Site icon Vistara News

IND vs PAK | ಒಂದು ದಿನ ಮೊದಲೇ ಭಾರತೀಯರಿಗೆ ದೀಪಾವಳಿ ಉಡುಗೊರೆ ಕೊಟ್ಟ ವಿರಾಟ್‌ ಕೊಹ್ಲಿ

ಮೆಲ್ಬೋರ್ನ್‌ : ವಿರಾಟ್‌ ಕೊಹ್ಲಿ (೮೨*) ಅಜೇಯ ಅರ್ಧ ಶತಕ ಮತ್ತು ಹಾರ್ದಿಕ್ ಪಾಂಡ್ಯ (೪೦ ) ಅವರ ಸಮಯೋಚಿತ ಆಟದ ನೆರವು ಪಡೆದ ಭಾರತ ತಂಡ, ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ವಿರುದ್ಧದ ಟಿ೨೦ ವಿಶ್ವ ಕಪ್‌ ಪಂದ್ಯದಲ್ಲಿ ೪ ವಿಕೆಟ್‌ಗಳಿಂದ ಜಯ ಸಾಧಿಸಿತು. ಕೊನೇ ಕ್ಷಣದ ತನಕ ಹೋರಾಟ ನಡೆಸಿ ಭಾರತವನ್ನು ಗೆಲ್ಲಿಸಿದ ವಿರಾಟ್‌ ಕೊಹ್ಲಿ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಒಂದು ದಿನ ಮೊದಲೇ ಉಡುಗೊರೆ ಕೊಟ್ಟರು.

ಈ ಗೆಲುವಿನೊಂದಿಗೆ ಭಾರತ ತಂಡ ಕಳೆದ ವರ್ಷ ನಡೆದ ಟಿ೨೦ ವಿಶ್ವ ಕಪ್‌ ಸೋಲಿಗೆ ಹಾಗೂ ಇತ್ತೀಚೆಗೆ ನಡೆದ ಏಷ್ಯಾ ಕಪ್‌ನ ಸೂಪರ್‌-೧೨ ಹಂತದ ಪರಾಜಯಕ್ಕೆ ಸೇಡು ತೀರಿಸಿಕೊಂಡಿತು. ಅದೇ ರೀತಿ ಹಾಲಿ ವಿಶ್ವ ಕಪ್‌ನಲ್ಲಿ ಶುಭಾರಂಭವನ್ನೂ ಮಾಡಿತು.

ಮೆಲ್ಬೋರ್ನ್‌ ಕ್ರಿಕೆಟ್‌ ಸ್ಟೇಡಿಯಮ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮ ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ತಂಡ ನಿಗದಿತ ೨೦ ಓವರ್‌ಗಳಲ್ಲಿ ೮ ವಿಕೆಟ್‌ ನಷ್ಟಕ್ಕೆ ೧೫೯ ರನ್‌ ಬಾರಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಭಾರತ ತಂಡ ತನ್ನ ಪಾಲಿನ ಓವರ್‌ಗಳು ಮುಕ್ತಾಯಗೊಂಡಾಗ ೬ ವಿಕೆಟ್‌ ನಷ್ಟಕ್ಕೆ ೧೬೦ ರನ್‌ ಬಾರಿಸಿ ಜಯ ಕಂಡಿತು.

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಆರಂಭಿಕ ಬ್ಯಾಟರ್‌ಗಳ ವೈಫಲ್ಯದಿಂದ ೩೧ ರನ್‌ಗಳಿಗೆ ೪ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಈ ವೇಳೆ ಆಡಲು ಬಂದ ವಿರಾಟ್ ಕೊಹ್ಲಿ ಏಕಾಂಗಿಯಾಗಿ ಹೋರಾಟ ಸಂಘಟಿಸಿದರು. ಕೊನೇ ತನಕ ಕ್ರೀಸ್ ಕಾಯ್ದಕೊಂಡ ಅವರು ತಂಡವನ್ನು ಗೆಲ್ಲಿಸಿ, ತಾವು “ಕಿಂಗ್‌’ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಅವರಿಗೆ ಉತ್ತಮ ರೀತಿಯಲ್ಲಿ ನೆರವು ಕೊಟ್ಟ ಹಾರ್ದಿಕ್ ಪಾಂಡ್ಯ ಕೂಡ ೩೭ ಎಸೆತಗಳಿಗೆ ೪೦ ರನ್‌ ಬಾರಿಸಿ ತಂಡದ ಗೆಲುವಿನಲ್ಲಿ ಪಾತ್ರ ವಹಿಸಿದರು. ಈ ಜೋಡಿ ಐದನೇ ವಿಕೆಟ್‌ಗೆ ೧೧೩ ರನ್‌ಗಳ ಜತೆಯಾಟ ನೀಡಿತು.

ರೋಹಿತ್‌, ರಾಹುಲ್‌ ಫೇಲ್‌

ಸಾಧಾರಣ ಮೊತ್ತವನ್ನು ಪೇರಿಸಲು ಮುಂದಾದ ಭಾರತಕ್ಕೆ ಆರಂಭಿಕ ಬ್ಯಾಟರ್‌ಗಳಾದ ರೋಹಿತ್‌ ಶರ್ಮ (೪) ಹಾಗೂ ಕೆ. ಎಲ್‌ ರಾಹುಲ್‌ (೪) ಕೈಕೊಟ್ಟರು. ಜತೆಗೆ ಸೂರ್ಯಕುಮಾರ್‌ ಯಾದವ್‌ (೧೫) ಸಿಡಿಯುವ ಸೂಚನೆ ಕೊಟ್ಟರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಮುಂಬಡ್ತಿ ಪಡೆದುಕೊಂಡು ಬಂದ ಅಕ್ಷರ್ ಪಟೇಲ್‌ (೨) ಕೂಡ ಅನಗತ್ಯ ರನ್‌ಔಟ್‌ಗೆ ಬಲಿಯಾದರು.

