ಮುಂಬಯಿ: ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿರುವ ಭಾರತ ಮತ್ತು ನ್ಯೂಜಿಲ್ಯಾಂಡ್(India vs New Zealand, 1st Semi-Final) ನಡುವಣ ಸೆಮಿಫೈನಲ್ ಪಂದ್ಯ ಆರಂಭಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಇತ್ತಂಡಗಳ ಈ ಕಾದಾಟ ಇಂದು ಮುಂಬಯಿಯ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯದ ಇನ್ನೊಂದು ಕುತೂಹಲವೆಂದರೆ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಮತ್ತೊಂದು ಶತಕ ಬಾರಿಸಲಿ ಎನ್ನುವುದು. ಈ ಮೂಲಕ 50 ಶತಕಗಳೊಂದಿಗೆ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್(sachin tendulkar) ಶತಕಗಳ ದಾಖಲೆಯನ್ನು (49 ಶತಕ) ಮುರಿಯಲಿ ಎನ್ನುವುದು ಕೊಹ್ಲಿ ಅಭಿಮಾನಿಗಳ ಆಶಯ.
ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು(49) ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟಿದರು. ನೆದರ್ಲೆಂಡ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲೇ ಕೊಹ್ಲಿ ಈ ದಾಖಲೆಯನ್ನು ಮುರಿಯುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅರ್ಧಶತಕದ ಗಳಿಸಿ ಔಟಾಗುವ ಮೂಲಕ ಈ ಅವಕಾಶದಿಂದ ವಂಚಿತರಾಗಿದ್ದರು. 35 ವರ್ಷದ ಕೊಹ್ಲಿಗೆ ಕಿವೀಸ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಶತಕ ಬಾರಿಸಿ 50ನೇ ಶತಕದೊಂದಿಗೆ ಮಾಸ್ಟರ್ ಬ್ಲಾಸ್ಟರ್ ಅವರನ್ನು ಮೀರಿಸುವ ಅವಕಾಶವಿದೆ.
ಇದನ್ನೂ ಓದಿ IND vs NZ: ಸೆಮಿ ಪಂದ್ಯದ ನಕಲಿ ಟಿಕೆಟ್ ಮಾರಾಟ; ಮೋಸ ಹೋದೀರಿ ಹುಷಾರ್!
ಪ್ರಚಂಡ ಫಾರ್ಮ್
ಪ್ರಚಂಡ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ ಈಗಾಗಲೇ 594 ರನ್ ಬಾರಿಸಿ ಅತಿ ಹೆಚ್ಚು ರನ್ ಗಳಿಸಿದವರ ಯಾದಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಏಕದಿನ ವಿಶ್ವಕಪ್ ಪಂದ್ಯಾವಳಿಯೊಂದರಲ್ಲಿ ಕೊಹ್ಲಿ 500 ರನ್ ಗಡಿ ದಾಟಿದ ಮೊದಲ ನಿದರ್ಶನ ಇದಾಗಿದೆ. 2011ರಿಂದ ವಿಶ್ವಕಪ್ ಆಡಲಾರಂಭಿಸಿದ ಕೊಹ್ಲಿ ಕ್ರಮವಾಗಿ 282, 305, 443 ರನ್ ಬಾರಿಸಿದ್ದಾರೆ. ಈ 3 ಕೂಟಗಳಲ್ಲಿ ತೆಂಡೂಲ್ಕರ್, ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಭಾರತದ ಟಾಪ್ ಸ್ಕೋರರ್ ಆಗಿದ್ದರು.
ಅಪಾಯಕಾರಿ ಕಿವೀಸ್
ನ್ಯೂಜಿಲ್ಯಾಂಡ್ ತಂಡ ಪ್ರತಿ ಐಸಿಸಿ ಟೂರ್ನಿಗಳಲ್ಲಿಯೂ ಭಾರತಕ್ಕೆ ಕಾಡುತ್ತಲೇ ಬಂದಿದೆ. ಅದರಲ್ಲೂ ಮಹತ್ವದ ಪಂದ್ಯದಲ್ಲಿ. ಹೌದು ಮೂರೂ ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಭಾರತಕ್ಕೆ ಕಿವೀಸ್ ಆಘಾತವಿಕ್ಕಿದೆ. 2000ದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ವಿಶ್ವಕಪ್ ಸೆಮಿಫೈನಲ್ ಹಾಗೂ 2021ರ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತವನ್ನು ಪರಾಭವಗೊಳಿಸಿದೆ. ಈ ಬಾರಿ ಇದು ಸಂಭವಿಸದಿರಲಿ ಎನ್ನುವುದು ಶತಕೋಟಿ ಭಾರತೀಯರ ಆಶಯವಾಗಿದೆ.
ಇದನ್ನೂ ಓದಿ IND vs NZ: ಇಂದು ಭಾರತ-ಕಿವೀಸ್ ಸೆಮಿ ಸಮರ; ಹೇಗಿದೆ ವಾಂಖೆಡೆ ಹವಾಮಾನ?
ಸಂಭಾವ್ಯ ತಂಡ
ಭಾರತ: ರೋಹಿತ್ ಶರ್ಮ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ.
ನ್ಯೂಜಿಲ್ಯಾಂಡ್: ಡೇವನ್ ಕಾನ್ವೇ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಮಾರ್ಕ್ ಚಾಪ್‌ಮನ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಟಾಮ್ ಲ್ಯಾಥಂ, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗ್ಯುಸನ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್.
ವಿಶ್ವಕಪ್ ಮುಖಾಮುಖಿ
ಭಾರತ ಮತ್ತು ನ್ಯೂಜಿಲ್ಯಾಂಡ್ ಈವರೆಗೆ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 10 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 04 ಪಂದ್ಯಗಳನ್ನು ಗೆದ್ದರೆ, ನ್ಯೂಜಿಲ್ಯಾಂಡ್ 05 ಪಂದ್ಯಗಳನ್ನು ಗೆದ್ದಿದ. 01 ಪಂದ್ಯ ರದ್ದುಗೊಂಡಿದೆ. ಭಾರತದ ಒಂದು ಗೆಲುವು ಈ ಬಾರಿಯ ಲೀಗ್ ಪಂದ್ಯದಲ್ಲಿ ಒಲಿದಿತ್ತು. ಧರ್ಮಶಾಲಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ 4 ವಿಕೆಟ್ ಜಯ ಸಾಧಿಸಿತ್ತು.