ಕೇಪ್ಟೌನ್: ಇತ್ತೀಗೆ ಭಾರತ ವಿರುದ್ಧದ ಟೆಸ್ಟ್ ಸರಣಿ ಆಡುವ ಮೂಲಕ ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ದಕ್ಷಿಣ ಆಫ್ರಿಕಾ ತಂಡದ ಆಟಗಾರ ಡೀನ್ ಎಲ್ಗರ್(Dean Elgar) ಅವರು ವಿರಾಟ್ ಕೊಹ್ಲಿಯ(Virat Kohli) ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಟೆಸ್ಟ್ ಪಂದ್ಯವೊಂದರಲ್ಲಿ ಕೊಹ್ಲಿ ತಮ್ಮ ಮೇಲೆ ಉಗುಳಿದ್ದರು, ಇದಾದ 2 ವರ್ಷಗಳ ಬಳಿಕ ಕ್ಷೆಮೆಯಾಚಿಸಿದ್ದರು ಎಂದು ಹೇಳಿದ್ದಾರೆ.
ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡುವ ವೇಳೆ ಈ ವಿಚಾರವನ್ನು ಎಲ್ಗರ್ ಬಹಿರಂಗಪಡಿಸಿದ್ದಾರೆ. ‘ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅತ್ಯತ್ತಮ ಆಟಗಾರ. ಆದರೆ, ಹಿಂದೊಮ್ಮೆ ಅವರು ನನ್ನ ಮೇಲೆ ಉಗುಳಿದ್ದರು. ಈ ಘಟನೆ ನಡೆದ 2 ವರ್ಷಗಳ ಬಳಿಕ ಕೊಹ್ಲಿ ನನ್ನ ಬಳಿ ಕ್ಷೆಯಾಚಿಸಿದ್ದರು. ಕೊಹ್ಲಿ ಕ್ಷಮೆ ಕೇಳಲು ಎಬಿ ಡಿ ವಿಲಿಯರ್ಸ್(AB de Villiers) ಕಾರಣ. ಕೊಹ್ಲಿ ನನ್ನ ಮೇಲೆ ಉಗುಳಿದ ವಿಷಯ ಎಬಿಡಿಗೆ ತಿಳಿದಾಗ ಅವರು ಐಪಿಎಲ್ ವೇಳೆ, ಕೊಹ್ಲಿಯನ್ನು ಪ್ರಶ್ನಿಸಿದ್ದಾರೆ. ಬಳಿಕ ದ. ಆಫ್ರಿಕಾಕ್ಕೆ ಬಂದಿದ್ದ ವೇಳೆ ಕೊಹ್ಲಿ ನನ್ನ ಜತೆ ಕ್ಷಮೆ ಕೋರಿದ್ದರು. ಆ ದಿನ ಇಬ್ಬರೂ ಬೆಳಗ್ಗಿನ ಜಾವ 3ರ ವರೆಗೂ ಕುಡಿದಿದ್ದೆವು’ ಎಂದು ಎಲ್ಗರ್ ಹೇಳಿದ್ದಾರೆ. ಈ ಘಟನೆ 2015ರ ಭಾರತ ಪ್ರವಾಸದ ವೇಳೆ ನಡೆದಿರಬಹುದು ಎಂದು ಮೂಲಗಳು ತಿಳಿಸಿದೆ. ಆದರೆ ಖಚಿತತೆ ಇಲ್ಲ.
ಇದನ್ನೂ ಓದಿ Fighter Movie: ಪಿ.ವಿ.ಸಿಂಧು ಗಮನ ಸೆಳೆದ ‘ಫೈಟರ್’; ಚಿತ್ರದ ಬಗ್ಗೆ ಬ್ಯಾಡ್ಮಿಂಟನ್ ತಾರೆ ಹೇಳಿದ್ದೇನು?
ಜೆರ್ಸಿ ನೀಡಿದ್ದ ಕೊಹ್ಲಿ
ಇದೇ ವರ್ಷಾರಂಭದಲ್ಲಿ ಭಾರತ ವಿರುದ್ಧದ ತವರಿನಲ್ಲಿ ದ್ವಿತೀಯ ಟೆಸ್ಟ್ ಪಂದ್ಯವನ್ನಾಡುವ ಮೂಲಕ ಎಲ್ಗರ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಈ ವೇಳೆ ಎಲ್ಗರ್ಗೆ ವಿರಾಟ್ ಕೊಹ್ಲಿ ತಮ್ಮ ಜೆರ್ಸಿಯನ್ನು ನೆನಪಿನ ಕಾಣಿಕೆಯಾಗಿ ನೀಡಿದ್ದರು. ವೃತ್ತಿಜೀವನದ ಕೊನೆಯ ಟೆಸ್ಟ್ ಆಡುತ್ತಿದ್ದ ಡೀನ್ ಎಲ್ಗರ್ ಅವರು ಔಟ್ ಆದ ವೇಳೆಯೂ ಇದನ್ನು ಸಂಭ್ರಮಿಸದಂತೆ ವಿರಾಟ್ ಕೊಹ್ಲಿ ನೆರೆದಿದ್ದ ಅಭಿಮಾನಿಗಳಿಗೆ ಹಾಗೂ ಪ್ರೇಕ್ಷಕರಿಗೆ ಕೇಳಿಕೊಂಡಿದ್ದರು. ಸಂಭ್ರಮದ ಬದಲು ಅವರಿಗೆ ಗೌರವ ಸೂಚಿಸುವಂತೆ ಮೈದಾನದಿಂದಲೇ ಮನವಿ ಮಾಡಿದ್ದರು.
Dean Elgar 🤝🏻 Virat Kohli
— Ankit Ahlawat (@ankittahlawat) January 4, 2024
RESPECT!! 🇮🇳🇿🇦#DeanElgar #INDvSA pic.twitter.com/FUq6h0WTte
ಎಲ್ಗರ್ ಅವರು 2012ರ ಪರ್ತ್ ಟೆಸ್ಟ್‌ನಲ್ಲಿ ಆಡುವ ಮೂಲಕ ದಕ್ಷಿಣ ಆಫ್ರಿಕಾ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ಆಡುವ ಮೂಲಕ ಅವರು ತಮ್ಮ ಇನಿಂಗ್ಸ್ ಆರಂಭಿಸಿದ್ದರು. ಆ ಬಳಿಕ ಅವರು ಆರಂಭಿಕ ಆಟಗಾರನಾಗಿ ಭಡ್ತಿ ಪಡೆದರು. ನಾಯಕನಾಗಿ 18 ಬಾರಿ ತಂಡವನ್ನು ಮುನ್ನಡೆಸಿ ಸಾಧನೆಯೂ ಅವರದ್ದಾಗಿದೆ. ಭಾರತ ವಿರುದ್ಧ ಅಂತಿಮ ಟೆಸ್ಟ್ ಆಟುವ ಮೂಲಕ ಅವರ 12 ವರ್ಷಗಳ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದರು.