ಕೋಲ್ಕೊತಾ: 35ನೇ ವಸಂತಕ್ಕೆ ಕಾಲಿಟ್ಟ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಅವರಿಗೆ ಬಂಗಾಳ ಕ್ರಿಕೆಟ್ ಮಂಡಳಿ ಚಿನ್ನದ ಲೇಪಿತ ಬ್ಯಾಟ್ ಉಡುಗೊರೆ ನೀಡಲು ನಿರ್ಧರಿಸಿದೆ. ಕೋಲ್ಕೊತ್ತಾದ ಪ್ರಸಿದ್ಧ ಈಡನ್ ಗಾರ್ಡನ್ನಲ್ಲಿ ಕೊಹ್ಲಿಯ ಹುಟ್ಟುಹಬ್ಬನ್ನು ಭರ್ಜರಿಯಾಗಿ ಆಚರಿಸಿಲು ಬಂಗಾಳ ಕ್ರಿಕೆಟ್ ಮಂಡಳಿ ವ್ಯವಸ್ಥೆಯನ್ನು ಮಾಡಿತ್ತು. ಆದರೆ ಐಸಿಸಿ ನಿಯಮದ ಉಲ್ಲಂಘನೆಯಾಗುವ ನಿಟ್ಟಿನಲ್ಲಿ ದಿಢೀರ್ ರದ್ದುಗೊಳಿಸಿತ್ತು.
ವಿರಾಟ್ ಅವರ ಹುಟ್ಟುಹಬ್ಬ ಆಚರಣೆ ರದ್ದುಗೊಂಡ ಬೆನ್ನಲೇ ಏನಾದರೂ ಉಡುಗೊರೆ ನೀಡಲು ನಿರ್ಧರಿಸಿದ ಪಂದ್ಯದ ಆಯೋಜಕರು ಪರ್ಯಾಯ ಮಾರ್ಗ ಕಂಡುಕೊಂಡಿದ್ದು ಚಿನ್ನದ ಲೇಪಿತ ಬ್ಯಾಟ್ ಗಿಫ್ಟ್ ನೀಡಲು ನಿರ್ಧರಿಸಿದೆ.
70 ಸಾವಿರ ಮಾಸ್ಕ್ ವಿತರಣೆ ರದ್ದು
ವಿರಾಟ್ ಕೊಹ್ಲಿಯ ಜನ್ಮದಿನವಾದ ಕಾರಣ ಬಂಗಾಳ ಕ್ರಿಕೆಟ್ ಮಂಡಳಿ ವಿನೂತನ ಶೈಲಿಯ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಪಂದ್ಯ ನಡೆಯುವ ವೇಳೆ 70 ಸಾವಿರ ಕೊಹ್ಲಿಯ ಫೋಟೊ ಇರುವ ಮಾಸ್ಕ್ಗಳನ್ನು ಅಭಿಮಾನಿಗಳಿಗೆ ಉಚಿತವಾಗಿ ವಿತರಿಸಲು ನಿರ್ಧರಿಸಿತ್ತು. ಆದರೆ ಐಸಿಸಿ ನಿಯಮ ಉಲ್ಲಂಘನೆಯಾಗುವ ನಿಟ್ಟಿನಲ್ಲಿ ಅಂತಿಮ ಕ್ಷಣದಲ್ಲಿ ಈ ಕಾರ್ಯಕ್ರಮವನ್ನು ರದ್ದುಗೊಳಿಸಿತ್ತು.
ಇದನ್ನೂ ಓದಿ Virat Kohli Birthday: 35ನೇ ವರ್ಷಕ್ಕೆ ಕಾಲಿಟ್ಟ ವಿರಾಟ್ ಕೊಹ್ಲಿಯ ಸಾಧನೆಗಳು…
ಡ್ರೆಸ್ಸಿಂಗ್ ರೂಮ್ನಲ್ಲಿ ಸೆಲೆಬ್ರೇಷನ್
ಐಸಿಸಿ ನಿಯಮ ಉಲ್ಲಂಘನೆಯಾಗುವ ನಿಟ್ಟಿನಲ್ಲಿ ಕೊಹ್ಲಿ ಅವರ ಹುಟ್ಟುಹಬ್ಬವನ್ನು ಕೇವಲ ಡ್ರೆಸ್ಸಿಂಗ್ ರೂಮ್ನಲ್ಲಿ ಮಾತ್ರ ಆಚರಿಸಲು ನಿರ್ಧರಿಸಲಾಗಿದೆ. ಇದೇ ವೇಳೆ ಕೊಹ್ಲಿಗೆ ಬಂಗಾಳ ಕ್ರಿಕೆಟ್ ಮಂಡಳಿಯ ವತಿಯಿಂದ ಚಿನ್ನದ ಲೇಪಿತ ಬ್ಯಾಟ್ ಗಿಫ್ಟ್ ನೀಡಲಾಗುವುದು. ಪಂದ್ಯ ಮುಕ್ತಾಯದ ಬಳಿಕ ಈ ಕಾರ್ಯಕ್ರಮ ಇರಲಿದೆ ಎಂದು ಸಿಎಬಿ ಮುಖ್ಯಸ್ಥ ಸ್ನೇಹಶಿಶ್ ಗಂಗೂಲಿ ತಿಳಿಸಿದ್ದಾರೆ.
