ಬೆಂಗಳೂರು: ಮೈದಾನದ ಹೊರಗೆ ಹಾಗೂ ಒಳಗೆ ಅಭಿಮಾನಿಗಲ ಪಾಲಿನ ನೆಚ್ಚಿನ ಕ್ರಿಕೆಟಿಗ. ಅವರು ಎಲ್ಲೇ ಇದ್ದರೂ ಟಾಕ್ ಆಫ್ ದಿ ಟೌನ್ ಎನಿಸಿಕೊಳ್ಳುತ್ತಾರೆ. ಅವರು ಕ್ರಿಕೆಟ್ ಆಡುವಾಗ, ಪತ್ನಿಯೊಂದಿಗೆ ಪ್ರವಾಸದಲ್ಲಿದ್ದಾಗ, ಜಾಹೀರಾತು ಕಾರ್ಯಕ್ರಮಗಳಲ್ಲಿದ್ದಾಗ ಅವರಾಡುವ ಪ್ರತಿಯೊಂದು ಮಾತುಗಳಿಗೂ ಅಭಿಮಾನಿಗಳು ತಲೆದೂಗುತ್ತಾರೆ. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ ಏಷ್ಯಾದಲ್ಲಿಯೇ ಅತಿ ಹೆಚ್ಚು ಇನ್ಸ್ಟಾಗ್ರಾಮ್ ಫಾಲೋಯರ್ಗಳನ್ನು ಹೊಂದಿರುವ ಆಟಗಾರ ಎನಿಸಿದ್ದು. ಕೆಲವು ದಿನಗಳ ಹಿಂದೆ ಅವರ ಪಾಲೋಯರ್ಗಳ ಸಂಖ್ಯೆ 25 ಕೋಟಿ ದಾಟಿದೆ. ಈ ಮೂಲಕ ಇಷ್ಟೊಂದು ಅಭಿಮಾನಿಗಳನ್ನು ಹೊಂದಿರುವ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವೆಲ್ಲದರ ನಡುವೆ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಅವರು ಪೂಮಾ ಕಂಪನಿಯ ಕಾರ್ಯಕ್ರಮದಲ್ಲಿ ಪರಸ್ಪರ ತಮಾಷೆಗಾಗಿ ಜಗಳವಾಡಿದ್ದು ಸುದ್ದಿಯಾಗಿದೆ. ಈ ವಿಡಿಯೊ ಎಲ್ಲೆಡೆ ವೈರಲ್ ಆಗಿದೆ.
ಸ್ಟಾರ್ ದಂಪತಿ ಕಳೆದ ತಿಂಗಳು ಪೂಮಾದ ‘ಲೆಟ್ ಥೆರ್ ಬಿ ಸ್ಪೋರ್ಟ್ಸ್’ ಅಭಿಯಾನದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ತಮ್ಮ ಅಭಿಮಾನಿಗಳೊಂದಿಗೆ ಚಿಟ್ಚಾಟ್ ನಡೆಸಿದರು. ಕೆಲವೊಂದು ವಿನೋದಗಳಲ್ಲೂ ಪಾಲ್ಗೊಂಡರು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಹಿಟ್ ಆಗಿದೆ. ಅಭಿಮಾನಿಗಳು ಅವುಗಳನ್ನು ಉತ್ಸಾಹದಿಂದ ಹಂಚಿಕೊಳ್ಳುತ್ತಿದ್ದಾರೆ. ವೀಡಿಯೊದಲ್ಲಿ ಅನುಷ್ಕಾ ಶರ್ಮಾ ಅವರು ವಿರಾಟ್ ಕೊಹ್ಲಿ ಮೈದಾನದಲ್ಲಿ ಯಾವ ರೀತಿ ಆಕ್ರಮಣಕಾರಿ ಭಾವ ತೋರುತ್ತಾರೆ ಎಂದು ಗೇಲಿ ಮಾಡಿದ್ದಾರೆ. ವಿರಾಟ್ ಕೊಹ್ಲಿ ಎದುರಾಳಿ ತಂಡದ ವಿಕೆಟ್ ಪತನಗೊಂಡಾಗ ಬೌಲರ್ಗಿಂತ ಹೆಚ್ಚು ಸಂಭ್ರಮಿಸುತ್ತಾರೆ ಎಂಬುದಾಗಿಯೂ ಅನುಷ್ಕಾ ಹೇಳುತ್ತಾರೆ.
Fun moments between Virat Kohli and Anushka Sharma.
