ಪ್ರೊವಿಡೆನ್ಸ್: ವಿರಾಟ್ ಕೊಹ್ಲಿ(Virat Kohli) ಅವರು ಮೊಟ್ಟ ಮೊದಲ ಬಾರಿಗೆ ಟಿ20 ವಿಶ್ವಕಪ್(T20 World Cup 2024) ಸೆಮಿಫೈನಲ್ ಪಂದ್ಯದಲ್ಲಿ ಸಿಂಗಲ್ ಡಿಜಿಟ್ಗೆ ವಿಕೆಟ್ ಒಪ್ಪಿಸಿದ ಕೆಟ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೆಮಿ ಪಂದ್ಯದಲ್ಲಿ 9 ರನ್ಗೆ ವಿಕೆಟ್ ಕಳೆದುಕೊಂಡು ಈ ಅನಗತ್ಯ ದಾಖಲೆ ಬರೆದರು.
2014, 2016, 2022ರಲ್ಲಿ ಭಾರತ ಆಡಿದ ಎಲ್ಲ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಥಶತಕ ಬಾರಿಸಿ ಮಿಂಚಿದ್ದರು. ಆದರೆ, ಈ ಬಾರಿ ಒಂದಂಕಿಗೆ ಸೀಮಿತರಾದರು. ಜತೆಗೆ ಈ ಬಾರಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಕಂಡಂತಾಯಿತು. ಇಂಗ್ಲೆಂಡ್ ವಿರುದ್ಧ 9 ಎಸೆತಗಳಲ್ಲಿ 9 ರನ್ ಬಾರಿಸಿ ಟಾಪ್ಲಿ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು.
ವಿಕೆಟ್ ಕಳೆದುಕೊಂಡು ಡಗೌಟ್ನಲ್ಲಿ ಹತಾಶರಾಗಿ ಕುಳಿತಿದ್ದ ವಿರಾಟ್ ಕೊಹ್ಲಿಯನ್ನು ಕೋಚ್ ರಾಹುಲ್ ದ್ರಾವಿಡ್ ಬಂದು ಸಮಾಧಾನ ಪಡಿಸಿದರು. ಈ ವಿಡಿಯೊವೊಂದು ವೈರಲ್ ಆಗಿದೆ.
ಕಳೆದ ತಿಂಗಳು ಮುಕ್ತಾಯ ಕಂಡಿದ್ದ ಐಪಿಎಲ್ ಟೂರ್ನಿಯಲ್ಲಿ 700ಕ್ಕೂ ಅಧಿಕ ರನ್ ಗಳಿಸಿ ಟೂರ್ನಿಯಲ್ಲೇ ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದ ಕೊಹ್ಲಿಯ ಮೇಲೆ ಟಿ20 ವಿಶ್ವಕಪ್ ಟೂರ್ನಿಯಲ್ಲಿಯೂ ಭಾರೀ ನಿರೀಕ್ಷೆ ಇಡಲಾಗಿತ್ತು. ಆದರೆ ಕೊಹ್ಲಿ ಕಳಪೆ ಬ್ಯಾಟಿಂಗ್ ಮೂಲಕ ಈ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಆಡಿದ 7 ಪಂದ್ಯಗಳ ಪೈಕಿ 2 ಪಂದ್ಯದಲ್ಲಿ ಶೂನ್ಯ ಸುತ್ತಿದ್ದಾರೆ. ಒಟ್ಟಾರೆ ಅವರ ಗಳಿಕೆ 75 ರನ್.
ಟಿ20 ವಿಶ್ವಕಪ್ಗೆ ತಂಡ ಪ್ರಕಟಿಸುವ ಮುನ್ನ ಅಮೆರಿಕ ಮತ್ತು ವಿಂಡೀಸ್ ಪಿಚ್ಗಳು ನಿಧಾನಗತಿಯದ್ದಾಗಿದ್ದು, ಕೊಹ್ಲಿಗೆ ಇದು ಸೂಕ್ತವಾಗಿಲ್ಲ ಹೀಗಾಗಿ ಅವರನ್ನು ಆಯ್ಕೆ ಮಾಡುವುದು ಅನುಮಾನ ಎನ್ನಲಾಗಿತ್ತು. ಆದರೆ, ಸ್ಟಾರ್ ಆಟಗಾರನನ್ನು ಕೈ ಬಿಟ್ಟರೆ ಬಿಸಿಸಿಐ ವಿರುದ್ಧ ಭಾರೀ ಟೀಕೆ ಮತ್ತು ವಿರೋಧ ವ್ಯಕ್ತವಾಗುವ ನಿಟ್ಟಿನಲ್ಲಿ ಅವರಿಗೆ ಅವಕಾಶ ನೀಡಲಾಗಿತ್ತು. ಅಂದು ಊಹೆ ಮಾಡಿದಂತೆ ಇದೀಗ ಕೊಹ್ಲಿ ನಿಧಾನಗತಿಯ ಪಿಚ್ನಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ.
ಇದನ್ನೂ ಓದಿ Virat kohli : ನಿವೃತ್ತಿಯಾಗುವುದು ಉತ್ತಮ; ಕೊಹ್ಲಿ, ರೋಹಿತ್ಗೆ ಸಲಹೆ ನೀಡಿದ ವೀರೇಂದ್ರ ಸೆಹ್ವಾಗ್
ಕೊಹ್ಲಿಯನ್ನು ಆರಂಭಿಕನಾಗಿ ಆಡಿಸಿದ್ದು ಕೂಡ ಅವರ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣವಿರಬಹುದು. ಕೆಲ ವರ್ಷಗಳಿಂದ ಐಪಿಎಲ್ನಲ್ಲಿ ಕೊಹ್ಲಿ ಆರಂಭಿಕನಾಗಿ ಆಡಿದ್ದರೂ ಕೂಡ ಐಸಿಸಿ ಟೂರ್ನಿಯಲ್ಲಿ ಇದುವರೆಗೂ ಆಡಿರಲಿಲ್ಲ. ಶೈನಿಂಗ್ ಬಾಲ್ನಲ್ಲಿ ಅವರಿಗೆ ಆಡಿದ ಅನುಭವ ಕೂಡ ಅಷ್ಟಾಗಿ ಇಲ್ಲ. ಏನಿದ್ದರೂ ಮಧ್ಯಮ ಕ್ರಮಾಂಕದಲ್ಲಿಯೇ ಅವರು ಹೆಚ್ಚು ಸಕ್ಸನ್ ಕಂಡಿರುವುದು.