ಚೆನ್ನೈ: ಭಾನುವಾರದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ(virat kohli) ಅವರು ಕೇವಲ 15 ರನ್ಗಳಿಂದ ಶತಕ ವಂಚಿತರಾದರು. ಇದೇ ಬೇಸರದಲ್ಲಿ ಕೊಹ್ಲಿ ಡ್ರೆಸಿಂಗ್ ರೂಮ್ಗೆ ತೆರಳಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ತಲೆಯನ್ನು ಕೈಗಳಿಂದ ಚಚ್ಚಿಕೊಂಡಿದ್ದಾರೆ. ಈ ವಿಡಿಯೊ ವೈರಲ್(Viral Video) ಆಗಿದೆ.
ಅಗ್ರ ಕ್ರಮಾಂಕದ ಆಟಗಾರರಾದ ರೋಹಿತ್ ಶರ್ಮ, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಶೂನ್ಯ ಸುತ್ತಿ ಪೆವಿಲಿಯನ್ಗೆ ಹೋದರೂ ಧೃತಿಗೆಡದೆ ಕೆ.ಎಲ್ ರಾಹುಲ್ ಜತೆ ಬ್ಯಾಟಿಂಗ್ ನಡೆಸಿದ ವಿರಾಟ್ಗೆ ಮಾರ್ಷ್ ಅವರಿಂದ ಜೀವದಾನವೊಂದು ಲಭಿಸಿಸಿತು. ಇದರ ಸಂಪೂರ್ಣ ಲಾಭವೆತ್ತಿದ ಕೊಹ್ಲಿ ಅರ್ಧಶತಕ ಬಾರಿಸಿದರು. 85 ರನ್ ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ವೇಳೆ ಹ್ಯಾಜಲ್ವುಡ್ ಓವರ್ನಲ್ಲಿ ಲಬುಶೇನ್ಗೆ ಕ್ಯಾಚ್ ನೀಡಿ ವಿಕೆಟ್ ಕೈಚೆಲ್ಲಿದರು. ಶತಕ ವಂಚಿತನಾದ ಸಿಟ್ಟಿನಲ್ಲೇ ಪೆವಿಲಿಯನ್ಗೆ ನಡೆದ ಕೊಹ್ಲಿ ಡ್ರೆಸಿಂಗ್ ರೂಮ್ ಪ್ರವೇಶಿಸಿದೊಡನೆಯೇ ತಮ್ಮ ಗ್ಲೌಸ್ಗಳನ್ನು ಬೀಸಾಡಿದರು. ಆ ಬಳಿಕ ಆಟಗಾರರ ಮಧ್ಯೆ ಕುಳಿತುಕೊಳ್ಳುವ ವೇಳೆ ತಲೆಗೆ ಕೈಗಳಿಂದ ಚಚ್ಚಿಕೊಂಡಿದ್ದಾರೆ. ಈ ಎಲ್ಲ ದೃಶ್ಯಗಳು ಇದೀಗ ವೈರಲ್ ಆಗಿದೆ.
Virat Kohli was looking very angry, sad and frustrated at same time💔#INDvsAUS #ViratKohli pic.twitter.com/p9Jy1BTk8I
— Abhishek (@Abhishekkk_k) October 8, 2023
ಕೊಹ್ಲಿ 116 ಎಸೆತ ಎದುರಿಸಿ 6 ಬೌಂಡರಿ ನೆರವಿನಿಂದ 85 ಬಾರಿಸಿದರು. ಕೆ.ಎಲ್ ರಾಹುಲ್ ಜತೆ ಸೇರಿಕೊಂಡು ನಾಲ್ಕನೇ ವಿಕೆಟ್ಗೆ 167 ರನ್ಗಳ ಅತ್ಯಮೂಲ್ಯ ಜತೆಯಾಟ ನಡೆಸಿ ತಂಡದ ಗೆಲುವಿನಲ್ಲಿ ಕೊಹ್ಲಿ ಕೂಡ ಪ್ರಮುಖ ಪಾತ್ರವಹಿಸಿದರು. ರಾಹುಲ್ 8 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿ 97 ರನ್ ಗಳಿಸಿ ಅಜೇಯರಾಗಿ ಉಳಿದರು. ಉಭಯ ಆಟಗಾರರು ತಾಳ್ಮೆಯುತ ಆಟವಾಡದೇ ಹೋಗಿದ್ದರೆ ಭಾರತ 100ರೊಳಗೆ ಗಂಟು ಮೂಟೆ ಕಟ್ಟಿ ಸೋಲು ಕಾಣುತ್ತಿತ್ತು.
