ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ 43 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯದ ಬಳಿಕ ವಿರಾಟ್ ಕೊಹ್ಲಿ, ಲಕ್ನೊ ತಂಡದ ಮೆಂಟರ್ ಗೌತಮ್ ಗಂಭೀರ್ ಹಾಗೂ ಬೌಲರ್ ನವಿನ್ ಉಲ್ ಹಕ್ ಜತೆ ಜಗಳವಾಡಿದ್ದರು. ಈ ವಿಷಯ ದೊಡ್ಡ ಮಟ್ಟಿಗೆ ಚರ್ಚೆಗೆ ಕಾರಣವಾಗಿದೆ. ಘಟನೆ ನಡೆದು ಐದು ದಿನಗಳ ನಂತರ, ಕೊಹ್ಲಿ ಬಿಸಿಸಿಐ ಅಧಿಕಾರಿಗಳಿಗೆ ಪತ್ರ ಬರೆದು ಪರಿಸ್ಥಿತಿಯನ್ನು ವಿವರಿಸಿದ್ದಾರೆ ಎಂದು ದೈನಿಕ್ ಜಾಗರಣ್ ವರದಿ ಮಾಡಿದೆ.
ಮೈದಾನದಲ್ಲಿ ವಾಗ್ಹುದ್ಧ ನಡೆಸಿದ ಕಾರಣಕ್ಕೆ ವಿರಾಟ್ ಕೊಹ್ಲಿಗೆ ಪಂದ್ಯದ ಸಂಭಾವನೆಯ ಶೇಕಡಾ 100ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗಿತ್ತು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕೊಹ್ಲಿ ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದೆ. ಗೌತಮ್ ಗಂಭೀರ್ ಹಾಗೂ ನವಿನ್ ಉಲ್ ಹಕ್ಗೂ ಈ ವಿವಾದದಲ್ಲಿ ಶೇಕಡಾ 100ರಷ್ಟು ದಂಡ ವಿಧಿಸಲಾಗಿತ್ತು.
ಅಮಿತ್ ಮಿಶ್ರಾ, ಕೈಲ್ ಮೇಯರ್ಸ್ ಮತ್ತು ನವೀನ್-ಉಲ್-ಹಕ್ ವಿರುದ್ಧ ರೇಗಾಡಿರುವುದೇ ವಿರಾಟ್ ಕೊಹ್ಲಿಗೆ ದಂಡ ವಿಧಿಸಲು ಕಾರಣ ಎನ್ನಲಾಗಿದೆ. ರನ್ ಚೇಸಿಂಗ್ ವೇಳೆ ಆರ್ಸಿಬಿ ಬೌಲರ್ ಮೊಹಮ್ಮದ್ ಸಿರಾಜ್ ನಿರಂತರವಾಗಿ ಬೌನ್ಸರ್ಗಳನ್ನು ಎಸೆದಿದ್ದರು. ಅಲ್ಲದೆ, ವೇಗಿ ನವಿನ್ ಉಲ್ ಹಕ್ ಕ್ರೀಸ್ನಲ್ಲಿ ಇದ್ದ ಹೊರತಾಗಿಯೂ ಸಿರಾಜ್ ಚೆಂಡನ್ನು ವಿಕೆಟ್ ಮೇಲೆ ಎಸೆದಿದ್ದರು. ಈ ರೀತಿ ಮಾಡುವಂತೆ ಕೊಹ್ಲಿ ಹೇಳಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಅದನ್ನು ಕೊಹ್ಲಿ ನಿರಾಕರಿಸಿದ್ದಾರೆ. ನಾನು ಬೌನ್ಸರ್ ಎಸೆಯಲು ಮಾತ್ರ ಹೇಳಿದ್ದೆ ಎಂಬುದಾಗಿ ಅವರು ಪತ್ರದಲ್ಲಿ ಕೊಹ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : Virat Kohli : ವಿರಾಟ್ ಕೊಹ್ಲಿ ಎಂದು ಕೂಗಿದ ಅಭಿಮಾನಿಯನ್ನು ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿದ ಗಂಭೀರ್
ಭಾರತದ ಸ್ಟಾರ್ ಬ್ಯಾಟರ್ ಜತೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ನವಿನ್ ಉಲ್ ಹಕ್ಗೆ ಪಂದ್ಯದ ಸಂಭಾವನೆಯ ಶೇ. 100ರಷ್ಟು ದಂಡ ವಿಧಿಸಲಾಗಿದೆ. ಈ ಘಟನೆಯ ಕುರಿತೂ ಕೊಹ್ಲಿ ವಿವರಣೆ ನೀಡಿದ್ದಾರೆ ಎನ್ನಲಾಗಿದೆ. ಘಟನೆಯ ನಂತರವೂ, ಎಲ್ಎಸ್ಜಿ ನಾಯಕ ಕೆಎಲ್ ರಾಹುಲ್ ಕೊಹ್ಲಿಯೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ನಿಯಂತ್ರಿಸಿದ್ದರು. ಕೊಹ್ಲಿ ಜತೆ ಸಂಧಾನ ನಡೆಸುವಂತೆಯೂ ನವಿನ್ಗೆ ಹೇಳಿದ್ದರು. ಆದರೆ, ನವಿನ್ ಅದನ್ನು ತಿರಸ್ಕರಿಸಿದ್ದರು.