ಶುಭ ಹಾರೈಸಿದ ಬಿಸಿಸಿಐ
ಬಿಸಿಸಿಐ ವಿರಾಟ್ ಕೊಹ್ಲಿಗೆ ವಿಶೇಷವಾಗಿ ಶುಭ ಹಾರೈಸಿದೆ. “514 ಪಂದ್ಯಗಳು ಮತ್ತು ಎಣಿಕೆ, 26,209 ರನ್ ಮತ್ತು ಎಣಿಕೆ” ಎಂದು ಬರೆದು ಹಾರೈಸಿದೆ. ಜತೆಗೆ 2011ರ ವಿಶ್ವಕಪ್ನಿಂದ 2013ರ ಚಾಂಪಿಯನ್ಸ್ ಟ್ರೋಫಿ ವಿನ್ನರ್ ಎಂದು ಬರೆದು “ಇಂಡಿಯಾದ ಮಾಜಿ ಕ್ಯಾಪ್ಟನ್ ಹಾಗೂ ಆಧುನಿಕ ಕ್ರಿಕೆಟ್ನ ಶ್ರೇಷ್ಠ ಬ್ಯಾಟರ್ ಕಿಂಗ್ ಕೊಹ್ಲಿಗೆ ಜನ್ಮದಿನದ ಶುಭಾಶಯಗಳು” ಎಂದು ಬಿಸಿಸಿಐ ತನ್ನ ಟ್ವಿಟರ್ ಎಕ್ಸ್ ಖಾತೆಯಲ್ಲಿ ಶುಭ ಕೋರಿದೆ.
ಮಾಜಿ ಆಟಗಾರರಾದ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹವಾಗ್, ಎಬಿಡಿ ವಿಲಿಯರ್ಸ್, ಕಾಮೆಂಟ್ರೇಟರ್ ಹರ್ಷ ಬೋಗ್ಲೆ, ರಾಯಲ್ ಚಾಲೆಂಜ್ ಬೆಂಗಳೂರು ಸೇರಿ ಅನೇಕರು ಕೊಹ್ಲಿಗೆ ಶುಭ ಹಾರೈಸಿದ್ದಾರೆ.
ಕೊಹ್ಲಿ ಸಾಧನೆ
ವಿರಾಟ್ ಕೊಹ್ಲಿ ಅವರು ಇದುವರೆಗೆ ಒಟ್ಟು 288* ಏಕದಿನ ಪಂದ್ಯಗಳನ್ನು ಆಡಿ 58.27 ರ ಸರಾಸರಿಯಲ್ಲಿ 13,525 ರನ್ ಗಳಿಸಿದ್ದಾರೆ. ಇದರಲ್ಲಿ 48* ಶತಕ ಮತ್ತು 71 ಅರ್ಧಶತಕ ಒಳಗೊಂಡಿದೆ. ಬೌಲಿಂಗ್ನಲ್ಲೂ 4 ವಿಕೆಟ್ ಪಡೆದಿದ್ದಾರೆ. ಟೆಸ್ಟ್ನಲ್ಲಿ 111 ಪಂದ್ಯಗಳಲ್ಲಿ 8676 ರನ್ ಗಳಿಸಿದ್ದು, 29 ಶತಕ, 7 ದ್ವಿಶತಕ ಮತ್ತು 29 ಅರ್ಧಶತಕ ಸಿಡಿಸಿದ್ದಾರೆ. 254 ಅವರ ಗರಿಷ್ಠ ವೈಯಲ್ತಿಕ ಮೊತ್ತಾವಾಗಿದೆ. 115 ಟಿ20 ಪಂದ್ಯವಾಡಿ 4,008 ರನ್ ಬಾರಿಸಿದ್ದಾರೆ. ಇದರಲ್ಲಿ 37 ಅರ್ಧಶತಕ ಮತ್ತು 1 ಶತಕ ದಾಖಲಾಗಿದೆ. ಮೂರು ಮಾದರಿಯ ಕ್ರಿಕೆಟ್ನಲ್ಲಿ ಒಟ್ಟು 26,209 ರನ್ ಬಾರಿಸಿದ್ದಾರೆ.