Site icon Vistara News

Virat Kohli : ವೃತ್ತಿ ಬದುಕಿನಲ್ಲಿ ಕಠಿಣ ನಿರ್ಧಾರ ತೆಗೆದುಕೊಂಡ ವಿರಾಟ್​ ಕೊಹ್ಲಿ, ಅಭಿಮಾನಿಗಳಿಗೆ ನಿರಾಸೆ

Virat kohli

ಬೆಂಗಳೂರು: 2023 ರ ಏಕದಿನ ವಿಶ್ವಕಪ್​ನ ಫೈನಲ್​ನಲ್ಲಿ ಭಾರತ ತಂಡ ಸೋತ ಬಳಿಕ ತಂಡದ ಪ್ರಮುಖ ಆಟಗಾರರಾದ ವಿರಾಟ್​ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಭಾರೀ ನಿರಾಸೆ ಹೊಂದಿದ್ದಾರೆ. ಭಾರವಾದ ಹೃದಯವನ್ನು ಹೊತ್ತುಕೊಂಡು ಅವರು ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಏತನ್ಮಧ್ಯೆ ಅವರಿಬ್ಬರ ಕ್ರಿಕೆಟ್​ ವೃತ್ತಿ ಜೀವನದ ಭವಿಷ್ಯದ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ವಿರಾಟ್​ ಕೊಹ್ಲಿ ಸೀಮಿತ ಓವರ್​ಗಳ ಕ್ರಿಕೆಟ್​ನಿಂದ ದೂರ ಇರಬಹುದು ಎಂಬ ಮಾತುಗಳೇ ಕೇಳಿಬರುತ್ತಿತ್ತು. ಅದಕ್ಕೆ ಪೂರಕವಾಗಿ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯ ಒಡಿಐ ಮತ್ತು ಟಿ20 ಕ್ರಿಕೆಟ್​ನಲ್ಲಿ ಆಡುವುದಿಲ್ಲ ಎಂದು ವರದಿಗಳು ಹೇಳಿವೆ.

ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ವಿರಾಟ್ ಕೊಹ್ಲಿ ವೈಟ್ ಬಾಲ್ ಕ್ರಿಕೆಟ್​ನಿಂದ ಹೊರಗುಳಿಯಲಿದ್ದಾರೆ ಎಂದು ಇಂಡಿಯನ್ ಎಕ್ಸ್​ಪ್ರೆಸ್​ ವರದಿ ಮಾಡಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಪ್ರವಾಸವು ಡಿಸೆಂಬರ್ 10ರಿಂದ ಪ್ರಾರಂಭವಾಗಲಿದ್ದು, ಮೂರು ಪಂದ್ಯಗಳ ಟಿ 20 ಐ ಸರಣಿಯೊಂದಿಗೆ ಶುರುವಾಗಲಿದೆ. ನಂತರ ಮೂರು ಪಂದ್ಯಗಳ ಏಕದಿನ ಸರಣಿ ಆಯೋಜನೆಗೊಂಡಿದೆ. ಪ್ರವಾಸವು ಎರಡು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಕೊನೆಗೊಳ್ಳುತ್ತದೆ, ಇದು ಡಬ್ಲ್ಯುಟಿಸಿ ಋತುವಿನ ಭಾಗವೂ ಆಗಿದೆ. ಈ ಎರಡು ಪಂದ್ಯಗಳಲ್ಲಿ ಕೊಹ್ಲಿ ಆಡಬಹುದು ಎಂದು ವರದಿ ಹೇಳಿದೆ.

