Site icon Vistara News

Virat Kohli: ಕೊಹ್ಲಿ ಕಾಲಿಗೆ ಬಿದ್ದ ಅಭಿಮಾನಿಗೆ ಅಮಾನುಷವಾಗಿ ಥಳಿಸಿದ ವಿಡಿಯೊ ವೈರಲ್​

Virat Kohli fan touched his feet

ಬೆಂಗಳೂರು: ಸೋಮವಾರ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(RCB vs PBKS) ಹಾಗೂ ಪಂಜಾಬ್‌ ಕಿಂಗ್ಸ್‌ ನಡುವಿನ ಪಂದ್ಯದ ವೇಳೆ ಅಭಿಮಾನಿಯೋರ್ವ ಮೈದಾನಕ್ಕೆ ನುಗ್ಗಿ ವಿರಾಟ್‌ ಕೊಹ್ಲಿಯ(Virat Kohli) ಕಾಲಿಗೆ ಬಿದ್ದ ಪ್ರಸಂಗ ಜರುಗಿತ್ತು(Fan touches Virat’s feet). ಆತನ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ. ಇದೀಗ ಆತನಿಗೆ ಸ್ಟೇಡಿಯಂ ಸಿಬ್ಬಂದಿ ಅಮಾನುಷವಾಗಿ ಥಳಿಸಿದ ಘಟನೆ ನಡೆದಿದ್ದು, ತಡವಾಗಿ ಇದು ಬೆಳಕಿಗೆ ಬಂದಿದೆ. ಇದರ ವಿಡಿಯೊ ಈಗ ಎಲ್ಲಡೆ ವೈರಲ್​ ಆಗಿದ್ದು. ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ವೈರಲ್​ ವಿಡಿಯೊ ಇಲ್ಲಿದೆ…


ವಿರಾಟ್​ ಕೊಹ್ಲಿಯ ಅಪ್ಪಟ ಅಭಿಮಾನಿಯಾಗಿರುವ ರಾಯಚೂರು ಮೂಲದ ಕುರುಮಪ್ಪ‌ ಎನ್ನುವ ಅಭಿಮಾನಿ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಪಿಚ್‌ ಕಡೆ ಬಂದು ಕೊಹ್ಲಿ ಕಾಲಿಗೆ ಬಿದ್ದು, ಆಲಿಂಗನ ಮಾಡಿದ್ದ. ಕೂಡಲೇ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಮೈದಾನದಿಂದ ಹೊರಹಾಕಿದ್ದರು. ಇದರ ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿತ್ತು. ಆದರೆ ಆ ಬಳಿಕ ಏನು ನಡೆದಿದೆ ಎನ್ನುವ ಘಟನೆ ಈಗ ಬೆಳಕಿಗೆ ಬಂದಿದೆ. ಸೆಲ್ಲಾರ್​ಗೆ ಕರೆತಂದ ಭದ್ರತಾ ಸಿಬ್ಬಂದಿ ಆತನಿಗೆ ಸರಿಯಾಗಿ ಥಳಿಸಿದ್ದಾರೆ. ಬೂಟು ಕಾಲಿನಿಂದ ಒದ್ದಿದ್ದಾರೆ. ಏಟು ತಿಂದ ಆತನಿಗೆ ಸರಿಯಾಗಿ ಎದ್ದು ನಿಲ್ಲಲು ಕೂಡ ಆಗುತ್ತಿರಲಿಲ್ಲ. ಇದೆಲ್ಲ ವಿಡಿಯೊದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ IPL 2024: ಐಪಿಎಲ್​ನಲ್ಲಿ ಮತ್ತೊಂದು ಹೊಸ ಪ್ರಯೋಗ ನಡೆಸಲು ಮುಂದಾದ ಬಿಸಿಸಿಐ

ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭದ್ರತಾ ಸಿಬ್ಬಂದಿಗಳ ಈ ಅಮಾನುಷ ಕೃತ್ಯಕ್ಕೆ ಹಲವು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಲಿಗೆ ಬಿದ್ದ ಕಾರಣಕ್ಕೆ ಆತನಿಗೆ ಈ ರೀತಿಯ ಶಿಕ್ಷೆ ನೀಡಿರುವುದು ನಿಜಕ್ಕೂ ಬೇಸರ ತಂದಿದೆ ಎಂದು ಹಲವರು ಕಮೆಂಟ್​ ಮಾಡಿದ್ದಾರೆ. ಮಾರ್ಚ್ 25 ರಂದು ಈ ನಡೆದಿದ್ದು.

ಪೊಲೀಸ್​ ವಿಚಾರಣೆ ವೇಳೆ ತನ್ನ ಮೂಲ ಹೆಸರನ್ನು ಮರೆ ಮಾಚಿ ರಂಜಿತ್ ಎಂದು ಹೇಳಿದ್ದ. ದಾಖಲೆಗಳನ್ನು ಪರಿಶೀಲಿಸುವ ವೇಳೆ ಈತ ರಂಜಿತ್​ ಅಲ್ಲ ಕುರುಮಪ್ಪ‌ ಎಂಬ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಆತನ ವಿರುದ್ಧ ಎಫ್ಐಆರ್ ದಾಖಲಿಸಿ ಕರ್ತವ್ಯಕ್ಕೆ ಅಡ್ಡಿ, ಮೈದಾನಕ್ಕೆ ಅತಿಕ್ರಮಣ ಪ್ರವೇಶದಡಿ ಕೇಸ್ ದಾಖಲಿಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 176 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆರ್​ಸಿಬಿ 19.2 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 178 ರನ್ ಬಾರಿಸಿ ಗೆಲುವು ಸಾಧಿಸಿತು. ನಿಧಾನಗತಿಯಲ್ಲಿ ಆಡಿದ ಕೊಹ್ಲಿ 49 ಎಸೆತಕ್ಕೆ 77 ರನ್ ಬಾರಿಸಿದರು.

Exit mobile version