ನವ ದೆಹಲಿ: ಐಸಿಸಿ ವಿಶ್ವಕಪ್ 2023 ರ ಅಂತಿಮ ಸಿದ್ಧತೆಯ ಭಾಗವಾಗಿ ಭಾರತ ಮತ್ತು ಆಸ್ಟ್ರೇಲಿಯಾ ಸೆಪ್ಟೆಂಬರ್ 22 ರಿಂದ ಮೊಹಾಲಿಯಲ್ಲಿ ಪ್ರಾರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ವಿಶ್ವಕಪ್ ಗೆ ಹೋಗುವ ಸಾಮರ್ಥ್ಯ ಮತ್ತು ಫಾರ್ಮ್ ವಿಷಯದಲ್ಲಿ ಉಭಯ ತಂಡಗಳ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ಎರಡೂ ಫೈನಲ್ ತಲುಪುವ ನೆಚ್ಚಿನ ತಂಡವೆಂದು ಹೇಳಲಾಗುತ್ತದೆ.
ಏಕದಿನ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 3-2 ಅಂತರದ ಆಘಾತಕಾರಿ ಸೋಲನ್ನು ಅನುಭವಿಸಿದೆ. ಆದರೆ ಹಿರಿಯ ಆಟಗಾರರಾದ ಪ್ಯಾಟ್ ಕಮಿನ್ಸ್, ಸ್ಟೀವ್ ಸ್ಮಿತ್ ಮತ್ತು ಮಿಚೆಲ್ ಸ್ಟಾರ್ಕ್ ಅವರ ಅನುಪಸ್ಥಿತಿಯಲ್ಲಿ ಇದು ಸಂಭವಿಸಿದೆ. ಮತ್ತೊಂದೆಡೆ, ಸೆಪ್ಟೆಂಬರ್ 17 ರಂದು ಏಷ್ಯಾ ಕಪ್ 2023 ಅನ್ನು ಗೆಲ್ಲುವ ಮೂಲಕ ಭಾರತವು ಎಂಟನೇ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಆದರೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಪಂದ್ಯಗಳಿಗೆ ಸ್ಟಾರ್ ಬ್ಯಾಟರ್ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಲಭ್ಯರಾಗಿದ್ದಾರೆ.
ರೋಹಿತ್ ಮತ್ತು ವಿರಾಟ್ ಸೆಪ್ಟೆಂಬರ್ 27 ರಂದು ರಾಜ್ ಕೋಟ್ ನಲ್ಲಿ ನಡೆಯಲಿರುವ ಮೂರನೇ ಪಂದ್ಯಕ್ಕಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ವೇಳೆ ಈ ಇಬ್ಬರೂ ಸ್ಟಾರ್ ಆಟಗಾರರು ಬಹುಮುಖ್ಯ ದಾಖಲೆಯ ಮೇಲೆ ಕಣ್ಣಿಡಲಿದ್ದಾರೆ. ಇಬ್ಬರೂ ಅನುಭವಿ ಬ್ಯಾಟರ್ಗಳು ಏಷ್ಯಾ ಕಪ್ನಲ್ಲಿ ಉತ್ತಮ ಫಾರ್ಮ್ ಕಂಡುಕೊಂಡಿದ್ದಾರೆ. ರೋಹಿತ್ ಸತತ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ವಿರಾಟ್ ಪಾಕಿಸ್ತಾನ ವಿರುದ್ಧ ಶತಕ ಬಾರಿಸಿದ್ದಾರೆ. ಇಬ್ಬರೂ ಹಿರಿಯ ಬ್ಯಾಟರ್ಗಳು ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಏಕದಿನ ಪಂದ್ಯಗಳಲ್ಲಿ ಗಮನಾರ್ಹ ದಾಖಲೆಗಳನ್ನು ಹೊಂದಿದ್ದಾರೆ. ಹೀಗಾಗಿ ಮೂರನೇ ಏಕದಿನ ಪಂದ್ಯದಲ್ಲಿ ಪ್ರಮುಖ ಮೈಲಿಗಲ್ಲೊಂದನ್ನು ಸಾಧಿಸುವ ಅವಕಾಶ ಹೊಂದಿದ್ದಾರೆ.
ಇದನ್ನೂ ಓದಿ : World Cup 2023 : ಏಕ ದಿನ ವಿಶ್ವ ಕಪ್ನಲ್ಲಿ ಬೌಂಡರಿ, ಸಿಕ್ಸರ್ ಬಾರಿಸುವುದು ಸುಲಭವಲ್ಲ; ಯಾಕೆ ಗೊತ್ತೇ?
ರೋಹಿತ್ ಮತ್ತು ವಿರಾಟ್ ಇಬ್ಬರೂ ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ತಲಾ 8 ಶತಕಗಳನ್ನು ದಾಖಲಿಸಿದ್ದಾರೆ. ಆಸೀಸ್ ವಿರುದ್ಧ ಸಚಿನ್ ತೆಂಡೂಲ್ಕರ್ ಅವರ ಒಂಬತ್ತು ಏಕದಿನ ಶತಕಗಳ ಸಾರ್ವಕಾಲಿಕ ದಾಖಲೆ ಮುರಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 70 ಏಕದಿನ ಇನ್ನಿಂಗ್ಸ್ಗಳಲ್ಲಿ 44.59 ಸರಾಸರಿಯಲ್ಲಿ 3077 ರನ್ ಗಳಿಸಿರುವ ಸಚಿನ್, ದಾಖಲೆಯ 9 ಶತಕಗಳು ಮತ್ತು 15 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧ ಗರಿಷ್ಠ ರನ್ಗಳ ದಾಖಲೆ ಹೊಂದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಏಕದಿನ ಶತಕಗಳು
- ಸಚಿನ್ ತೆಂಡೂಲ್ಕರ್ – 70 ಇನ್ನಿಂಗ್ಸ್ಗಳಲ್ಲಿ 9 ಶತಕಗಳು
- ರೋಹಿತ್ ಶರ್ಮಾ – 42 ಇನ್ನಿಂಗ್ಸ್ಗಳಲ್ಲಿ 8 ಶತಕಗಳು
- ವಿರಾಟ್ ಕೊಹ್ಲಿ – 44 ಇನ್ನಿಂಗ್ಸ್ಗಳಲ್ಲಿ 8 ಶತಕಗಳು
- ಡೆಸ್ಮಂಡ್ ಹೇನ್ಸ್ – 64 ಇನ್ನಿಂಗ್ಸ್ಗಳಲ್ಲಿ 6 ಶತಕಗಳು
- ಫಾಫ್ ಡು ಪ್ಲೆಸಿಸ್ – 21 ಇನ್ನಿಂಗ್ಸ್ಗಳಲ್ಲಿ 5 ಶತಕಗಳು
ಅಕ್ಟೋಬರ್ 8 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ 2023 ರ ಆರಂಭಿಕ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಇದು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲು ರೋಹಿತ್ ಮತ್ತು ವಿರಾಟ್ ಗೆ ಮತ್ತೊಂದು ಅವಕಾಶವನ್ನು ಒದಗಿಸಲಿದೆ.