ಮುಂಬಯಿ: ವಿಶ್ವ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್, ಲೆಜೆಂಡರಿ ಕ್ರಿಕೆಟರ್, ಕ್ರಿಕೆಟ್ ದೇವರು ಎಂದೆಲ್ಲ ನಾಮಾಂಕಿತರಾದ ಸಚಿನ್ ತೆಂಡೂಲ್ಕರ್(sachin tendulkar) ಅವರ ಏಕದಿನ ಕ್ರಿಕೆಟ್‌ನ 49ನೇ ಶತಕದ ದಾಖಲೆಯನ್ನು ವಿರಾಟ್ ಕೊಹ್ಲಿ(Virat Kohli) ಅವರು ಮುರಿದಿದ್ದಾರೆ. ಇಲ್ಲಿ ಕುತೂಹಲಕಾರಿ ಸಂಗತಿಯೊಂದಿದೆ. ಕಾಕತಾಳಿಯವಾಗಿ ಸಚಿನ್ ಅವರು ಕ್ರಿಕೆಟ್ಗೆ ಪದಾರ್ಪಣೆ ಮತ್ತು ವಿದಾಯ ಹೇಳಿದ ದಿನದಂದೇ ಸಚಿನ್ ದಾಖಲೆಯೊಂದು ಪತನಗೊಂಡಿದೆ.
ಸಚಿನ್ ಕ್ರಿಕೆಟ್ ಪದಾರ್ಪಣೆ
ಸಚಿನ್ ತೆಂಡೂಲ್ಕರ್ ಅವರಿಗೆ ನವೆಂಬರ್ 15 ಸ್ಮರಣೀಯ ದಿನ. ಈ ದಿನವನ್ನು ಅವರು ಮರೆಯಲು ಸಾಧ್ಯವಿಲ್ಲ. ಏಕೆಂದರೆ ಅವರು ಕ್ರಿಕೆಟ್ಗೆ ಪದಾರ್ಪಣೆ ಮತ್ತು ತಮ್ಮ ನೆಚ್ಚಿನ ಕ್ರಿಕೆಟ್ಗೆ ವೃತ್ತಿ ಜೀವನಕ್ಕೆ ತೆರೆ ಎಳೆದದ್ದು ಇದೇ ದಿನ. ಹೌದು, 1989ರ ನವೆಂಬರ್ 15ರಂದು ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯವನ್ನಾಡುವ ಮೂಲಕ ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮೊದಲ ಹೆಜ್ಜೆಯನ್ನಿಟ್ಟರು. ಈ ಪಂದ್ಯ ಕರಾಚಿಯಲ್ಲಿ ನಡೆದಿತ್ತು. ಆಗ ಸಚಿನ್ ಅವರು 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದರು. ಮೊದಲ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಅವಕಾಶ ಪಡೆದ ಅವರು 2 ಬೌಂಡರಿ ನೆರವಿನಿಂದ 15 ರನ್ ಬಾರಿಸಿದ್ದರು. ಈ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು.
ಕ್ರಿಕೆಟ್ ವಿದಾಯ…
ಸಚಿನ್ ಅವರು ತಮ್ಮ ಕ್ರಿಕೆಟ್ ವಿದಾಯ ಘೋಷಿಸಿದ್ದು ನವೆಂಬರ್ 15ರಂದೇ. ತಮ್ಮ ತವರಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ. 2013ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಆಡುವ ಮೂಲಕ ಎಲ್ಲ ಮಾದರಿಯ ಕ್ರಿಕೆಟ್ಗೆ ಸಚಿನ್ ವಿದಾಯ ಹೇಳಿದ್ದರು. ಕಾಕತಾಳಿಯ ಎಂಬಂತೆ ವಿರಾಟ್ ಕೊಹ್ಲಿ ಅವರು ನವೆಂಬರ್ 15ರಂದೇ ಸಚಿನ್ ಅವರ 50 ಶತಕಗಳ ವಿಶ್ವದಾಖಲೆಯನ್ನು ಮುರಿದದ್ದು. ಅದು ಕೂಡ ಸಚಿನ್ ಮುಂದೆಯೇ ಅವರ ತವರಿನ ಮೈದಾನದಲ್ಲಿ ಎನ್ನುವುದು ಇನ್ನೂ ವಿಶೇಷ. ಒಟ್ಟಾರೆ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರರಿಗೂ ಇದೀಗ ನ.15 ವಿಶೇಷ ದಿನವಾಗಿರಲಿದೆ.