ದಾಖಲೆ ಬರೆದ ಕೊಹ್ಲಿ
ಶತಕ ಕಳೆದುಕೊಂಡರೂ ವಿರಾಟ್ ಕೊಹ್ಲಿ ವಿಶ್ವಕಪ್ ಟೂರ್ನಿ ಇತಿಹಾಸದಲ್ಲಿ ಭಾರತ ಪರ ನೂತನ ದಾಖಲೆ ಬರೆದಿದ್ದಾರೆ. ಅತಿ ಹೆಚ್ಚು ರನ್ ಗಳಿಸಿದ 2ನೇ ಭಾರತೀಯ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. 2278 ರನ್ ಕಲೆಹಾಕಿರುವ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ ಸದ್ಯ 1050* ರನ್ ಗಳಿಸಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಉತ್ತಮ ರನ್ ಕಲೆಹಾಕಿದರೆ ಸಚಿನ್ ಅವರ ದಾಖಲೆಯನ್ನು ಮುರಿಯುವ ಅವಕಾಶವಿದೆ.
ಇದನ್ನೂ ಓದಿ IND vs PAK: ಪಾಕ್ ವಿರುದ್ಧ ಕೇಸರಿ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಟೀಮ್ ಇಂಡಿಯಾ
ಸಚಿನ್ ದಾಖಲೆ ಪತನ
ಕೊಹ್ಲಿ ಅವರು ಚೇಸಿಂಗ್ ವೇಳೆ ಅತಿ ಕಡಿಮೆ ಇನಿಂಗ್ಸ್ನಲ್ಲಿ ಅತ್ಯಧಿಕ ರನ್ ಗಳಿಸಿದ ಸಚಿನ್ ಅವರ ದಾಖಲೆಯನ್ನು ಮುರಿದಿದ್ದಾರೆ. ಸಚಿನ್ ಅವರು ಚೇಸಿಂಗ್ ವೇಳೆ 124 ಇನಿಂಗ್ಸ್ನಲ್ಲಿ 5,490 ರನ್ ಗಳಿಸಿದ್ದರು. ಇದೀಗ ಕೊಹ್ಲಿ 92 ಇನಿಂಗ್ಸ್ನಲ್ಲಿ 5,517 ರನ್ ಬಾರಿಸಿ ಈ ದಾಖಲೆಯನ್ನು ಮೀರಿ ನಿಂತಿದ್ದಾರೆ.
3ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಕೊಹ್ಲಿ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. 3ನೇ ಕ್ರಮಾಂಕದಲ್ಲಿ 11 ಸಾವಿರ ರನ್ ಪೂರೈಸಿರುವ ಕೊಹ್ಲಿ, ಈ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಸಾಲಿನಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಆಸೀಸ್ನ ವಿಶ್ವಕಪ್ ವಿಜೇತ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ (12,662 ರನ್) ಅಗ್ರಸ್ಥಾನ ಪಡೆದಿದ್ದಾರೆ. ಶ್ರೀಲಂಕಾದ ಕುಮಾರ ಸಂಗಕ್ಕಾರ (9747 ರನ್) ನಂತರದ ಸಾಲಿನಲ್ಲಿದ್ದಾರೆ.