Site icon Vistara News

Virat Kohli: ಕೊಹ್ಲಿಗೆ ಸ್ಮರಣೀಯ ಉಡುಗೊರೆ ನೀಡಿದ ಸಚಿನ್​ ತೆಂಡೂಲ್ಕರ್​

virat kohli

ಅಹಮದಾಬಾದ್: ಟೀಮ್​ ಇಂಡಿಯಾದ ದಿಗ್ಗಜ ಸಚಿನ್​ ತೆಂಡೂಲ್ಕರ್(sachin tendulkar)​ ಅವರು ವಿರಾಟ್​ ಕೊಹ್ಲಿಗೆ(Virat Kohli) ಸ್ಮರಣೀಯ ಉಡುಗೊರೆಯೊಂದನ್ನು ನೀಡಿದ್ದಾರೆ. ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಸಚಿನ್​ ಅವರು ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಧರಿಸಿದ್ದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಅಷ್ಟೇ ಅಲ್ಲದೆ ಈ ಜೆರ್ಸಿಯಲ್ಲಿ ವಿರಾಟ್‌ ಕೊಹ್ಲಿಗೆ ಸಚಿನ್​ ಭಾವನಾತ್ಮಕ ಸಂದೇಶವೊಂದನ್ನು ಬರೆದಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು ತಮ್ಮ ಜೆರ್ಸಿಯೊಂದಿಗೆ ಕೊಹ್ಲಿಗೆ ಪತ್ರವೊಂದನ್ನು ನೀಡಿದ್ದಾರೆ. ‘ವಿರಾಟ್, ನೀವು ನಮಗೆ ಹೆಮ್ಮೆ ತಂದಿದ್ದೀರಿ’ ಎಂದು ಸಚಿನ್‌ ಈ ಪತ್ರದಲ್ಲಿ ಬರೆದಿದ್ದಾರೆ. ಕೊಹ್ಲಿ ಆಸೀಸ್​ ವಿರುದ್ಧದ ಫೈನಲ್​ ಪಂದ್ಯದಲ್ಲಿ 54 ರನ್​ ಬಾರಿಸಿ ಕಮಿನ್ಸ್​ ಎಸೆತದಲ್ಲಿ ಕ್ಲೀನ್​ ಬೌಲ್ಡ್​ ಆದರು.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಸೆಮಿಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಕೊಹ್ಲಿ ಶತಕ ಬಾರಿಸುವ ಮೂಲಕ ಸಚಿನ್​ ಅವರ ಏಕದಿನ ಕ್ರಿಕೆಟ್​ನ 49 ಶತಕದ ದಾಖಲೆಯನ್ನು ಮುರಿದಿದ್ದರು. ಈ ವಳೆಯೂ ಸಚಿನ್​ ಅವರು ಭಾವನಾತ್ಮ ಸಂದೇಶದ ಮೂಲಕ ಕೊಹ್ಲಿಯ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದರು.

ತಲೆಬಾಗಿ ನಮಿಸಿದ್ದ ಕೊಹ್ಲಿ

ವಿರಾಟ್​ ಕೊಹ್ಲಿ ಅವರು ತಮ್ಮ ರೋಲ್​ ಮಾಡೆಲ್​ ಸಚಿನ್​ ಅವರ ದಾಖಲೆ ಮುರಿಯುತ್ತಿದ್ದಂತೆ ಪ್ರೇಕ್ಷಕರ ಸ್ಟ್ಯಾಂಡ್​ನಲ್ಲಿ ಕುಳಿತಿದ್ದ ಸಚಿನ್​ಗೆ ತಲೆಬಾಗಿ ನಮಿಸಿದ್ದರು. ತೆಂಡೂಲ್ಕರ್ ಕೂಡ ಕೊಹ್ಲಿಯ ಸನ್ನೆಯನ್ನು ಚಪ್ಪಾಳೆ ತಟ್ಟಿ ಶ್ಲಾಘಿಸಿದರು. ಪಂದ್ಯದ ಬಳಿಕ ಸಚಿನ್​ ಅವರು ಕೊಹ್ಲಿಯನ್ನು ಭೇಟಿಯಾಗಿ ತಬ್ಬಿಕೊಂಡು ಹಾರೈಸಿದ್ದರು.

ಇದನ್ನೂ ಓದಿ IND vs AUS Final: ಮೋದಿ ಸ್ಟೇಡಿಯಂನಲ್ಲಿ ಜನಸಾಗರ; ಎಲ್ಲೆಲ್ಲೂ ಕಂಗೊಳಿಸಿದ ನೀಲ ವರ್ಣ

