ಕೋಲ್ಕೊತಾ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಅವರು ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಶತಕ ಬಾರಿಸಿ ಸಂಭ್ರಮಿಸಿದ್ದರು. ಇದೇ ವೇಳೆ ಅವರು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಮತ್ತು ನಾಯಕ ಕುಮಾರ ಸಂಗಕ್ಕರ ಅವರ ದಾಖಲೆಯೊಂದನ್ನು ಮುರಿದಿದ್ದಾರೆ.
ಕೋಲ್ಕೊತಾದ ಐತಿಹಾಸಿಕ ಮೈದಾನ ಈಡನ್ ಗಾರ್ಡನ್ಸ್ನಲ್ಲಿ ನಡೆದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಅತ್ಯಂತ ತಾಳ್ಮೆಯುವ ಬ್ಯಾಟಿಂಗ್ ನಡೆಸಿ 121 ಎಸೆತಗಳಿಂದ ಅಜೇಯ 101 ರನ್ ಬಾರಿಸಿದರು. ಅವರ ಈ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 10 ಬೌಂಡರಿ ದಾಖಲಾಯಿತು. ಹುಟ್ಟುಹಬ್ಬದಂದೆ ಕೊಹ್ಲಿ ಶತಕ ಬಾರಿಸಿದ್ದು ವಿಶೇಷ. ಈ ಶತಕದೊಂದಿಗೆ ಕೊಹ್ಲಿ ಅವರು ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಅವರ ಏಕದಿನ ಕ್ರಿಕೆಟ್ನ ಸಾರ್ವಕಾಲಿಕ 49ನೇ ಶತಕವನ್ನು ಸರಿಗಟ್ಟಿದರು.
ಸಂಗಕ್ಕರ ದಾಖಲೆ ಪತನ
ಕೊಹ್ಲಿ ಅವರು 101 ರನ್ ಗಳಿಸಿ ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಗಳಿಸಿದ ಸಾಧಕರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರುವ ಮೂಲಕ ಸಂಗಕ್ಕರ ದಾಖಲೆಯನ್ನು ಮುರಿದಿದ್ದಾರೆ. ಸಂಗಕ್ಕರ ಅವರು 37 ವಿಶ್ವಕಪ್ ಪಂದ್ಯಗಳನ್ನು ಆಡಿ 1532 ರನ್ ಬಾರಿಸಿದ್ದರು. ಇದೀಗ ವಿರಾಟ್ ಕೊಹ್ಲಿ 34* ಪಂದ್ಯಗಳನ್ನು ಆಡಿ 1573* ರನ್ ಬಾರಿಸಿದ್ದಾರೆ.
ಇದನ್ನೂ ಓದಿ IND vs SA Live: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡಕ್ಕೆ 243 ರನ್ ಭರ್ಜರಿ ವಿಜಯ
ಸಚಿನ್ ಮೊದಲಿಗ
ಮಾಜಿ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರು ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಹೊಂದಿದ್ದಾರೆ. ಸಚಿನ್ 45 ಪಂದ್ಯಗಳನ್ನು ಆಡಿ 2278 ರನ್ ಬಾರಿಸಿದ್ದಾರೆ. ಒಟ್ಟು 6 ವಿಶ್ವಕಪ್ ಶತಕ ಬಾರಿಸಿದ್ದಾರೆ. ಒಂದೇ ವಿಶ್ವಕಪ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಅವರಿಗೆ 6ನೇ ಸ್ಥಾನ. 1996ರ ವಿಶ್ವಕಪ್ನಲ್ಲಿ 2 ಶತಕ ಬಾರಿಸಿದ್ದರು. ಇದಾದ ಬಳಿಕ 2011ರ ವಿಶ್ವಕಪ್ನಲ್ಲಿಯೂ 2 ಶತಕ ಗಳಿಸಿದ್ದರು. ಅತಿ ಹೆಚ್ಚು ವಿಶ್ವಕಪ್ ಆಡಿದ ದಾಖಲೆಯೂ ಸಚಿನ್ ಹೆಸೆರಿನಲ್ಲಿದೆ. 1992-2011ರ ವರೆಗೆ ವಿಶ್ವಕಪ್ ಆಡಿದ್ದಾರೆ.
ಪಾಂಟಿಂಗ್ಗೆ 2ನೇ ಸ್ಥಾನ
ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ನಾಯಕ ರಿಕಿ ಪಾಂಟಿಂಗ್ ಅವರು ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. 46 ಪಂದ್ಯಗಳನ್ನು ಆಡಿ 1743 ರನ್ ಬಾರಿಸಿದ್ದಾರೆ. 2 ಬಾರಿ ನಾಯಕನಾಗಿ ಮತ್ತು ಒಂದು ಬಾರಿ ಆಟಗಾರನಾಗಿ ವಿಶ್ವಕಪ್ ಗೆದ್ದ ಸಾಧನೆಯೂ ಇವರದ್ದಾಗಿದೆ. 1996-2011ರ ತನಕದ ವಿಶ್ವಕಪ್ ಪಂದ್ಯ ಆಡಿದ್ದಾರೆ.
ವಿರಾಟ್ ವಿಶ್ವಕಪ್ ಸಾಧನೆ
ವಿರಾಟ್ ಕೊಹ್ಲಿ ಅವರು ಸದ್ಯ 34* ವಿಶ್ವಕಪ್ ಪಂದ್ಯಗಳನ್ನು ಆಡಿದ್ದು 1573 ಬಾರಿಸಿದ್ದಾರೆ. ಇದರಲ್ಲಿ 4 ಶತಕ ಮತ್ತು 10 ಅರ್ಧಶತಕ ಒಳಗೊಂಡಿದೆ. ಈ ಬಶರಿಯ ಆವೃತ್ತಿಯಲ್ಲಿ 2 ಶತಕ ಬಾರಿಸಿದ್ದಾರೆ. 1 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.