ಮೈದಾನದಲ್ಲಿ ಗಲಾಟೆ ಮಾಡಿದ ಕೊಹ್ಲಿ, ಗಂಭೀರ್ಗೆ ಅಮಾನತು ಶಿಕ್ಷೆ ವಿಧಿಸಲು ಗವಾಸ್ಕರ್ ಸಲಹೆ
ಐಪಿಎಲ್ (IPL 2023) ಪಂದ್ಯದ ವೇಳೆ ಮೈದಾನದಲ್ಲೇ ಕಿತ್ತಾಡಿಕೊಂಡಿರುವ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿಗೆ ದಂಡ ವಿಧಿಸುವ ಮೂಲಕ ಪ್ರಕರಣವನ್ನು ಮುಗಿಸಬಾರದು. ಅವರಿಬ್ಬರನ್ನು ಟೂರ್ನಿಯಿಂದ ಅಮಾನತು ಮಾಡಬೇಕು ಎಂದು ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಹೇಳಿದ್ದಾರೆ. ಆರ್ಸಿಬಿ ಹಾಊ ಲಕ್ನೊ ಸೂಪರ್ ಜಯಂಟ್ಸ್ ನಡುವಿನ ಪಂದ್ಯದ ಬಳಿಕ ಗಂಭೀರ್ ಹಾಗೂ ಕೊಹ್ಲಿ ಪರಸ್ಪರ ವಾಗ್ಯುದ್ಧ ನಡೆಸಿದ್ದರು. ಆ ಬಳಿಕ ಐಪಿಎಲ್ ಆಡಳಿತ ಮಂಡಳಿ ಕೊಹ್ಲಿಗೆ 1.07 ಕೋಟಿ ರೂಪಾಯಿ ಹಾಗೂ ಗಂಭೀರ್ಗೆ 25 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಆದರೆ, ಗವಾಸ್ಕರ್ ಪ್ರಕಾರ ದಂಡ ವಿಧಿಸಬಾರದಿತ್ತು. ಅಮಾನತು ಶಿಕ್ಷೆ ವಿಧಿಸಬೇಕಾಗಿತ್ತು ಎಂದು ಗವಾಸ್ಕರ್ ಹೇಳಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜತೆ ಮಾತನಾಡಿದ ಅವರು, ಟೂರ್ನಿಯ ವೇಳೆ ಏನಾದರೂ ಒಂದು ಘಟನೆ ಸಂಭವಿಸಿದರೆ ಅದು ಮತ್ತೆ ಮರುಕಳಿಸಬಾರದು. 10 ವರ್ಷದ ಹಿಂದೆ ಹರ್ಭಜನ್ ಸಿಂಗ್ ಶ್ರೀಶಾಂತ್ ಅವರ ಕಪಾಳಕ್ಕೆ ಹೊಡೆದ ಪ್ರಕರಣದಲ್ಲಿ ಅವರಿಬ್ಬರನ್ನು ಎರಡೆರಡು ಪಂದ್ಯಗಳಿಂದ ಹೊರಕ್ಕೆ ಕೂರಿಸಲಾಗಿತ್ತು. ಈ ಮೂಲಕ ಮುಂದೆ ಇಂಥ ಘಟನೆಗಳು ನಡೆಯಲೇಬಾರದು ಎಂಬ ಸೂಚನೆ ಕೊಟ್ಟಿತ್ತು ಐಪಿಎಲ್. ಅದೇ ಮಾದರಿಯ ಶಿಕ್ಕೆಯನ್ನು ಇಲ್ಲೂ ವಿಧಿಸಬೇಕಾಗಿತ್ತು ಎಂದು ಗವಾಸ್ಕರ್ ಹೇಳಿದ್ದಾರೆ.
ಪಂದ್ಯದ ಶುಲ್ಕದಲ್ಲಿ ಶೇಕಡ ಕಡಿತ ಮಾಡುವುದರಿಂದ ಏನು ಪ್ರಯೋಜನ . ಅದು ಕೋಟಿಗಳ ಲೆಕ್ಕದಲ್ಲಿ ಮಾತ್ರ ಸರಿಯಾಗಿದೆ. ಅದೆಷ್ಟು ಎಂಬುದನ್ನು ನಿರ್ಧಾರ ಮಾಡುವುದಕ್ಕೆ ಸಾಧ್ಯವಿಲ್ಲ. ಅದೊಂದು ದೊಡ್ಡ ಮೊತ್ತ ಎಂದು ಅನಿಸದು. ಹೀಗಾಗಿ ಪಂದ್ಯದ ನಿಷೇಧವೇ ಸರಿಯಾದ ದಂಡ ಎಂದು ಹೇಳಿದರು.
ಮುಂದುವರಿದ ಅವರು ಇಂಥದ್ದೆಲ್ಲ ದೊಡ್ಡ ಸಂಗತಿ ಎನಿಸುವುದು ಟಿವಿಗಳಕಾರಣಕ್ಕೆ. ಹೆಚ್ಚು ಜನ ನೋಡಿದ್ದಾರೆ. ಹಾಗೆಯೇ ಅದು ದೊಡ್ಡ ವಿಷಯ ಎನಿಸಿದೆ ಎಂದು ಅವರು ಹೇಳಿದ್ದಾರೆ.