ಅಹಮದಾಬಾದ್: ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಕೊನೆಗೂ ಟೆಸ್ಟ್ ಶತಕ ಬಾರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದ ಮೂದಲನೇ ಇನಿಂಗ್ಸ್ನಲ್ಲಿ ಅವರು ಮೂರಂಕಿ ಮೊತ್ತ ದಾಟಿದ್ದಾರೆ. ಈ ಮೂಲಕ ಅವರು ಕಳೆದ ಮೂರು ವರ್ಷ ನಾಲ್ಕು ತಿಂಗಳ ಟೆಸ್ಟ್ ಶತಕದ ಬರ ನೀಗಿಸಿಕೊಂಡರು. ಇದು ಅವರ 28ನೇ ಟೆಸ್ಟ್ ಶತಕ ಹಾಗೂ 75ನೇ ಅಂತಾರಾಷ್ಟ್ರೀಯ ಶತಕವಾಗಿದೆ. ವಿರಾಟ್ಕೊಹ್ಲಿ ಕೊನೇ ಅಂತಾರಾಷ್ಟ್ರೀಯ ಟೆಸ್ಟ್ ಶತಕ ಬಾರಿಸಿದ್ದು 2019ರ ನವೆಂಬರ್ನಲ್ಲಿ.
ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಇಳಿದ ಅವರು ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕದ ದಾಖಲೆ ಮಾಡಿದರು. ಮೂರಂಕಿ ಮೊತ್ತವನ್ನು ದಾಟಲು ಅವರು 242 ಎಸೆತಗಳನ್ನು ಬಳಸಿಕೊಂಡರು. 41. 15 ಸರಾಸರಿಯಂತೆ ಬ್ಯಾಟ್ ಮಾಡಿ ಸೆಂಚುರಿ ಬಾರಿಸಿದ ಅವರ ಸ್ಕೋರ್ನಲ್ಲಿ ಕೇವಲ ಐದು ಫೋರ್ಗಳು ಸೇರಿಕೊಂಡಿವೆ.
ಇದನ್ನೂ ಓದಿ : Virat Kohli : ಬ್ರಿಯಾನ್ ಲಾರಾ ದಾಖಲೆ ಮುರಿದ ವಿರಾಟ್ ಕೊಹ್ಲಿ
ಪಂದ್ಯದ ಮೂರನೇ ದಿನವಾದ ಶನಿವಾರ ಅರ್ಧ ಶತಕ ಬಾರಿಸಿ ಕ್ರೀಸ್ ಕಾಪಾಡಿಕೊಂಡಿದ್ದ ವಿರಾಟ್ ಕೊಹ್ಲಿ, ಭಾನುವಾರ ಭೋಜನ ವಿರಾಮದ ಬಳಿಕ ಶತಕದ ಸಾಧನೆ ಮಾಡಿದರು. ಈ ಮೂಲಕ ಬಾರ್ಡರ್ – ಗವಾಸ್ಕರ್ ಟ್ರೋಫಿಯನ್ನು ಸ್ಮರಣೀಯ ಮಾಡಿದರು. ಕೊಹ್ಲಿ 2022ರ ಸೆಪ್ಟೆಂಬರ್ನಲ್ಲಿ ಟಿ20 ಶತಕ ಬಾರಿಸಿದ್ದರೆ, ಬಾಂಗ್ಲಾದೇಶ ಪ್ರವಾಸ ಹಾಗೂ ಶ್ರೀಲಂಕಾ ವಿರುದ್ಧದ ತವರಿನ ಏಕ ದಿನ ಸರಣಿಯಲ್ಲಿ ಒಂದೊಂದು ಶತಕ ಬಾರಿಸಿದ್ದಾರೆ.