ಭುವಿ-ಅರ್ಶ್‌ದೀಪ್‌ ಸೂಪರ್‌ ಪ್ರದರ್ಶನ

ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ತಂಡಕ್ಕೆ ಭಾರತದ ಬೌಲರ್‌ಗಳು ಕಾಡಿದರು. ಭುವನೇಶ್ವರ್‌ ಕುಮಾರ್‌, ಎಂದಿನಂತೆ ತಮ್ಮ ಇನ್‌ಸ್ವಿಂಗ್‌ ಮತ್ತು ಔಟ್‌ ಸ್ವಿಂಗ್‌ ಮ್ಯಾಜಿಕ್‌ ಮೂಲಕ ಪಾಕ್‌ ಓಪನರ್‌ಗಳ ಏಕಾಗ್ರತೆ ಭಂಗ ಉಂಟುಮಾಡಿದರು. ಅವರ ಮೊದಲ ಓವರ್‌ನಲ್ಲಿ ವೈಡ್‌ ರೂಪದಲ್ಲಿ ಪಾಕ್‌ ಒಂದು ರನ್‌ ಗಳಿಸಿತು. ಆದರೆ ದ್ವಿತೀಯ ಓವರ್‌ ಎಸೆದ ಅರ್ಶ್‌ದೀಪ್‌ ಸಿಂಗ್‌ ತಮ್ಮ ಮೊದಲ ಎಸೆತದಲ್ಲೇ ಪಾಕಿಸ್ತಾನ ತಂಡದ ನಾಯಕ ಬಾಬರ್‌ ಅಜಂ (0) ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು.

ಬಾಬರ್‌ ಗೋಲ್ಡನ್‌ ಡಕ್‌ ಆಗುತ್ತಿದ್ದಂತೆಯೇ ಒತ್ತಡಕ್ಕೆ ಸಿಲುಕಿದ್ದ ಮತ್ತೊಬ್ಬ ಓಪನರ್‌ ಮೊಹಮ್ಮದ್‌ ರಿಜ್ವಾನ್‌ (4), ಕೂಡ ಅರ್ಶ್‌ದೀಪ್‌ ಸಿಂಗ್‌ ಅವರ ಶಾರ್ಟ್‌ ಪಿಚ್‌ ಎಸೆತವನ್ನು ಪುಲ್‌ ಮಾಡುವ ಪ್ರಯತ್ನದಲ್ಲಿ ವಿಕೆಟ್‌ ಕೈಚೆಲ್ಲಿದರು. 15 ರನ್‌ಗಳಿಗೆ ಪಾಕಿಸ್ತಾನದ ಇಬ್ಬರೂ ಓಪನರ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿದ ಭಾರತ ತಂಡ ಉತ್ತಮ ಆರಂಭ ಪಡೆಯಿತು.

ಮಸೂದ್‌-ಇಫ್ತಿಕಾರ್‌ ಹೋರಾಟ

ಪಾಕಿಸ್ತಾನ ಆರಂಭಿಕ ಆಘಾತ ಕಂಡರೂ ಇಫ್ತಿಕಾರ್‌ ಮತ್ತು ಶಾನ್‌ ಮಸೂದ್‌ (೫೨*) ಎಚ್ಚರಿಕೆಯ ಆಟವಾಡಿ ಅಜೇಯ ಅರ್ಧಶತಕ ಸಿಡಿಸಿದರು. ಇಫ್ತಿಕಾರ್‌ 34 ಎಸೆತದಲ್ಲಿ 2 ಬೌಂಡರಿ ಜತೆ 4 ಸಿಕ್ಸರ್‌ ಸಿಡಿಸಿ 51 ರನ್ ಗಳಿಸಿದರು. ಉಳಿದಂತೆ ಮೊಹಮ್ಮದ್ ನವಾಜ್ 9 ರನ್, ಆಸಿಫ್ ಅಲಿ 2 ರನ್ ಮತ್ತು ಶಾಹೀನ್ ಅಫ್ರಿದಿ 16 ರನ್ ಗಳಿಸಿದರು.

ಸ್ಕೋರ್ ವಿವರ:

ಪಾಕಿಸ್ತಾನ: ೨೦ ಓವರ್‌ಗಳಲ್ಲಿ 8 ವಿಕೆಟ್‌ಗೆ ೧೫೯ (ಶಾನ್‌ ಮಸೂದ್‌ ೫೨*, ಇಫ್ತಿಕಾರ್‌ ಅಹಮದ್‌ ೫೧, ಅರ್ಶ್‌ದೀಪ್‌ ಸಿಂಗ್‌ ೩೨ಕ್ಕೆ೩, ಹಾರ್ದಿಕ್‌ ಪಾಂಡ್ಯ ೩೦ಕ್ಕೆ೩).

ಭಾರತ: ೨೦ ಓವರ್‌ಗಳಲ್ಲಿ ೬ ವಿಕೆಟ್‌ಗೆ ೧೬೦ ( ವಿರಾಟ್‌ ಕೊಹ್ಲಿ ೮೨*, ಹಾರ್ದಿಕ್ ಪಾಂಡ್ಯ ೪೦; ಹ್ಯಾರಿಸ್‌ ರವೂಫ್‌ ೩೬ಕ್ಕೆ೨).

Exit mobile version