ಮೆಚ್ಚುಗೆ ಸೂಚಿಸಿದ್ದ ಸಚಿನ್​

ಕೊಹ್ಲಿ ಅವರು ಶತಕದ ಅರ್ಧಶತಕ ಪೂರ್ತಿಗೊಳಿಸಿದ ವೇಳೆ ಸಚಿನ್​ ಅವರು ಟ್ವೀಟ್​ ಮೂಲಕ ಮೆಚ್ಚುಗೆ ಸೂಚಿಸಿದ್ದರು. “ನಾನು ನಿಮ್ಮನ್ನು ಮೊದಲ ಬಾರಿಗೆ ಭಾರತೀಯ ಡ್ರೆಸ್ಸಿಂಗ್ ರೂಮ್​ನಲ್ಲಿ ಭೇಟಿಯಾದಾಗ ಇತರ ಸಹ ಆಟಗಾರರು ನನ್ನ ಪಾದಗಳನ್ನು ಮುಟ್ಟಿ ನಮಸ್ಕರಿಸುವಂತೆ ನಿಮ್ಮನ್ನು ತಮಾಷೆ ಮಾಡಿದ್ದರು. ಆ ದಿನ ನನಗೆ ನಗು ನಿಲ್ಲಿಸಲು ಸಾಧ್ಯವಾಗಲಿಲ್ಲ. ಆದರೆ ಶೀಘ್ರದಲ್ಲೇ, ನೀವು ನಿಮ್ಮ ಉತ್ಸಾಹ ಮತ್ತು ಕೌಶಲ್ಯದಿಂದಾಗಿ ನನ್ನ ಹೃದಯವನ್ನು ಸ್ಪರ್ಶಿಸಿದಿರಿ. ಆ ಹುಡುಗ ‘ವಿರಾಟ್’ ಆಟಗಾರನಾಗಿ ಬೆಳೆದಿದ್ದಾನೆ ಎಂದು ನನಗೆ ತುಂಬಾ ಸಂತೋಷವಾಗಿದೆ. ಒಬ್ಬ ಭಾರತೀಯ ಕ್ರಿಕೆಟಿಗ ನನ್ನ ದಾಖಲೆಯನ್ನು ಮುರಿದಿದ್ದಾನೆ ಎಂಬುದೇ ನನಗೆ ಸಂತೋಷದ ವಿಷಯ. ಅದೂ ದೊಡ್ಡ ಪಂದ್ಯವೊದರಲ್ಲಿ ಎಂಬುದು ಇನ್ನೂ ಖುಷಿಯ ಸಂಗತಿ. ಅದೂ ನನ್ನ ತವರು ಮೈದಾನವಾಗಿರುವ ವಾಂಖೆಡೆಯಲ್ಲಿ ಸಾಧನೆ ಮಾಡಿರುವುದಕ್ಕೆ ಖುಷಿಯಿದೆ” ಎಂದು ಸಚಿನ್ ಬರೆದುಕೊಂಡಿದ್ದರು.

ಈ ಬಾರಿಯ ವಿಶ್ವಕಪ್​ನಲ್ಲಿ ಕೊಹ್ಲಿ ಸಾಧನೆ

ಈ ಬಾರಿಯ ವಿಶ್ವಕಪ್​ ಟೂರ್ನಿಯಲ್ಲಿ ಬ್ಯಾಟಿಂಗ್​ ವಿರಾಟ ದರ್ಶನ ತೋರಿದ ಕೊಹ್ಲಿ ಟೂರ್ನಿಯ ಟಾಪ್‌ ಸ್ಕೋರರ್‌ ಆಗಿ ಹೊರಮೊಮ್ಮಿದ್ದಾರೆ. ಅಲ್ಲದೆ ತಮ್ಮ ಹೆಸರಿಗೆ ನಾನಾ ದಾಖಲೆಗಳನ್ನೂ ಬರೆಸಿಕೊಂಡಿದ್ದಾರೆ. ಆಸೀಸ್​ ವಿರುದ್ಧದ ಮೊದಲ ಲೀಗ್​ ಪಂದ್ಯದಲ್ಲಿ ಕುಸಿದಿದ್ದ ಭಾರತ ತಂಡಕ್ಕೆ ಆಸರೆಯಾದ ಕೊಹ್ಲಿ 85 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು. ಅಫಘಾನಿಸ್ತಾನ ವಿರುದ್ಧ ನಡೆದ 2ನೇ ಪಂದ್ಯದಲ್ಲಿ ಕೊಹ್ಲಿ 55 ರನ್‌ ಬಾರಿಸಿದ್ದರು. ಬಾಂಗ್ಲಾ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಕೊಹ್ಲಿ 97 ಎಸೆತಗಳಲ್ಲಿ 103 ರನ್‌ ಗಳಿಸಿದರು. ನ್ಯೂಜಿಲ್ಯಾಂಡ್‌ ವಿರುದ್ಧ 95 ರನ್‌ ಗಳಿಸಿ ಐದು ರನ್‌ನಿಂದ ಶತಕ ವಂಚಿತರಾದರು. ಶ್ರೀಲಂಕಾ ವಿರುದ್ಧ 88, ದಕ್ಷಿಣ ಆಫ್ರಿಕಾ ವಿರುದ್ಧ 101 ರನ್‌ ಗಳಿಸಿ ಸಚಿನ್​ ಅವರ 49ನೇ ಶತಕವನ್ನು ಸರಿಗಟ್ಟಿದ್ದರು. ನೆದರ್ಲೆಂಡ್ಸ್‌ ವಿರುದ್ಧ 51 ರನ್‌ ಗಳಿಸಿದರು. ನ್ಯೂಜಿಲ್ಯಾಂಡ್‌ ವಿರುದ್ಧದ ಸೆಮಿಫೈನಲ್‌ನಲ್ಲಿ 117 ರನ್‌ ಗಳಿಸಿದ ಕೊಹ್ಲಿ, ಸಚಿನ್​ ಅವರ ದಾಖಲೆ ಮುರಿದು 50ನೇ ಸೆಂಚುರಿ ಬಾರಿಸಿ ದಾಖಲೆ ನಿರ್ಮಿಸಿದರು. ಫೈನಲ್ ಪಂದ್ಯದಲ್ಲಿ 54 ರನ್​ ಬಾರಿಸಿದರು. ಈ ಬಾರಿ ಆಡಿದ 11 ಪಂದ್ಯಗಳಲ್ಲಿ 765 ರನ್​ ಬಾರಿಸಿದರು.

Exit mobile version