ಅಹಮದಾಬಾದ್: ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ವಿರುದ್ಧದ ಐಪಿಎಲ್ 16ನೇ ಆವೃತ್ತಿಯ (IPL 2023) 51ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡದ ವಿಕೆಟ್ಕೀಪರ್ ಬ್ಯಾಟರ್ ಸ್ಫೋಟಕ 82 ರನ್ ಬಾರಿಸಿದ್ದಾರೆ. ಈ ಪ್ರದರ್ಶನವನ್ನು ನೋಡಿದ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿರುವ ಅವರು ಎಂಥ ಅದ್ಭುತ ಆಟ ಎಂದು ಬಣ್ಣಿಸಿದ್ದಾರೆ. ವೃದ್ಧಿಮಾನ್ ಸಾಹಾ ಭಾರತ ತಂಡದ ಪರ ಅವಕಾಶ ವಂಚಿತ ಆಟಗಾರ. ಆದರೆ, ಐಪಿಎಲ್ನಲ್ಲಿ ಗುಜರಾತ್ ತಂಡ ಸೇರಿಕೊಂಡ ಬಳಿಕ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಆರಂಭಿಕರಾಗಿ ಬ್ಯಾಟ್ ಮಾಡುತ್ತಿರುವ ಅವರನ್ನು ತಡೆಯುವುದಕ್ಕೆ ಯಾವುದೇ ಬೌಲರ್ಗೆ ಸಾಧ್ಯವಾಗುತ್ತಿಲ್ಲ.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಲಕನ್ಒ ತಂಡ ಎದುರಾಳಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಈ ನಿರ್ಧಾರ ಸರಿಯಿಲ್ಲ ಎಂದು ವೃದ್ಧಿಮಾನ್ ಸಾಹ ತೋರಿಸಿಕೊಟ್ಟರು. ಆರಂಭದಲ್ಲಿಯೇ ಬ್ಯಾಟಿಂಗ್ ಅಬ್ಬರ ಪ್ರದರ್ಶಿಸಿ ಲಕ್ನೊ ಬೌಲರ್ಗಳನ್ನು ಬೆಂಡೆತ್ತಿದರು. 38 ವರ್ಷದ ಈ ಹಿರಿಯ ಆಟಗಾರ ಕೇವಲ 20 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದರಲ್ಲದೆ, ಶುಭಮನ್ ಗಿಲ್ ಜತೆ ಸೇರಿಕೊಂಡು ಶತಕದ ಜತೆಯಾಟವನ್ನೂ ಆಡಿದ್ದಾರೆ.
ವೃದ್ಧಿಮಾನ್ ಸಾಹ ಅವರ ಇನಿಂಗ್ಸ್ನಿಂದ ಪ್ರಭಾವಿತರಾದ ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಂತಹ ಆಟಗಾರ ಎಂದು ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಗುಜರಾತ್ ಟೈಟನ್ಸ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ಐಪಿಎಲ್ನ ಹಾಲಿ ಆವೃತ್ತಿಯ ಇದುವರೆಗೆ 11 ಪಂದ್ಯಗಳಲ್ಲಿ 273 ರನ್ ಗಳಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಬಳಗ ಬ್ಯಾಟಿಂಗ್ ವಿಭಾಗದ ಪ್ರಮುಖ ಶಕ್ತಿಯೂ ಎಂದು ಎನಿಸಿಕೊಂಡಿದ್ದಾರೆ. ಇವರ ಉತ್ತಮ ಪ್ರದರ್ಶನದಿಂದಾಗಿ ಹಾರ್ದಿಕ್ ಬಳಗ ಪ್ಲೇಆಫ್ ಪ್ರೇವೇಶದ ಹಾದಿಯಲ್ಲಿದೆ.
ಗುಜರಾತ್ ಪ್ಲೇಆಪ್ ಹಾದಿ ಸಲೀಸು
ಗುಜರಾತ್ ತಂಡ ಪ್ರಸ್ತುತ 10 ಪಂದ್ಯಗಳಲ್ಲಿ 7 ಗೆಲುವುಗಳೊಂದಿಗೆ ಐಪಿಎಲ್ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 0.752 ನೆಟ್ ರನ್ರೇಟ್ ಕೂಡ ಹೊಂದಿದೆ. ಹಿಂದಿನ ಆವೃತ್ತಿಯಲ್ಲಿ ನೀಡಿದ ಅದ್ಭುತ ಪ್ರದರ್ಶನವನ್ನು ಹಾಲಿ ಆವೃತ್ತಿಯಲ್ಲೂ ಮುಂದುವರಿಸಿದೆ ಹಾಗೂ ಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದೆ.
ಲಕ್ನೊ ಹಾಗೂ ಗುಜರಾತ್ ತಂಡಗಳು ಕಳೆದ ಆವೃತ್ತಿಯಿಂದ ಐಪಿಎಲ್ನಲ್ಲಿದೆ. ಅಲ್ಲಿಂದ ಈ ಪಂದ್ಯಕ್ಕೆ ಮುಂಚಿವಾಗಿ ಮೂರು ಬಾರಿ ಮುಖಾಮುಖಿಯಾಗಿದೆ. ಎಲ್ಲ ಪಂದ್ಯದಲ್ಲೂ ಗುಜರಾತ್ ವಿಜಯ ಸಾಧಿಸಿ, ಸಂಪೂರ್ಣ ಪಾರಮ್ಯ ಹೊಂದಿದೆ.
ಇದನ್ನೂ ಓದಿ : IPL 2023 : ಗಂಭೀರ್ ಜತೆ ಗಲಾಟೆ ಬಗ್ಗೆ ಬಿಸಿಸಿಐಗೆ ವಿವರಣೆ ನೀಡಿದ ವಿರಾಟ್ ಕೊಹ್ಲಿ, ದಂಡಕ್ಕೆ ಅಸಮಾಧಾನ
ಹಾಲಿ ಚಾಂಪಿಯನ್ ಗುಜರಾತ್ ತಂಡ ಮೇ 12 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿದೆ. ನಂತರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ತನ್ನ ಅಂತಿಮ ಗ್ರೂಪ್ ಪಂದ್ಯವನ್ನು ಆಡಲಿದೆ. ಮತ್ತೊಂದೆಡೆ, ಲಕ್ನೋ 11 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಪ್ಲೇಆಫ್ನಲ್ಲಿ ಸ್ಥಾನ ಪಡೆಯಲು ಉಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸುವ ಗುರಿ ಹೊಂದಿದೆ.