ಮುಂಬಯಿ: ಆಗಸ್ಟ್ 18, 2008 ರಂದು ಭಾರತ ಕ್ರಿಕೆಟ್ (Team India) ತಂಡಕ್ಕೆ ಪಾದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ (Virat Kohli) ಕ್ರಿಕೆಟ್ ಇತಿಹಾಸದಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಅಂದಿನಿಂದ, ಅವರು ಎಲ್ಲಾ ಸ್ವರೂಪಗಳ ಕ್ರಿಕೆಟ್ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಹಾಗೂ ಇಂಡಿಯಾ ನಾಯಕರಾಗಿ ಯಶಸ್ಸು ಕಂಡಿದ್ದಾರೆ. ಶುಕ್ರವಾರಕ್ಕೆ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 15 ವರ್ಷಗಳನ್ನು (15 Years of International Cricket) ಪೂರ್ಣಗೊಳಿಸಿದ್ದಾರೆ. ಈ ವೇಳೆ ಅವರ ಅಪ್ಪಟ ಅಭಿಮಾನಿಗಳು ಸಾರ್ವಕಾಲಿಕ ಶ್ರೇಷ್ಠ ಆಟಗಾರನನ್ನು ಮನದುಂಬಿ ಶ್ಲಾಘಿಸಿದ್ದಾರೆ. ಟಿ20 ಐ ಮತ್ತು ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವುದು ಸೇರಿದಂತೆ ಅವರು ಕ್ರಿಕೆಟ್ ಕಾರಿಡಾರ್ನಲ್ಲಿ ಸಾಕಷ್ಟು ದಾಖಲೆಗಳನ್ನು ಹೊಂದಿದ್ದಾರೆ. ಏಕದಿನ ಪಂದ್ಯಗಳಲ್ಲಿ ವೇಗವಾಗಿ 10,000 ರನ್ ಗಳಿಸಿದ ಆಟಗಾರರಾಗಿದ್ದಾರೆ.
2011 ರ ವಿಶ್ವಕಪ್ ಮತ್ತು 2013 ರ ಚಾಂಪಿಯನ್ಸ್ ಟ್ರೋಫಿ ವಿಜಯಗಳನ್ನು ತಮ್ಮದಾಗಿಸಿಕೊಂಡಿರುವ ವಿರಾಟ್ ಕೊಹ್ಲಿ ಐಸಿಸಿ 2020 ರಲ್ಲಿ ದಶಕದ ಕ್ರಿಕೆಟಿಗ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಅವರ ಸಾಧನೆಗಳ ಹೊರತಾಗಿಯೂ ಮಾಜಿ ಭಾರತ ಮತ್ತು ಆರ್ಸಿಬಿ ಮಾಜಿ ನಾಯಕ ತಮ್ಮ ಆಟವನ್ನು ಅದೇ ರೀತಿಯಲ್ಲಿ ಮುಂದುವರಿಸಿದ್ದಾರೆ. ಈ ದೀರ್ಘ ಪಯಣವನ್ನು ಸ್ಮರಿಸಲು ವಿರಾಟ್ ಕೊಹಲ್ಇ ಸಾಮಾಜಿಕ ಜಾಲತಾಣದಲ್ಲಿ ಒಂದು ಚಿತ್ರವನ್ನು ಹಾಕಿಕೊಂಡಿದ್ದಾರೆ, ಅದು 2022ರ ಟಿ20 ವಿಶ್ವ ಕಪ್ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬಾರಿಸಿದ ಅಮೋಘ ಇನಿಂಗ್ಸ್ ಬಳಿಕದ ಚಿತ್ರವಾಗಿದೆ.
