Site icon Vistara News

IPL 2023 : ವಿಂಡೀಸ್ ಸ್ಫೋಟಕ ಬ್ಯಾಟರ್​ ಕೀರನ್​ ಪೊಲಾರ್ಡ್​ ಸಾಧನೆ ಹಿಂದಿಕ್ಕಿದ ವಿರಾಟ್​ ಕೊಹ್ಲಿ

virat-kohli-overtakes-windies-explosive-batsman-kieran-pollard

virat-kohli-overtakes-windies-explosive-batsman-kieran-pollard

ಬೆಂಗಳೂರು: ಐಪಿಎಲ್​ 16ನೇ ಆವೃತ್ತಿಯಲ್ಲಿ (IPL 2023) ವಿರಾಟ್ ಕೊಹ್ಲಿಯ ಬ್ಯಾಟ್​ನಿಂದ ರನ್​ಗಳು ಮೂಡಿ ಬರುತ್ತಿವೆ. ಹೀಗಾಗಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಎದುರು ವಿಸ್ಫೋಟಕ ಅರ್ಧ ಶತಕ ಬಾರಿಸಿದ ವಿರಾಟ್‌ ಕೊಹ್ಲಿ, ನಂತರದ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಚೆನ್ನಾಗಿ ಆಡಿರಲಿಲ್ಲ. ಆದರೆ, ಲಕ್ನೊ ಸೂಪರ್‌ ಜಯಂಟ್ಸ್‌ ಎದುರು ಮತ್ತೆ ಉತ್ತಮ ಪ್ರದರ್ಶನ ನೀಡಿ 61 ರನ್ ಬಾರಿಸಿದ್ದರು. ಈ ವೇಳೆ ಅವರು ಹೊಸದೊಂದು ದಾಖಲೆ ಮಾಡಿದ್ದಾರೆ.

ತಮ್ಮ ಸ್ಫೋಟಕ ಇನಿಂಗ್ಸ್‌ನಲ್ಲಿ ತಲಾ 4 ಫೋರ್‌ ಮತ್ತು ಸಿಕ್ಸರ್‌ ಸಿಡಿಸಿದ ಕಿಂಗ್‌ ಕೊಹ್ಲಿ, ಇಂಡಿಯನ್ ಪ್ರೀಮಿಯರ್‌ ಲೀಗ್‌ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದರು. ಇದರೊಂದಿಗೆ ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ಆಲ್‌ರೌಂಡರ್‌ ಕೀರನ್​ ಪೊಲಾರ್ಡ್‌ ಅವರ ದಾಖಲೆ ಮುರಿದಿದ್ದಾರೆ.

ವಿರಾಟ್​ 218 ಇನಿಂಗ್ಸ್‌ಗಳಿಂದ 227 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರ ಐದರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಪೊಲಾರ್ಡ್‌ 171 ಇನಿಂಗ್ಸ್‌ಗಳಲ್ಲಿ 223 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಲಖನೌ ಸೂಪರ್ ಜಯಂಟ್ಸ್‌ ಎದುರು 4 ಸಿಕ್ಸರ್‌ ಸಿಡಿಸಿದ ಕೊಹ್ಲಿ, ಈ ವೇಳೆ ಪೊಲಾರ್ಡ್‌ ಹಿಂದಿಕ್ಕಿದ್ದಾರೆ.

ಇದನ್ನೂ ಓದಿ : ವಿರಾಟ್ ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ; ಆರೋಪಿಗೆ ಬಿಗ್​ ರಿಲೀಫ್ ನೀಡಿದ ಬಾಂಬೆ ಹೈಕೋರ್ಟ್‌

ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಆರ್‌ಸಿಬಿ ತಂಡದ ಮಾಜಿ ಬ್ಯಾಟರ್‌ ಕ್ರಿಸ್‌ ಗೇಲ್‌ ಅಗ್ರಸ್ಥಾನದಲ್ಲಿದ್ದಾರೆ. ಅವರು 42 ಪಂದ್ಯಗಳಲ್ಲಿ ಬರೋಬ್ಬರಿ 357 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿ 350ಕ್ಕೂ ಹೆಚ್ಚು ಸಿಕ್ಸರ್‌ ಸಿಡಿಸಿದ ಏಕಮಾತ್ರ ಬ್ಯಾಟರ್‌ ಕ್ರಿಸ್‌ಗೇಲ್‌. ಆರ್‌ಸಿಬಿ ತಂಡದ ಮತ್ತೊಬ್ಬ ತಾರೆ ಎಬಿ ಡಿ’ವಿಲಿಯರ್ಸ್‌ ಈ ಪಟ್ಟಿಯಲ್ಲಿ 251 ಸಿಕ್ಸರ್‌ನೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.

ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾ ಮೂರನೇ ಸ್ಥಾನದಲ್ಲಿದ್ದು, 229 ಪಂದ್ಯಗಳಲ್ಲಿ 241 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಸಿಎಸ್​ಕೆ ಕ್ಯಾಪ್ಟನ್​ ಎಂ.ಎಸ್‌ ಧೋನಿ ಒಟ್ಟಾರೆ 208 ಇನಿಂಗ್ಸ್‌ಗಳಿಂದ 234 ಸಿಕ್ಸರ್‌ಗಳೊಂದಿಗೆ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ.

ಪಂದ್ಯದಲ್ಲಿ ಏನಾಯಿತು?

ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಲಕ್ನೊ ಸೂಪರ್​ ಜಯಂಟ್ಸ್ ತಂಡದ ವಿರುದ್ಧ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ 1 ವಿಕೆಟ್​ ಸೋಲು ಕಂಡಿದೆ. ಬೃಹತ್​ ಮೊತ್ತದ ಈ ಪಂದ್ಯದಲ್ಲಿ ಅತ್ತಿಂದಿತ್ತ ಓಲಾಡಿದ ವಿಜಯಲಕ್ಷ್ಮಿ ಕೊನೆಗೆ ಲಕ್ನೊ ಸೂಪರ್ ಜಯಂಟ್ಸ್​ ಪಾಲಾಗಿದೆ. ಕೊನೇ ಎಸೆತದಲ್ಲಿ ಲಕ್ನೊ ತಂಡದ ವಿಜಯಕ್ಕೆ ಒಂದು ರನ್​ ಬೇಕಾಗಿತ್ತು. ಹರ್ಷಲ್ ಪಟೇಲ್​ ಎಸೆದ ಚೆಂಡು ಬ್ಯಾಟರ್ ಆವೇಶ್​​ ಖಾನ್​ಗೆ ಬ್ಯಾಟ್​ಗೆ ತಗುಲದೇ ಹಿಂದಕ್ಕೆ ಹೋಯಿತು. ಆದರೆ, ವಿಕೆಟ್​ ಕೀಪರ್ ದಿನೇಶ್​ ಕಾರ್ತಿಕ್ ಕೈಯಲ್ಲಿ ಪುಟಿಯಿತು. ಒಂದು ವೇಳೆ ಅವರ ಕೈಗೆ ಸರಿಯಾಗಿ ಸಿಕ್ಕಿದ್ದರೆ ಲಕ್ನೊ ಬ್ಯಾಟರ್​ ರನ್ ಔಟ್ ಆಗುತ್ತಿದ್ದರು. ಪಂದ್ಯ ಟೈ ಆಗುತ್ತಿತ್ತು. ಇಲ್ಲಿ ಅದೃಷ್ಟ ಆರ್​ಸಿಬಿ ಕೈ ಹಿಡಿಯಲಿಲ್ಲ. ಲಕ್ನೊ ತಂಡದ ಬ್ಯಾಟರ್​ಗಳಾದ ನಿಕೋಲಸ್​ ಪೂರನ್​ (62 ರನ್​, 19 ಎಸೆತ, 7 ಸಿಕ್ಸರ್​, 4 ಪೋರ್​), ಮಾರ್ಕಸ್ ಸ್ಟೋಯ್ನಿಸ್​ (65 ರನ್​, 30 ಎಸೆತ, 5 ಸಿಕ್ಸರ್​) ಗೆಲುವಿನ ರೂವಾರಿಗಳೆನಿಸಿಕೊಂಡರು. ಈ ಪಂದ್ಯವೂ ಹಾಲಿ ಆವೃತ್ತಿಯ ಮತ್ತೊಂದು ಅತ್ಯಂತ ರೋಚಕ ಪಂದ್ಯ ಎನಿಸಿಕೊಂಡಿತು. ಇದೇ ವೇಳೆ ಆರ್​ಸಿಬಿ ಬಳಗಕ್ಕೆ ಸತತ ಎರಡು ಸೋಲು ಎದುರಾಯಿತು. ಪ್ರಮುಖವಾಗಿ ತವರಿನ ಅಭಿಮಾನಿಗಳ ಎದುರೇ ಸೋಲಿನ ನಿರಾಸೆ ಅನುಭವಿಸಿತು.

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ಸೂಪರ್ ಜಯಂಟ್ಸ್​ ತಂಡದ ನಾಯಕ ಕೆ. ಎಲ್​ ರಾಹುಲ್​ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟಿಂಗ್​ಗೆ ಆಹ್ವಾನ ಪಡೆದ ಆರ್​ಸಿಬಿ ಬಳಗ ನಿಗದಿತ 20 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು 212 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಲಕ್ನೊ ತಂಡ ಕೊನೇ ಎಸೆತದಲ್ಲಿ ಒಂದು ರನ್​ ಬಾರಿಸುವ ಮೂಲಕ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 213 ರನ್​ ಬಾರಿಸಿ ಗೆಲುವು ಸಾಧಿಸಿತು.

Exit mobile version