ಸಚಿನ್ ಮೆಚ್ಚುಗೆ…
ನಾನು ನಿಮ್ಮನ್ನು ಮೊದಲ ಬಾರಿಗೆ ಭಾರತೀಯ ಡ್ರೆಸ್ಸಿಂಗ್ ರೂಮ್ನಲ್ಲಿ ಭೇಟಿಯಾದಾಗ ಇತರ ಸಹ ಆಟಗಾರರು ನನ್ನ ಪಾದಗಳನ್ನು ಮುಟ್ಟಿ ನಮಸ್ಕರಿಸುವಂತೆ ನಿಮ್ಮನ್ನು ತಮಾಷೆ ಮಾಡಿದ್ದರು. ಆ ದಿನ ನನಗೆ ನಗು ನಿಲ್ಲಿಸಲು ಸಾಧ್ಯವಾಗಲಿಲ್ಲ. ಆದರೆ ಶೀಘ್ರದಲ್ಲೇ, ನೀವು ನಿಮ್ಮ ಉತ್ಸಾಹ ಮತ್ತು ಕೌಶಲ್ಯದಿಂದಾಗಿ ನನ್ನ ಹೃದಯವನ್ನು ಸ್ಪರ್ಶಿಸಿದಿರಿ. ಆ ಹುಡುಗ ‘ವಿರಾಟ್’ ಆಟಗಾರನಾಗಿ ಬೆಳೆದಿದ್ದಾನೆ ಎಂದು ನನಗೆ ತುಂಬಾ ಸಂತೋಷವಾಗಿದೆ. ಒಬ್ಬ ಭಾರತೀಯ ಕ್ರಿಕೆಟಿಗ ನನ್ನ ದಾಖಲೆಯನ್ನು ಮುರಿದಿದ್ದಾನೆ ಎಂಬುದೇ ನನಗೆ ಸಂತೋಷದ ವಿಷಯ. ಅದೂ ದೊಡ್ಡ ಪಂದ್ಯವೊದರಲ್ಲಿ ಎಂಬುದು ಇನ್ನೂ ಖುಷಿಯ ಸಂಗತಿ. ಅದೂ ನನ್ನ ತವರು ಮೈದಾನವಾಗಿರುವ ವಾಂಖೆಡೆಯಲ್ಲಿ ಸಾಧನೆ ಮಾಡಿರುವುದಕ್ಕೆ ಖುಷಿಯಿದೆ ಎಂದು ಸಚಿನ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ ವಿಸ್ತಾರ ಸಂಪಾದಕೀಯ: ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ, ಯುವ ಕ್ರಿಕೆಟಿಗರಿಗೆ ಸ್ಫೂರ್ತಿ
ತಲೆಬಾಗಿ ನಮಿಸಿದ ಕೊಹ್ಲಿ
ವಿರಾಟ್ ಕೊಹ್ಲಿ ಅವರು ತಮ್ಮ ರೋಲ್ ಮಾಡೆಲ್ ಸಚಿನ್ ಅವರ ದಾಖಲೆ ಮುರಿಯುತ್ತಿದ್ದಂತೆ ಪ್ರೇಕ್ಷಕರ ಸ್ಟ್ಯಾಂಡ್ನಲ್ಲಿ ಕುಳಿತಿದ್ದ ಸಚಿನ್ಗೆ ತಲೆಬಾಗಿ ನಮಿಸಿದರು. ತೆಂಡೂಲ್ಕರ್ ಕೂಡ ಕೊಹ್ಲಿಯ ಸನ್ನೆಯನ್ನು ಚಪ್ಪಾಳೆ ತಟ್ಟಿ ಶ್ಲಾಘಿಸಿದರು. ಪಂದ್ಯದ ಬಳಿಕ ಸಚಿನ್ ಅವರು ಕೊಹ್ಲಿಯನ್ನು ಭೇಟಿಯಾಗಿ ತಬ್ಬಿಕೊಂಡು ಹಾರೈಸಿದರು.