲಿ ಮತ್ತೆ ಡಾನ್ಸ್‌ ಮಾಡಲು ಶುರು ಮಾಡಿದ್ದಾರೆ ಎಂಬುದಾಗಿ ಬರೆದುಕೊಂಡಿದ್ದಾರೆ. ಫಾರ್ಮ್‌ ಎಂಬುದು ತಾತ್ಕಾಲಿಕ ಸಂಗತಿ, ಕ್ಲಾಸ್‌ ಕಾಯಂ ಎಂಬುದಾಗಿಯೂ ಹಲವು ಹಿರಿಯ ಕ್ರಿಕೆಟಿಗರು ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ | Asia Cup | ವಿರಾಟ್‌ ಕೊಹ್ಲಿ ದಾಖಲೆಯ ಶತಕ, ಅಫಘಾನಿಸ್ತಾನ ವಿರುದ್ಧ 212 ರನ್‌ ಬಾರಿಸಿದ ಭಾರತ ತಂಡ

Exit mobile version