Site icon Vistara News

IPL 2023 : ವೀರೇಂದ್ರ ಸೆಹ್ವಾಗ್ ಪುತ್ರರ ಜೊತೆ ಪೋಸ್ ನೀಡಿದ ವಿರಾಟ್ ಕೊಹ್ಲಿ!

Virat Kohli

Virat Kohli

ನವ ದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್​ (IPL 2023) ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಳು ವಿಕೆಟ್​ ಹೀನಾಯ ಸೋಲು ಅನುಭವಿಸಿದೆ. ಫಿಲಿಪ್ ಸಾಲ್ಟ್ ಅವರ ಬ್ಯಾಟಿಂಗ್ ಅಬ್ಬರದ ಅರ್ಧ ಶತಕ ಬಾರಿಸಿ ಆರ್​ಸಿಬಿಯ ಸೋಲಿಗೆ ಕಾರಣರಾದರು. ಇದರ ಮೂಲಕ ವಿರಾಟ್​ ಕೊಹ್ಲಿ ಬಾರಿಸಿದ್ದ ಅರ್ಧ ಶತಕ ವ್ಯರ್ಥಗೊಂಡಿತು. ಪಂದ್ಯದ ಮುಕ್ತಾಯದ ನಂತರ ವಿರಾಟ್ ಕೊಹ್ಲಿ ಮಾಜಿ ಸ್ಫೋಟಕ ಬ್ಯಾಟರ್​​ ವೀರೇಂದ್ರ ಸೆಹ್ವಾಗ್ ಅವರ ಪುತ್ರರಾದ ಆರ್ಯವೀರ್ ಮತ್ತು ವೇದಾಂತ್ ಅವರೊಂದಿಗೆ ಫೋಸ್​ ಕೊಟ್ಟರು. ಈ ಚಿತ್ರಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಯಿತು.

ಡೆಲ್ಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್​ ವಿರಾಟ್​ ಕೊಹ್ಲಿಗೆ ತವರು ಮೈದಾನ. ಬಾಲ್ಯದಲ್ಲಿ ಅಲ್ಲೇ ಕ್ರಿಕೆಟ್ ಕಲಿತು ಬಳಿಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪ್ರವೇಶ ಪಡೆದವರು. ವೀರೇಂದ್ರ ಸೆಹ್ವಾಗ್​ ಕೂಡ ಡೆಲ್ಲಿಯವರು. ಅವರು ಅಲ್ಲಿನ ತಂಡವನ್ನು ಪ್ರತಿನಿಧಿಸಿ ಬಳಿಕ ಭಾರತ ತಂಡಕ್ಕೆ ಪ್ರವೇಶ ಪಡೆದುಕೊಂಡಿದ್ದರು. ಇದೀಗ ಸೆಹ್ವಾಗ್ ಅವರ ಮಕ್ಕಳೂ ಕ್ರಿಕೆಟ್​ ಪ್ರೀತಿಯನ್ನು ಬೆಳೆಸಿಕೊಂಡಿದ್ದಾರೆ. ಅವರು ಕ್ರಿಕೆಟ್​ ಆಡುತ್ತಾರೆ. ಹೀಗಾಗಿ ವಿರಾಟ್ ಕೊಹ್ಲಿಯ ಜತೆ ಫೋಟೋ ತೆಗಿಸಿಕೊಂಡಿದ್ದಾರೆ.

ಪಂದ್ಯದಲ್ಲಿ ಆರ್​ಸಿಬಿಗೆ ಸೋಲು

ಅರುಣ್​ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಬೌಲಿಂಗ್​ಗೆ ನೆರವಾಗುತ್ತಿದ್ದ ಪಿಚ್​ನಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 181 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ. 16.4 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 187 ರನ್​ ಬಾರಿಸಿ ಸುಲಭ ಗೆಲುವು ಸಾಧಿಸಿತು. ಇದರೊಂದಿಗೆ ತವರಿನ ಸ್ಟೇಡಿಯಮ್​ನಲ್ಲಿ ವಿರಾಟ್​ ಕೊಹ್ಲಿ (55 ರನ್​) ಅರ್ಧ ಶತಕ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಮಹಿಪಾಲ್​ ಲಾಮ್ರೋರ್​ (54) ಸ್ಫೋಟಕ ಬ್ಯಾಟಿಂಗ್ ವ್ಯರ್ಥಗೊಂಡಿತು.

ಇದು ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ ವಿರಾಟ್​ ಕೊಹ್ಲಿಯ 6ನೇ ಅರ್ಧ ಶತಕವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಮಹಿಪಾಲ್​ ಲಾಮ್ರೋರ್​ (54) ಸ್ಫೋಟಕ ಬ್ಯಾಟಿಂಗ್ ನಡೆಸಿ ಅರ್ಧ ಶತಕ ಬಾರಿಸುವುದರೊಂದಿಗೆ ಸ್ಪರ್ಧಾತ್ಮಕ ಮೊತ್ತ ಪೇರಿಸಲು ತಂಡಕ್ಕೆ ನೆರವಾದರು.

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಆರಂಭ ಪಡೆಯಿತು. ಡೇವಿಡ್​ ವಾರ್ನರ್​ (22) ಹಾಗೂ ಫಿಲ್​ ಸಾಲ್ಟ್ ಮೊದಲ ವಿಕೆಟ್​ಗೆ 60 ರನ್ ಬಾರಿಸಿದರು. ನಂತರ ಬಂದ ಮಿಚೆಲ್ ಮಾರ್ಷ್​ 26 ರನ್​ ಪೇರಿಸಿದರು. ರೀಲಿ ರೊಸ್ಸೊ 35 ರನ್​ ಕಲೆ ಹಾಕುವ ಮೂಲಕ ಅಜೇಯರಾಗಿ ಉಳಿದರು.

ಸಾಲ್ಟ್​ ಅಬ್ಬರ

ಆರಂಭಿಕ ಬ್ಯಾಟರ್​ ಫಿಲಿಪ್​ ಸಾಲ್ಟ್​ ಆರಂಭದಲ್ಲೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. 28 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಅವರು 45 ಎಸೆತಗಳಲ್ಲಿ 87 ರನ್ ಬಾರಿಸಿದರು. ಶತಕದ ನಿರೀಕ್ಷೆಯಲ್ಲಿದ್ದ ಅವರು ಕರಣ್​ ಶರ್ಮಾ ಎಸೆತಕ್ಕೆ ಕ್ಲೀನ್ ಬೌಲ್ಡ್​ ಆಗಿ ಹೊರನಡೆದರು. ಅವರ ಇನಿಂಗ್ಸ್​ನಲ್ಲಿ 6 ಸಿಕ್ಸರ್​ ಹಾಗೂ 8 ಫೋರ್​ಗಳು ಸೇರಿಕೊಂಡಿವೆ.

ಇನಿಂಗ್ಸ್ ಆರಂಭಿಸಿದ ಫಾಫ್​ ಡು ಪ್ಲೆಸಿಸ್​ ಹಾಗೂ ವಿರಾಟ್​ ಕೊಹ್ಲಿ ಆರ್​​ಸಿಬಿಗೆ ಉತ್ತಮ ಆರಂಭ ತಂದುಕೊಟ್ಟರು. ಈ ಜೋಡಿ ಮೊದಲ ವಿಕೆಟ್​ಗೆ 82 ರನ್​ ಬಾರಿಸಿತು. ಆದರೆ, ಮಾರ್ಷ್​ ಎಸೆತಕ್ಕೆ ಸಿಕ್ಸರ್ ಬಾರಿಸಲು ಹೋದ ಪ್ಲೆಸಿಸ್​ 45 ರನ್​ಗಳಿಗೆ ಔಟಾದರು. ಈ ಮೂಲಕ ಮತ್ತೊಂದು ಅರ್ಧ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು. ಬಳಿಕ ಆಡಲು ಬಂದ ಗ್ಲೆನ್​ ಮ್ಯಾಕ್ಸ್​ವೆಲ್​ ಶೂನ್ಯಕ್ಕೆ ಔಟಾಗುವ ಮೂಲಕ ಮತ್ತೆ ತಂಡಕ್ಕೆ ಹಿನ್ನಡೆ ಉಂಟು ಮಾಡಿದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಮಹಿಪಾಲ್​ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಕ್ರೀಸ್​ಗೆ ಬಂದ ಮಹಿಪಾಲ್​ ಲಾಮ್ರೋರ್ ಆರಂಭದಿಂದೇ ಅಬ್ಬರಿಸಿದರು. ಡೆಲ್ಲಿ ಬೌಲರ್​ಗಳನ್ನು ಸತತವಾಗಿ ದಂಡಿಸಿದ ಅವರು 29 ಎಸೆತಗಳಿಗೆ 3 ಸಿಕ್ಸರ್ ಹಾಗೂ 6 ಫೋರ್ ಸಮೇತ 54 ರನ್​ ಬಾರಿಸಿ ಕೊನೇ ತನಕ ಅಜೇಯರಾಗಿ ಉಳಿದರು. ಏತನ್ಮಧ್ಯೆ, ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ವಿರಾಟ್​ ಕೊಹ್ಲಿಯೂ ತಮ್ಮ ಅರ್ಧ ಶತರ ಪೂರೈಸಿದರು. ಅಲ್ಲದೆ, ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದರು.

ಇದನ್ನೂ ಓದಿ : IPL 2023 : ಗಂಭೀರ್​ ಜತೆ ಗಲಾಟೆ ಬಗ್ಗೆ ಬಿಸಿಸಿಐಗೆ ವಿವರಣೆ ನೀಡಿದ ವಿರಾಟ್​ ಕೊಹ್ಲಿ, ದಂಡಕ್ಕೆ ಅಸಮಾಧಾನ

ಕೊನೆಯಲ್ಲಿ ದಿನೇಶ್ ಕಾರ್ತಿಕ್​ 11 ರನ್​ ಬಾರಿಸಿದರೆ ಅನುಜ್​ ರಾವತ್ 8 ರನ್ ಕೊಡುಗೆ ಕೊಟ್ಟರು. ಡೆಲ್ಲಿ ಪರ ಬೌಲಿಂಗ್​ನಲ್ಲಿ ಮಿಚೆಲ್​ ಮಾರ್ಷ್​ 2 ವಿಕೆಟ್​ ಪಡೆದರೆ, ಮುಕೇಶ್​ ಕುಮಾರ್​ ಹಾಗೂ ಖಲೀಲ್ ಅಹಮದ್​ ತಲಾ 1 ವಿಕೆಟ್​ ತಮ್ಮದಾಗಿಸಿಕೊಂಡರು.

Exit mobile version