— Mufaddal Vohra (@mufaddal_vohra) May 27, 2023
Anushka imitating Virat's celebration was the best! pic.twitter.com/e3ono4oXlG
ಏಪ್ರಿಲ್ 23, 2023 ರಂದು ಬೆಂಗಳೂರಿನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದರು. ಇಂಥ ಸಂದರ್ಭವನ್ನು ವಿರಾಟ್ ಕೊಹ್ಲಿ ಪಂದ್ಯದ ನಡುವೆ ಸ್ಲೆಜಿಂಗ್ ಮಾಡಲೂ ವಿರಾಟ್ ಕೊಹ್ಲಿ ಯಾವ ರೀತಿ ಬಳಸುತ್ತಾರೆ ಎಂಬುದನ್ನೂ ಅನುಷ್ಕಾ ಶರ್ಮಾ ತೋರಿಸಿದ್ದಾರೆ.
“ಆಜ್ ತೋ ರನ್ ಬನಾ ಲೇ ಕೊಹ್ಲಿ (ಇಂದು ಏಪ್ರಿಲ್ 24, ಕನಿಷ್ಠ ಅಷ್ಟಾದೂ ರನ್ ಗಳಿಸು ಕೊಹ್ಲಿ) ಎಂದು ಅನುಷ್ಕಾ ಸ್ಲೆಜ್ ಮಾಡುತ್ತಾರೆ. ಆದರೆ ಇದಕ್ಕೆ ವಿರಾಟ್ ಕೂಡ ಪ್ರತ್ಯುತ್ತರ ನೀಡುತ್ತಾರೆ. ಕಳೆದ ಮೂರು ತಿಂಗಳಿಂದ ಆಡಿರುವ ಪಂದ್ಯಗಳಿಗಿಂತ ಹೆಚ್ಚು ನಾನು ಆಡಿದ್ದೇನೆ ಎಂದು ಹೇಳುತ್ತಾರೆ. (ಅನುಷ್ಕಾ ಶರ್ಮಾ ಅವರು ಭಾರತ ಮಹಿಳೆಯರ ತಂಡದ ಮಾಜಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರ ಜೀವನ ಕತೆಯನ್ನು ಆಧರಿಸಿದ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರು. ಅದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಆಡಿದ್ದೇನೆ ಎಂಬುದೇ ವಿರಾಟ್ ಕೊಹ್ಲಿಯ ಮಾತಿನ ಅರ್ಥ.
ಇದನ್ನೂ ಓದಿ : IPL 2023: ತಂಡವನ್ನು ಸೋಲಿಸಿದರೂ ಎದುರಾಳಿ ತಂಡದ ಆಟಗಾರನಿಗೆ ಜೆರ್ಸಿ ನೀಡಿ ಗೌರವಿಸಿದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಹಾಲಿ ಐಪಿಎಲ್ ಋತುವಿನ ಒಂದೆರಡು ವೈಫಲ್ಯಗಳನ್ನು ಕಂಡಿದ್ದರೂ, ಉಳಿದಂತೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಟಿ20 ಮಾದರಿಯ ಅದ್ಭುತ ಫಾರ್ಮ್ನಲ್ಲಿದ್ದಾರೆ ಅವರು. ಐಪಿಎಲ್ನ 14 ಇನಿಂಗ್ಸ್ಗಳಲ್ಲಿ 53ರ ಸರಾಸರಿಯಂತೆ ಮತ್ತು 140 ಸ್ಟ್ರೈಕ್ರೇಟ್ನಲ್ಲಿ 639 ರನ್ ಗಳಿಸಿದ್ದಾರೆ. ಅವರು ಈ ಋತುವಿನ ಲೀಗ್ನ ಹಂತದಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೆಯವರು. ಆರ್ಸಿಬಿ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಫಾಫ್ ಡು ಪ್ಲೆಸಿಸ್ ಮೊದಲ ಸ್ಥಾನ ಪಡೆದಿದ್ದಾರೆ.
ಕೊಹ್ಲಿಯ ಅತ್ಯುತ್ತಮ ಫಾರ್ಮ್ ಹೊರತಾಗಿಯೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಪ್ರವೇಶಿಸಲು ವಿಫಲವಾಯಿತು. ಆಡಿದ ಹದಿನಾಲ್ಕು ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ಏಳರಲ್ಲಿ ಸೋತು ಹದಿನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆಯಿತು. ಜೂನ್ 7 ರಂದು ಲಂಡನ್ನ ಓವಲ್ನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಅವರೀಗ ತಯಾರಿ ನಡೆಸುತ್ತಿದ್ದಾರೆ.