ವೈಟ್-ಬಾಲ್ ಕ್ರಿಕೆಟ್​ನಲ್ಲಿ ವಿರಾಮದ ಅಗತ್ಯವಿದೆ. ಅದೇ ರೀತಿ ವೈಟ್-ಬಾಲ್ ಕ್ರಿಕೆಟ್​ನಲ್ಲಿ ತಮ್ಮ ಭವಿಷ್ಯದ ಬಗ್ಗೆಯೂ ಕೊಹ್ಲಿ ಬಿಸಿಸಿಐ ಮತ್ತು ಆಯ್ಕೆದಾರರಿಗೆ ಮಾಹಿತಿ ನೀಡಿದ್ದಾರೆ” ಎಂದು ಬಿಸಿಸಿಐ ಮೂಲವನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

2023ರ ವಿಶ್ವಕಪ್​ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಅಭಿಯಾನವನ್ನು ನಡೆಸಿದ್ದರು. ಅಲ್ಲಿ ತಮ್ಮ 50 ನೇ ಏಕದಿನ ಶತಕವನ್ನು ಗಳಿಸಿ ಸಚಿನ್ ದಾಖಲೆ ಮುರಿದಿದ್ದರು. ವಿಶ್ವಕಪ್ ಅಭಿಯಾನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್​ ಸೇರಿದಂತೆ ವಿವಿಧ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದರು. ಕೊಹ್ಲಿ ಈ ಆವೃತ್ತಿಯಲ್ಲಿ 765 ರನ್ ಸಿಡಿಸಿದ್ದಾರೆ. ಆದಾಗ್ಯೂ ವಿಶ್ವ ಕಪ್​ ಪ್ರಶಸ್ತಿಗೆ ಪಾತ್ರವಾಗದೇ ಇರುವುದು ಅವರ ಪಾಲಿಗೆ ವೃತ್ತಿ ಜೀವನದ ದೊಡ್ಡ ಬೇಸರದ ಸಂಗತಿಯಾಗಿದೆ.

ಇದನ್ನೂ ಓದಿ : Rahul Dravid: ಭಾರತ ಕ್ರಿಕೆಟ್‌ ತಂಡ ಕೋಚ್‌ ಆಗಿ ಮುಂದುವರಿಯಲು ರಾಹುಲ್‌ ದ್ರಾವಿಡ್‌ಗೆ ಬಿಸಿಸಿಐ ಆಫರ್‌

ಟ್ರೋಫಿಯನ್ನು ಕಳೆದುಕೊಂಡರೂ, ಕೊಹ್ಲಿ ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಟಗಾರ ಎನಿಸಿಕೊಂಡಿದ್ದರು. ಭಾರತ ತಂಡಕ್ಕೆ ನಿರ್ಣಾಯಕ ಹಂತಗಳಲ್ಲಿ ದೊಡ್ಡ ರನ್​ಗಳನ್ನು ತಂದುಕೊಟ್ಟಿದ್ದರು. ಡಬ್ಲ್ಯುಟಿಸಿ ಚಾಂಪಿಯನ್​ಶಿಪ್​ ಸೇರಿದಂತೆ ಪಂದ್ಯಾವಳಿಯಲ್ಲಿ ಭಾರತವು ದೊಡ್ಡ ರನ್​ಗಳನ್ನು ಗಳಿಸಿದಾಗಲೆಲ್ಲಾ ಕೊಹ್ಲಿ ಸುದೀರ್ಘ ಇನಿಂಗ್ಸ್​ ಆಡಿದ್ದರು. ಎಲ್ಲ ಕಡೆಯೂ ಭಾರತ ಟ್ರೋಫಿ ಎತ್ತಿಲ್ಲ. ಆದರೆ, ಕೊಹ್ಲಿಯ ಅಬ್ಬರ ಎಲ್ಲೂ ಕಡಿಮೆ ಇರಲಿಲ್ಲ.

ಭಾರತ ತಂಡ ಸದ್ಯ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿ ಆಡುತ್ತಿದೆ. 2-1 ಅಂತರದ ಮುನ್ನಡೆ ಸಾಧಿಸಿರುವ ಭಾರತ ತಂಡ ಶುಕ್ರವಾರ ನಡೆಯಲಿರುವ ನಾಲ್ಕನೇ ಟಿ20 ಪಂದ್ಯಕ್ಕಾಗಿ ರಾಯ್ಪುರಕ್ಕೆ ಪ್ರಯಾಣ ಬೆಳೆಸಲಿದೆ.

