ಮುಂಬಯಿ: ಭಾರತ ತಂಡದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ(Virat Kohli) ಅವರು ಮುಂಬೈನ ಅಲಿಬಾಗ್ನಲ್ಲಿ ಐಷಾರಾಮಿ ವಿಲ್ಲಾವೊಂದು(Alibaug home) ಹೊಂದಿರುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿದೆ. ಇದೀಗ ತನ್ನ ಕನಸಿನ ಹಾಲಿಡೇ ಹೌಸ್ನ(Virat Kohli Alibaug Home) ನಿರ್ಮಾಣ ಹಂತದಿಂದ ಹಿಡಿದು ಸಂಪೂರ್ಣಗೊಳ್ಳುವವರೆಗಿನ ಎಲ್ಲ ದೃಶ್ಯಗಳ ವಿಡಿಯೊವನ್ನು ಕೊಹ್ಲಿ ತಮ್ಮ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅರಮನೆಯಂತಿರುವ ಈ ವಿಲ್ಲಾವನ್ನು ನೋಡಲು ಎರಡು ಕಣ್ಣು ಸಾಲದು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಇಷ್ಟೊಂದು ದೊಡ್ಡ ಐಷಾರಾಮಿ ಮನೆಯ ಲಿವಿಂಗ್ ರೂಮ್ನಲ್ಲಿ ಟಿವಿ ಇಲ್ಲ ಎಂದರೆ ನಂಬುತ್ತೀರಾ? ನಂಬಲೇಬೇಕು. ಏಕೆಂದರೆ ಈ ಮನೆಯನ್ನು, ಪ್ರೀತಿಪಾತ್ರರ ಜತೆ ಕುಳಿತು ಮಾತನಾಡಲು, ತಮ್ಮ ಅಮೂಲ್ಯ ಕ್ಷಣಗಳನ್ನು ಕಳೆಯುವ ನಿಟ್ಟಿನಲ್ಲಿ ಕೊಹ್ಲಿ ಲಿವಿಂಗ್ ರೂಮ್ನಲ್ಲಿ ಟಿವಿಯನ್ನು ಇಟ್ಟಿಲ್ಲ.
“ನನ್ನ ಅಲಿಬಾಗ್ ಮನೆಯನ್ನು ನಿರ್ಮಿಸುವ ಪ್ರಯಾಣವು ತಡೆರಹಿತ ಅನುಭವವಾಗಿದೆ, ಮತ್ತು ಎಲ್ಲವನ್ನೂ ಒಟ್ಟಿಗೆ ನೋಡುವುದು ನಿಜವಾಗಿಯೂ ಸಂತೋಷಕರವಾಗಿದೆ. ನಮ್ಮ ಕನಸಿನ ಮನೆಯನ್ನು ನನಸಾಗಿಸಿದ ಆವಾಸ್ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು. ನನ್ನ ಪ್ರೀತಿಪಾತ್ರರೊಂದಿಗೆ ಇಲ್ಲಿ ಪ್ರತಿ ಕ್ಷಣವನ್ನು ಆನಂದಿಸಲು ಬಹಳ ಕಾತರವಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ(Anushka Sharma) 2022ರಲ್ಲಿ ಈ ಅಲಿಬಾಗ್ ಪ್ರದೇಶದಲ್ಲಿ 8 ಎಕರೆ ಜಾಗವನ್ನು ಖರೀದಿಸಿ, ಮನೆ ನಿರ್ಮಿಸಲು ಯೋಚಿಸಿದ್ದರು. ಈ 8 ಎಕರೆ ಜಾಗಕ್ಕೆ ವಿರುಷ್ಕಾ ದಂಪತಿ ಬರೋಬ್ಬರಿ 19 ಕೋಟಿ ರೂ. ನೀಡಿದರು. ಈ 8 ಎಕರೆ ಜಾಗದಲ್ಲಿ ಮನೆ, ಉದ್ಯಾನ, ಈಜುಕೊಳ ಹೀಗೆ ನಾನಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅಲ್ಲದೆ, 13 ಕೋಟಿ ರೂ.ಗಳಲ್ಲಿ ಐಷಾರಾಮಿ ಮನೆಯನ್ನು ಕೊಹ್ಲಿ ಮತ್ತು ಅನುಷ್ಕಾ ಅವರ ಅಭಿರುಚಿಗೆ ತಕ್ಕಂತೆ ನಿರ್ಮಿಸಲಾಗಿದೆ. ಅಲಿಬಾಗ್ ಮುಂಬೈನ ಅತ್ಯಂತ ದುಬಾರಿ ಪ್ರದೇಶವಾಗಿದೆ. ಸಮುದ್ರಕ್ಕೆ ಸಮೀಪವಿರುವ ಕಾರಣ ಇಲ್ಲಿ ವಾಸಿಸಲು ಅನೇಕ ಸೆಲೆಬ್ರಿಟಿಗಳು ಮತ್ತು ದೊಡ್ಡ ಉದ್ಯಮಿಗಳು ಆಸಕ್ತಿ ಹೊಂದಿದ್ದಾರೆ. ಅಮಿತಾ ಬಚ್ಚನ್ ಕೂಡ ಇಲ್ಲಿ ಹಾಲಿಡೇ ಹೌಸ್ ಹೊಂದಿದ್ದಾರೆ.