2022 ರ ಟಿ 20 ವಿಶ್ವ ಕಪ್ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಮೋಘ 82 ರನ್ ಬಾರಿಸಿದ್ದರು. ಗೆಲುವಿನ ಬಳಿಕ ಅವರು ಆಕಾಶಕ್ಕೆ ಬೆರಳು ತೋರಿದ್ದರು. ಆ ಚಿತ್ರವನ್ನು 34 ವರ್ಷದ ಧೋನಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದಕ್ಕೆ “ಎಂದೆಂದಿಗೂ ಕೃತಜ್ಞರಾಗಿರುತ್ತೇನೆ” ಎಂದು ಶೀರ್ಷಿಕೆ ಕೊಟ್ಟಿದ್ದಾರೆ.
ಸ್ಮರಣೀಯ ಇನಿಂಗ್ಸ್
ಪಂದ್ಯದಲ್ಲಿ, ಕೊಹ್ಲಿ 53 ಎಸೆತಗಳಲ್ಲಿ ಆರು ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್ಗಳೊಂದಿಗೆ ಅಜೇಯ 82 ರನ್ ಗಳಿಸಿದ್ದರು. ಇದು ಭಾರತ ತಂಡಕ್ಕೆ ನಾಲ್ಕು ವಿಕೆಟ್ಗಳಿಂದ ಗೆಲ್ಲಲು ಸಹಾಯ ಮಾಡಿತ್ತು. ಭಾರತವು ಸೆಮಿಫೈನಲ್ನಲ್ಲಿ ಅಂತಿಮವಾಗಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಸೋತರೂ, ಅವರು ಪಂದ್ಯಾವಳಿಯ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು ವಿರಾಟ್ ಕೊಹ್ಲಿ. ಅವರು 6 ಇನ್ನಿಂಗ್ಸ್ಗಳಲ್ಲಿ 296 ರನ್ ಬಾರಿಸಿದ್ದು, 82* ಗರಿಷ್ಠ ಸ್ಕೋರ್ ಗಳಿಸಿದ್ದರು. ಅದು ಪಾಕಿಸ್ತಾನ ವಿರುದ್ಧದ ಇನಿಂಗ್ಸ್. 34 ವರ್ಷದ ಆಟಗಾರ ಸೆಮಿಫೈನಲ್ನಲ್ಲಿ ಅರ್ಧಶತಕವನ್ನೂ ಬಾರಿಸಿದ್ದರು.
ವಿರಾಟ್ ಕೊಹ್ಲಿ ಬಗ್ಗೆ ಬಿಸಿಸಿಐನ ಜಯ್ ಶಾ ಟ್ವೀಟ್ ಮಾಡಿದ್ದಾರೆ. “ಅಂತಾರಾಷ್ಟ್ರೀಯ ಕ್ರಿಕೆಟ್ಗೆ 15 ವರ್ಷಗಳ ಅಚಲ ಬದ್ಧತೆಗೆ ಅಭಿನಂದನೆಗಳು. ನಿಮ್ಮ ಉತ್ಸಾಹ, ಪರಿಶ್ರಮ ಮತ್ತು ಗಮನಾರ್ಹ ಸಾಧನೆಗಳು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿವೆ. ನಿಮಗೆ ನಿರಂತರ ಯಶಸ್ಸು ಮತ್ತು ಮುಂದೆ ಇನ್ನೂ ಅನೇಕ ಮೈಲಿಗಲ್ಲುಗಳು ಸಿಗಲಿ ಎಂದು ಹಾರೈಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಕೊಹ್ಲಿ 2012, 2017, 2018ರಲ್ಲಿ ಐಸಿಸಿ ವರ್ಷದ ಏಕದಿನ ಆಟಗಾರ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2018ರಲ್ಲಿ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಗೂ ಭಾಜನರಾಗಿದ್ದರು. ಏತನ್ಮಧ್ಯೆ, ಅವರು 2017 ಮತ್ತು 2018 ರಲ್ಲಿ ಐಸಿಸಿ ವರ್ಷದ ಕ್ರಿಕೆಟ್ ಸಾಧನೆಗಾಗಿ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ.