ಕೊಲೊಂಬೊ: ಏಷ್ಯಾ ಕಪ್ ಸೂಪರ್ 4 ಹಂತದ ಪಂದ್ಯದ ಮೀಸಲು ದಿನವಾದ ಸೋಮವಾರ ಮೊದಲು ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 356 ರನ್ ಬಾರಿಸಿದೆ. ಇದರೊಂದಿಗೆ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನದ ಗೆಲುವಿಗೆ 357 ರನ್ಗಳ ಗೆಲುವಿನ ಸವಾಲೊಡ್ಡಿದೆ. ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ಕೆ. ಎಲ್ ರಾಹುಲ್ (111) ಹಾಗೂ ವಿರಾಟ್ ಕೊಹ್ಲಿ (122) ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಭಾರತ ತಂಡಕ್ಕೆ ದೊಡ್ಡ ಮೊತ್ತ ಪೇರಿಸಲು ನೆರವಾದರು.
ಇಲ್ಲಿನ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಪಂದ್ಯ ನಡೆಯುತ್ತಿದೆ. ಭಾನುವಾರ ಮಳೆ ಬಂದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಪಂದ್ಯ ಸೋಮವಾರ ಮಳೆ ಬಿಟ್ಟ ಬಳಿಕ ಆರಂಭಗೊಂಡಿತು. ಅಲ್ಲಿಂದ ಒಂದೇ ಸಮನೆ ರನ್ ಗಳಿಸಲು ಶುರು ಮಾಡಿದ ವಿರಾಟ್ ಕೊಹ್ಲಿ ಹಾಗೂ ಕೆ. ಎಲ್ ರಾಹುಲ್ 233 ರನ್ಗಳ ಜತೆಯಾಟ ನೀಡುವ ಮೂಲಕ ದೊಡ್ಡ ಮೊತ್ತ ಪೇರಿಸಲು ನೆರವಾದರು.
ಭಾರತ ತಂಡದ ಭಾನುವಾರ ಪಂದ್ಯ ಸ್ಥಗಿತಗೊಳ್ಳುವ ಮೊದಲು 24.1 ಓವರ್ಗಳಲ್ಲಿ 147 ರನ್ ಬಾರಿಸಿತ್ತು. ಅಲ್ಲಿಂದ ಬ್ಯಾಟಿಂಗ್ ಆರಂಭಿಸಿದ ರಾಹುಲ್ ಹಾಗೂ ವಿರಾಟ್ ಪಾಕಿಸ್ತಾನ ತಂಡದ ಪ್ರತಿಯೊಬ್ಬ ಬೌಲರ್ಗಳನ್ನು ದಂಡಿಸುತ್ತಾ ರನ್ ಗಳಿಸಿದರು. ಕೊನೇ ತನಕ ಆಡಿದ ಈ ಇಬ್ಬರೂ ಆಟಗಾರರು ಅಜೇಯರಾಗಿ ಉಳಿದು ದೊಡ್ಡ ಮೊತ್ತದ ಸ್ಕೋರ್ ಬಾರಿಸಲು ನೆರವಾದರು.
ಭಾರತ ತಂಡ 25.5 ಓವರ್ಗಳಲ್ಲಿ 209 ರನ್ಗಳನ್ನು ಬಾರಿಸುವ ಮೂಲಕ ಪಾಕಿಸ್ತಾನ ತಂಡಕ್ಕೆ ದೊಡ್ಡ ಮೊತ್ತದ ಸವಾಲು ಒಡ್ಡಿತು. ಭಾರತದ ಇನಿಂಗ್ಸ್ನಲ್ಲಿ ಒಟ್ಟು 37 ಫೋರ್ಗಳು ಹಾಗೂ 9 ಸಿಕ್ಸರ್ಗಳು ಸೇರಿಕೊಂಡಿದ್ದವು. ಅದರಲ್ಲೂ ಅದರಲ್ಲಿ ವಿರಾಟ್ ಕೊಹ್ಲಿ 3 ಸಿಕ್ಸರ್ ಬಾರಿಸಿದರೆ, ರಾಹುಲ್ 2 ಸಿಕ್ಸರ್ ಬಾರಿಸಿದರು. ರೋಹಿತ್ ಶರ್ಮಾ 4 ಸಿಕ್ಸರ್ಗಳನ್ನು ಬಾರಿಸಿದ್ದರು.
