ನವ ದೆಹಲಿ : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯವು ಬಿಡುಗಡೆ ಮಾಡಿರುವ ಹರ್ ಘರ್ ಗೀತೆಯಲ್ಲಿ ಕೆ.ಎಲ್ ರಾಹುಲ್ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಸಂಸ್ಕೃತಿ ಸಚಿವಾಲಯವು ಈ ಹಾಡನ್ನು ಬಿಡುಗಡೆ ಮಾಡಿದ್ದು, ಕ್ರೀಡಾಪಟುಗಳನ್ನೇ ಹೆಚ್ಚು ಬಳಸಿಕೊಳ್ಳಲಾಗಿದೆ. ವಿರಾಟ್ ಕೊಹ್ಲಿ, ಪಿ.ವಿ ಸಿಂಧೂ, ಪಿಟಿ. ಉಷಾ ಸೇರಿದಂತೆ ಹಲವರು ಈ ಹಾಡಿನಲ್ಲಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ಈ ಹಾಡನ್ನು ರಚಿಸಲಾಗಿದೆ. ಭಾರತದ ಸಂಪದ್ಭರಿತ ಕಲೆ, ಸಂಸ್ಕೃತಿ ಹಾಗೂ ಜನಜೀವನವನ್ನು ಈ ಹಾಡಿನಲ್ಲಿ ಪ್ರಸ್ತುತಪಡಿಸಲಾಗಿದೆ. ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರು ಹಾಡನ್ನು ಹಾಡಿದ್ದು, ದೃಶ್ಯಗಳ ಮೂಲಕ ನಾನಾ ರಾಜ್ಯಗಳನ್ನು ಪ್ರಸ್ತುತಪಡಿಸಲಾಗಿದೆ. ಕ್ರೀಡೆಯಲ್ಲದೆ ಹಲವಾರು ಸೆಲೆಬ್ರೆಟಿಗಳು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಹಾಡಿನಲ್ಲಿ ಬರುವ “ಮನೆಮನೆಗೂ ತ್ರಿವರ್ಣ” ಎಂಬ ಸಾಲಿನ ನಡುವೆ ಕೆ. ಎಲ್ ರಾಹುಲ್ ಕಾಣಿಸಿಕೊಳ್ಳುತ್ತಾರೆ ಹಾಗೂ ತ್ರಿವರ್ಣ ಧ್ವಜ ಬೀಸಿ ಸಂಭ್ರಮಿಸುತ್ತಾರೆ.
ಯಾರೆಲ್ಲ ಇದ್ದಾರೆ ಕ್ರೀಡಾಪಟುಗಳು
ವಿರಾಟ್ ಕೊಹ್ಲಿ, ಕೆ. ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್, ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಮಾಜಿ ಅಥ್ಲೀಟ್ ಅಂಜುಬಾಬಿ ಜಾರ್ಜ್, ಎರಡು ಒಲಿಂಪಿಕ್ಸ್ ಪದಕಗಳ ವಿಜೇತೆ ಷಟ್ಲರ್ ಪಿ.ವಿ ಸಿಂಧೂ, ವೇಟ್ ಲಿಫ್ಟರ್ ಮೀರಾಬಾಯಿ ಚಾನು, ಬಾಕ್ಸರ್ ಮೇರಿಕೋಮ್, ಮಾಜಿ ಕ್ರಿಕೆಟಿಗ ಕಪಿಲ್ ದೇವ್, ಪಿ.ಟಿ. ಉಷಾ, ಪ್ಯಾರಾ ಶೂಟರ್ ಅವನಿ ಲೇಖರಾ, ಪ್ಯಾರಾ ಜಾವೆಲಿನ್ ಎಸೆತಗಾರ ದೇವೇಂದ್ರ ಜಜಾರಿಯಾ ಹಾಡಿನಲ್ಲಿರುವ ಕ್ರೀಡಾಪಟುಗಳಾಗಿದ್ದಾರೆ.
ಸೆಲೆಬ್ರಿಟಿಗಳಾಗಿರುವ ಅಮಿತಾಬ್ ಬಚ್ಚನ್, ಜಾಕಿ ಶ್ರಾಫ್, ಅನುಪಮ್ ಖೇರ್, ಆಶಾ ಬೋಸ್ಲೆ, ಅನುಷ್ಕಾ ಶರ್ಮ, ತಮಿಳು ನಟಿ ಕೀರ್ತಿ ಸುರೇಶ್, ತೆಲುಗು ನಟ ಪ್ರಭಾಸ್ ತೆಲುಗು ಹಿನ್ನೆಲೆ ಸಂಗೀತಗಾರ ದೇವಿ ಶ್ರೀ ಪ್ರಸಾದ್, ಅಕ್ಷಯ್ ಕುಮಾರ್, ಅಜಯ್‌ದೇವಗನ್ ಕೂಡ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ | ಮೇ 28 ರಿಂದ ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನ ಆರಂಭ: ವಿ.ಸುನಿಲ್ ಕುಮಾರ್