ಇನ್ನೊಂದು ವಾರದಲ್ಲಿ ಗೊತ್ತಾಗಲಿದೆ ಕೊಹ್ಲಿ, ರೋಹಿತ್​ ಟಿ20 ಭವಿಷ್ಯ

2023 ರಲ್ಲಿ ಭಾರತ ಕ್ರಿಕೆಟ್ ತಂಡದ ಕೊನೆಯ ವಿದೇಶ ಪ್ರವಾಸದ ಸಮಯ ಬಂದಿದೆ ಏಕದಿನ ವಿಶ್ವಕಪ್ ಸೋಲಿನ ನಿರಾಸೆಯ ನಂತರ, ನಿಧಾನವಾಗಿ ಗಮನ 2024ರ ಟಿ 20 ವಿಶ್ವಕಪ್ ಕಡೆಗೆ ತಿರುಗುತ್ತಿದೆ. ಏತನ್ಮಧ್ಯೆ ಡಿಸೆಂಬರ್ 10 ರಂದು ನಡೆಯುವ ಟಿ 20 ಸರಣಿ ಮೊದಲ ಪಂದ್ಯದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಪ್ರಾರಂಭವಾಗಲಿದೆ. ಅದಕ್ಕೂ ಮುಂಚಿತವಾಗಿ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಭಾರತ ತಂಡ ಪ್ರಕಟಿಸುವುದು ಹಾಗೂ 2024 ರ ಟಿ20 ವಿಶ್ವಕಪ್​ಗೆ ಮುಂಚಿತವಾಗಿ ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿ (Virat Kohli) ಟಿ20 ಆ ಮಾದರಿಯಲ್ಲಿ ಉಳಿಯುತ್ತಾರೆಯೇ ಎಂಬುದನ್ನು ನಿರ್ಧರಿಸಬೇಕು. ಹೀಗಾಗಿ ಇನ್ನೊಂದು ವಾರದಲ್ಲಿ ಕೊಹ್ಲಿ ಮತ್ತು ರೊಹಿತ್ ಶರ್ಮಾ ಜೋಡಿಯು ಟಿ20 ಕ್ರಿಕೆಟ್ ಭವಿಷ್ಯ ನಿರ್ಧಾರವಾಗಲಿದೆ.

ಎರಡೂ ವೈಟ್-ಬಾಲ್ ಸರಣಿಗಳಿಗೆ ತಂಡಗಳನ್ನು ಒಟ್ಟಿಗೆ ಘೋಷಣೆಯಾಗಲಿದೆ. ಆದಾಗ್ಯೂ, ಭಾರತ ಎ ಸರಣಿ ಆಡುವ ತನಕ ಟೆಸ್ಟ್ ತಂಡದ ಘೋಷಣೆ ಆಗಲಾರದು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಡಿಸೆಂಬರ್ 26 ರಿಂದ ಪ್ರಾರಂಭವಾಗುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಖಚಿತ. ಆದರೆ, ಟಿ20 ಕ್ರಿಕೆಟ್​ ಭವಿಷ್ಯ ಏನು ಎಂಬುದೇ ಕೌತುಕ.

ಸೋಮವಾರದ ವಾರಾಂತ್ಯದಲ್ಲಿ ತಂಡವನ್ನು ಆಯ್ಕೆ ಮಾಡಲಾಗುವುದು. ಈ ವೇಳೆ ಚರ್ಚಿಸಲು ಬಹಳಷ್ಟು ವಿಷಯಗಳಿವೆ. ಆದರೆ ಟೆಸ್ಟ್​ಗೆ ಮುನ್ನ ನಮ್ಮ ತಂಡ ಟಿ20 ಮತ್ತು ಏಕದಿನ ಪಂದ್ಯಗಳನ್ನು ಆಡಲಿದೆ. ಹೀಗಾಗಿ ದೊಡ್ಡ ನಿರ್ಧಾರ ಸಭೆಯಲ್ಲಿ ಪ್ರಕಟವಾಗಲಿದೆ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Exit mobile version