ಶಾಹಿನ್ಗೆ ಕೇರ್ ಮಾಡದ ಭಾರತದ ಬ್ಯಾಟರ್ಗಳು
ವಿರಾಟ್ ಕೊಹ್ಲಿ ಕೆಎಲ್ ರಾಹುಲ್ ತಮ್ಮ ಬ್ಯಾಟ್ ಮೂಲಕ ಪಾಕ್ ವಿರುದ್ಧ ಅಬ್ಬರಿಸಿದರು ಹಿಂದಿನ ಭಾರತ ಮತ್ತು ಪಾಕ್ ನಡುವಿನ ಪಂದ್ಯದಲ್ಲಿ ಶಾಹೀನ್ ಅಫ್ರಿದಿ ವಿರುದ್ಧ ಎಡವಿದ ನಂತರ, ಕೊಹ್ಲಿ ತಮ್ಮ ಸಂಯಮವನ್ನು ಉಳಿಸಿಕೊಂಡರಲ್ಲದೆ ತಮ್ಮ 47 ನೇ ಏಕದಿನ ಶತಕವನ್ನು ಗಳಿಸಿದರು. ಕೊಹ್ಲಿ ತಮ್ಮ 77 ನೇ ಅಂತಾರಾಷ್ಟ್ರೀಯ ಶತಕ ಮತ್ತು ಕೊಲಂಬೊದಲ್ಲಿ ಸತತ 4 ನೇ ಶತಕವನ್ನು ಗಳಿಸಿದರು.
ಇದನ್ನೂ ಓದಿ : Asia Cup 2023 : ಪಾಕಿಸ್ತಾನ ತಂಡಕ್ಕೆ ಆಘಾತ, ಮಾರಕ ವೇಗಿ ಟೂರ್ನಿಯಿಂದ ಔಟ್
ಕೊಹ್ಲಿ ಕೊಲಂಬೊದಲ್ಲಿ ಮೋಡ ಕವಿದ ವಾತಾವರಣದಲ್ಲಿ ತಮ್ಮ ಬ್ಯಾಟಿಂಗ್ ಮಾಸ್ಟರ್ ಕ್ಲಾಸ್ ಅನ್ನು ಪ್ರದರ್ಶಿಸಿದರು. ಕೊಹ್ಲಿ ತಮ್ಮ ಅರ್ಧಶತಕವನ್ನು ತಲುಪಲು ಕೇವಲ 55 ಎಸೆತಗಳನ್ನು ತೆಗೆದುಕೊಂಡರು ಮತ್ತು ನಂತರ ಸಿಕ್ಸರ್ ಮತ್ತು ಬೌಂಡರಿ ಹೊಡೆಯಲು ಶುರು ಮಾಡಿ ದಾಖಲೆಗಳನ್ನು ಸೃಷ್ಟಿಸಿದರು. ಕೊಹ್ಲಿ 84 ಎಸೆತಗಳು, 6 ಬೌಂಡರಿಗಳು ಮತ್ತು 2 ಸಿಕ್ಸರ್ಗಳನ್ನು ಬಾರಿಸಿ ಮೂರು ಅಂಕಿಯ ಗಡಿಯನ್ನು ತಲುಪಿದರು.
ಏಕ ದಿನ ಮಾದರಿಯಲ್ಲಿ ಅತಿ ವೇಗದ 8000, 9000, 10000, 11000, 12000 ಮತ್ತು 13,000 ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆಯೂ ಕೊಹ್ಲಿ ಪಾಲಾಯಿತು.
ರಾಹುಲ್ ಗ್ರ್ಯಾಂಡ್ ಎಂಟ್ರಿ
ಗಾಯದ ಸಮಸ್ಯೆಯಿಂದಾಗಿತಿಂಗಳಾನುಗಟ್ಟಲೆ ಮೈದಾನದಿಂದ ದೂರ ಉಳಿದಿದ್ದ ರಾಹುಲ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. 106 ಎಸೆತಗಳಲ್ಲಿ 111 ರನ್ ಬಾರಿಸಿದ ಅವರು ಮರು ಆಗಮನದಲ್ಲೇ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.