Site icon Vistara News

Virat Kohli: ಒಂದು ಪೋಸ್ಟ್​ಗೆ ಕೊಹ್ಲಿ ಗಳಿಕೆ 14 ಕೋಟಿ ರೂ.; ಈ ಸುದ್ದಿ ನಿಜವೇ?

Virat Kohli on overcoming testing times

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಅವರು ಇನ್​ಸ್ಟಾಗ್ರಾಮ್​(Instagram) ಖಾತೆಯಲ್ಲಿ ಹಾಕುವ ಪ್ರತಿಯೊಂದು ಪ್ರಾಯೋಜಿತ ಪೋಸ್ಟ್‌ಗೆ 14 ಕೋಟಿ ರೂ.ಗಳನ್ನು(virat kohli instagram income) ಪಡೆಯುತ್ತಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದು ಸುಳ್ಳು ಎಂದು ಸ್ವತಃ ವಿರಾಟ್​ ಕೊಹ್ಲಿಯೇ ಶನಿವಾರ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಕೊಹ್ಲಿಯ ಸ್ಪಷ್ಟನೆ

ಶುಕ್ರವಾರ ಪ್ರಕಟಗೊಂಡ ವರದಿಯೊಂದರ ಪ್ರಕಾರ, 2023ರ ಸಾಲಿನಲ್ಲಿ ವಿರಾಟ್​ ಕೊಹ್ಲಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ ಪ್ರತಿಯೊಂದು ಪ್ರಾಯೋಜಿತ ಪೋಸ್ಟ್‌ಗೆ 14 ಕೋಟಿ ರೂ.ಗಳನ್ನು ಪಡೆಯುತ್ತಾರೆ ಎಂದು ಹೇಳಲಾಗಿತ್ತು. ಈ ಸುದ್ದಿ ಎಲ್ಲ ಮಾಧ್ಯಮಗಳಲ್ಲಿಯೂ ಪ್ರಕಟಗೊಂಡಿತ್ತು. ಆದರೆ ಈ ಸುದ್ದಿ ಪ್ರಕಟಗೊಂಡ ಮರು ದಿನವೇ ವಿರಾಟ್​ ಅವರು ಟ್ವಿಟರ್​ನಲ್ಲಿ ಇದೇ ವೀಚಾರವಾಗಿ ಖಚಿತತೆ ನೀಡಿದ್ದು “ಇದೊಂದು ಸುಳ್ಳು ಸುದ್ದಿ, ಯಾವುದೇ ಕಾರಣಕ್ಕೂ ಇದನ್ನು ನಂಬಬೇಡಿ, ದಯಮಾಡಿ ಇಂತಹ ಆಧಾರ ರಹಿತವಾದ ಸುದ್ದಿಯನ್ನು ಪ್ರಕಟಿಸಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ನಾನು ಜೀವನದಲ್ಲಿ ಸ್ವೀಕರಿಸಿದ ಎಲ್ಲದಕ್ಕೂ ಕೃತಜ್ಞನಾಗಿದ್ದೇನೆ ಮತ್ತು ಋಣಿಯಾಗಿದ್ದೇನೆ ಆದರೆ ನನ್ನ ಸಾಮಾಜಿಕ ಮಾಧ್ಯಮ ಗಳಿಕೆಯ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜವಲ್ಲ” ಎಂದು ಬರೆದುಕೊಂಡಿದ್ದಾರೆ. ಕೊಹ್ಲಿ ಕಳೆದ ವರ್ಷ ಇನ್​ಸ್ಟಾಗ್ರಾಮ್ ಖಾತೆಯಿಂದ ಬರೋಬ್ಬರಿ 302 ಕೋಟಿ ಗಳಿಸಿದ್ದರು.

ಜಾಗತಿಕ ಮಟ್ಟದಲ್ಲಿ 14ನೇ ಸ್ಥಾನ

256 ಮಿಲಿಯನ್ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್​ಗಳನ್ನು ಹೊಂದಿರುವ ವಿರಾಟ್​ ಕೊಹ್ಲಿ ಜಾಗತಿಕ ಮಟ್ಟದಲ್ಲಿ ಟಾಪ್ 20 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯನಾಗಿದ್ದಾರೆ. ವಿಶ್ವ ಮಟ್ಟದಲ್ಲಿ ಕೊಹ್ಲಿ 14ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಹೊರತುಪಡಿಸಿ ಭಾರತದಲ್ಲಿ ಅತಿ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿರುವ ಪಟ್ಟಿಯಲ್ಲಿ ನಟಿ ಪ್ರಿಯಾಂಕ ಚೋಪ್ರಾ(Priyanka Chopra) ದ್ವಿತೀಯ ಸ್ಥಾನ ಪಡೆದಿದ್ದಾರೆ. ಅವರು 87 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ. ಕೊಹ್ಲಿಯನ್ನು ಬಿಟ್ಟು ಏಷ್ಯಾ ಖಂಡದಲ್ಲೇ ಸಿನಿಮಾ, ರಾಜಕೀಯ ಸೇರಿ ಯಾವ ವಿಭಾಗದಲ್ಲೂ ಹೆಚ್ಚು ಫಾಲೋವರ್ಸ್(Virat Kohli Instagram followers)​ ಹೊಂದಿಲ್ಲ.

ಇದನ್ನೂ ಓದಿ Virat Kohli : ದಿನದಿಂದ ದಿನಕ್ಕೆ ಏರುತ್ತಿದೆ ವಿರಾಟ್​ ಕೊಹ್ಲಿಯ ಆದಾಯ!

ರೊನಾಲ್ಡೊ ನಂ.1

ಅತಿ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದವರ ಪಟ್ಟಿಯಲ್ಲಿ ಪೋರ್ಚುಗಲ್​ ತಂಡದ ಫುಟ್ಬಾಲ್​ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ಅವರಿಗೆ ಮೊದಲ ಸ್ಥಾನ. ಅವರು 600 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ. ಅವರು ಈ ಮಾಧ್ಯಮದಿಂದ ಗಳಿಸಿಸುವ ನಿವ್ವಳ ಮೌಲ್ಯ 4,176 ಕೋ.ರೂ ಎಂದು ಅಂದಾಜಿಸಲಾಗಿದೆ. 2ನೇ ಸ್ಥಾನದಲ್ಲಿ ಅಜೆಂಟೀನಾ ತಂಡದ ನಾಯಕ, ಫಿಫಾ ವಿಶ್ವಕಪ್​ ವಿಜೇತ ಲಿಯೋನೆಲ್​ ಮೆಸ್ಸಿ (Lionel Messi) ಕಾಣಿಸಿಕೊಂಡಿದ್ದಾರೆ ಅವರು 482 ಮಿಲಿಯನ್​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಬ್ರೆಜಿಲ್ ತಂಡದ ಫುಟ್ಬಾಲಿಗ ನೇಮರ್ ಜೂನಿಯರ್ ಅವರು ಇನ್​ಸ್ಟಾಗ್ರಾಮ್​ನಲ್ಲಿ 211 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದು, ಕ್ರೀಡಾಪಟುಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಫ್ರಾನ್ಸ್ ತಂಡದ ಸ್ಟಾರ್ ಫುಟ್ಬಾಲ್ ಆಟಗಾರ ಕಿಲಿಯಾನ್​ ಎಂಬಪ್ಪೆ 107 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಮಾಜಿ ಇಂಗ್ಲೆಂಡ್ ಫುಟ್ಬಾಲ್ ಆಟಗಾರ ಡೇವಿಡ್ ಬೇಕ್ ಹ್ಯಾಮ್ ಅವರು 81.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

Exit mobile version