ಇದನ್ನೂ ಓದಿ IND vs SL: ಶ್ರೀಲಂಕಾ ವಿರುದ್ಧದ ಸರಣಿಗೆ ರೋಹಿತ್-ಕೊಹ್ಲಿಗೆ ವಿಶ್ರಾಂತಿ
ಲಂಡನ್ಗೆ ಶಿಫ್ಟ್ ಆಗಲಿದ್ದಾರಾ ಕೊಹ್ಲಿ?
ವಿರಾಟ್ ಕೊಹ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಭಾರತ ತೊರೆದು ಕುಟುಂಬ ಸಮೇತರಾಗಿ ಲಂಡನ್ನಲ್ಲಿ ನೆಲೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಟಿ20 ವಿಶ್ವಕಪ್ ಗೆದ್ದು ಭಾರತಕ್ಕೆ ಬಂದ ದಿನವೇ ಕೊಹ್ಲಿ ಮುಂಬೈನಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮ ಮುಗಿಸಿ ರಾತ್ರೋರಾತ್ರಿ ಲಂಡನ್ಗೆ ವಿಮಾನ ಏರಿದ್ದರು. ಹೀಗಾಗಿ ಕೆಲ ನೆಟ್ಟಿಗರುವ ಕೊಹ್ಲಿ ಇನ್ನು ಮುಂದೆ ಲಂಡನ್ನಲ್ಲಿಯೇ ವಾಸಿಸುವ ಸಾಧ್ಯತೆ ಇದೆ ಎಂದಿದ್ದರು. ಬಾಲಿವುಡ್ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಿಂದಲೂ ಅನುಷ್ಕಾ ಶರ್ಮಾ ದೂರ ಉಳಿದಿರುವುದು ಕೂಡ ಊಹಾಪೋಹಗಳಿಗೆ ಕಾರಣವಾಗಿದೆ.
ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಅನುಷ್ಕಾ ಮತ್ತು ವಿರಾಟ್ ಯುಕೆ ಮೂಲದ ಕಂಪನಿಯ ನಿರ್ದೇಶಕರಾಗಿದ್ದಾರೆ. ಯುಕೆ ಸರ್ಕಾರದ ಫೈಂಡ್ ಅಂಡ್ ಅಪ್ಡೇಟ್ ಕಂಪನಿಯ ಮಾಹಿತಿ ಸೇವೆಯ ಪ್ರಕಾರ, ದಂಪತಿಗಳು ಮ್ಯಾಜಿಕ್ ಲ್ಯಾಂಪ್ನ ಮೂವರು ನಿರ್ದೇಶಕರಲ್ಲಿ ಇಬ್ಬರು. ಇದು ಆಗಸ್ಟ್ 1, 2022 ರಂದು ಆರಂಭಗೊಂಡ ಸಲಹಾ ಸಂಸ್ಥೆಯಾಗಿದೆ. ಕಂಪನಿಯ ಅಧಿಕೃತ ಕಚೇರಿ ವಿಳಾಸವು ಯುಕೆಯ ವೆಸ್ಟ್ ಯಾರ್ಕ್ಶೈರ್ನಲ್ಲಿದೆ.