ಧರ್ಮಶಾಲಾ: ನಾಳೆ(ಗುರುವಾರ) ನಡೆಯುವ ಐಪಿಎಲ್ನ(IPL 2024) 58ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್(Punjab Kings) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ಮುಖಾಮುಖಿಯಾಗಲಿವೆ. ಈ ಪಂದ್ಯ ಹಿಮಾಲಯದ ತಪ್ಪಲಿನ ರಮಣೀಯ ತಾಣವಾದ ಧರ್ಮಶಾಲಾದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸದ ವೇಳೆ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ(Virat Kohli) ಇಲ್ಲಿನ ಸ್ಥಳೀಯ ಆಟಗಾರರೊಂದಿಗೆ ಪಂಜಾಬಿ ಮಾತನಾಡಿ ಗಮನಸೆಳೆದಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ಪಂಜಾಬ್ನ ಸ್ಥಳೀಯ ಕ್ರಿಕೆಟಿಗರು ಕೂಡ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ (ಎಚ್‌ಪಿಸಿಎ)ನಲ್ಲಿ ಕ್ರಿಕೆಟ್ ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ತಮ್ಮ ನೆಚ್ಚಿನ ಆಟಗಾರರ ವಿರಾಟ್ ಕೊಹ್ಲಿಯ ಆಟೋಗ್ರಾಫ್ ಪಡೆದುಕೊಂಡಿದ್ದಾರೆ. ಈ ವೇಳೆ ಕೊಹ್ಲಿ ಕೆಲವು ಪಂಜಾಬಿ ಪದಗಳನ್ನು ಹೇಳಿದ್ದಾರೆ. ಕೊಹ್ಲಿಯ ಪಂಜಾಬಿ ಮಾತುಗಳು ಕೇಳಿ ಸಹ ಆಟಗಾರರು ಜೋರಾಗಿ ನಕ್ಕಿದ್ದಾರೆ. ಕೊಹ್ಲಿ ಕೂಡ ಇವರೊಂದಿಗೆ ನಕ್ಕಿದ್ದಾರೆ.
ಶನಿವಾರ ನಡೆದಿದ್ದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ 4 ವಿಕೆಟ್ ಅಂತರದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat- Anushka) ಅವರು ಎದುರಾಳಿ ತಂಡದ ಆಟಗಾರ ಶಾರೂಖ್ ಖಾನ್ ಅವರನ್ನು ಮಿಂಚಿನ ಎಸೆತದ ಮೂಲಕ ರನೌಟ್ ಮಾಡಿ ಗಮನಸೆಳೆದಿದ್ದರು. ಬುಲೆಟ್ ಚಿಮ್ಮಿದ ವೇಗದಲ್ಲಿ ರನೌಟ್ ಮಾಡಿದ್ದನ್ನು ಕಂಡು ಪತ್ನಿ ಅನುಷ್ಕಾ(Anushka Sharma) ದಂಗಾಗಿದ್ದರು. ಇದರ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್(viral video) ಆಗಿತ್ತು.
ಆರಂಭಿಕ ಆಘಾತ ಕಂಡಿದ್ದ ಗುಜರಾತ್ಗೆ ಶಾರೂಖ್ ಖಾನ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಮೂಲಕ ಆಸರೆಯಾಗಿದ್ದರು. 24 ಎಸೆತಗಳಿಂದ 37 ರನ್ ಗಳಿಸಿ ನಾನ್ಸ್ಟ್ರೈಕ್ನಲ್ಲಿದ್ದ ಶಾರೂಖ್ ಇಲ್ಲದ ರನ್ ಕದಿಯಲು ಯತ್ನಿಸಿದ ವೇಳೆ ಚಿರತೆ ವೇಗದಲ್ಲಿ ಫೀಲ್ಡಿಂಗ್ ನಡೆಸಿ ಕೊಹ್ಲಿ ಚೆಂಡನ್ನು ನೇರವಾಗಿ ವಿಕೆಟ್ಗೆ ಎಸೆದು ರನೌಟ್ ಮಾಡಿದರು. ಒಂದೊಮ್ಮೆ ಕೊಹ್ಲಿ ಈ ರನೌಟ್ ಮಾಡದಿದ್ದರೆ ಶಾರೂಖ್ ಆರ್ಸಿಬಿಗೆ ಅಪಾಯಕಾರಿಯಾಗಿ ಗೋಚರಿಸುವ ಸಾಧ್ಯತೆಯೂ ಇತ್ತು.
ಇದನ್ನೂ ಓದಿ IPL 2024: ಐಪಿಎಲ್ನಲ್ಲಿ ದಾಖಲೆ ಬರೆದ ಮ್ಯಾಕ್‌ಗುರ್ಕ್; ಜೈಸ್ವಾಲ್ ದಾಖಲೆ ಪತನ
ಗುಜರಾತ್ ವಿರುದ್ಧ 6 ರನ್ ಗಳಿಸುತ್ತಿದ್ದಂತೆ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ 12500 ರನ್ ಪೂರೈಸಿದ ಮೊದಲ ಭಾರತೀಯ ಎನಿಸಿಕೊಂಡರು. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಮೋಹಿತ್ ಶರ್ಮ ಎಸೆದ ಇನಿಂಗ್ಸ್ನ ಮೊದಲ ಓವರ್ನ ದ್ವಿತೀಯ ಎಸೆತವನ್ನು ಸಿಕ್ಸರ್ಗೆ ಬಡಿದಟ್ಟುವ ಮೂಲಕ ವಿರಾಟ್ ಕೊಹ್ಲಿ ರನ್ ಖಾತೆ ತೆರೆದರು. ಜತೆಗೆ ಈ ರನ್ ಮೂಲಕ ಟಿ20 ಕ್ರಿಕೆಟ್ನಲ್ಲಿ 12500 ರನ್ ಪೂರೈಸಿದರು. ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ವಿಶ್ವ ದಾಖಲೆ ವಿಂಡೀಸ್ನ ಮಾಜಿ ಆಟಗಾರ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ 14562 ರನ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ. ಪಾಕಿಸ್ತಾನದ ಶೊಯೆಬ್ ಮಲಿಕ್ (13360) ದ್ವಿತೀಯ, ವೆಸ್ಟ್ ಇಂಡೀಸ್ನ ಕೀರನ್ ಪೊಲಾರ್ಡ್(12900) ತೃತೀಯ ಸ್ಥಾನದಲ್ಲಿದ್ದಾರೆ. ಕೊಹ್ಲಿ 12536* ರನ್ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.