ಮುಂಬಯಿ: ನ್ಯೂಜಿಲ್ಯಾಂಡ್ ವಿರುದ್ಧ ಸಾಗುತ್ತಿರುವ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ಅವರ ವಿಶ್ವಕಪ್ನ ಸಾರ್ವಕಾಲಿಕ ದಾಖಲೆಯೊಂದನ್ನು ಮುರಿದಿದ್ದಾರೆ. ವಿಶ್ವಕಪ್ ಆವೃತ್ತಿಯಲ್ಲಿ ಅತ್ಯಧಿಕ ರನ್ಗಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು ವಿಶ್ವಕಪ್ ಆವೃತ್ತಿಯೊಂದರಲ್ಲಿ 11 ಪಂದ್ಯಗಳನ್ನು ಆಡಿ 673 ರನ್ ಬಾರಿಸಿದ್ದರು. ಇದು ಈವರೆಗೆ ವಿಶ್ವಕಪ್ನ ದಾಖಲೆಯಾಗಿಯೇ ಉಳಿದಿತ್ತು. ಆದರೆ ಈ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ. ಹಾಲಿ ಆವೃತ್ತಿಯ ವಿಶ್ವಕಪ್ನಲ್ಲಿ ಸದ್ಯ 674* ಬಾರಿಸುವ ಮೂಲಕ ಈ ದಾಖಲೆ ಬರೆದರು.
ಒಂದೇ ಆವೃತ್ತಿಯ ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಅಗ್ರ ಆಟಗಾರರು
ಆಟಗಾರರು | ಪಂದ್ಯ | ಇನಿಂಗ್ಸ್ | ರನ್ |
ವಿರಾಟ್ ಕೊಹ್ಲಿ | 10* | 10* | 674* |
ಸಚಿನ್ ತೆಂಡೂಲ್ಕರ್ | 11 | 11 | 673 |
ಮ್ಯಾಥ್ಯೂ ಹೇಡನ್ | 11 | 10 | 659 |
ರೋಹಿತ್ ಶರ್ಮ | 9 | 9 | 648 |
ಡೇವಿಡ್ ವಾರ್ನರ್ | 10 | 10 | 647 |
ಶಕೀಬ್ ಅಲ್ ಹಸನ್ | 8 | 8 | 606 |
ರೋಹಿತ್ ದಾಖಲೆಯೂ ಪತನ
ವಿರಾಟ್ ಅವರು 55 ರನ್ ಗಳಿಸಿದ ವೇಳೆ ರೋಹಿತ್ ಶರ್ಮ ಅವರ ದಾಖಲೆಯನ್ನು ಹಿಂದಿಕ್ಕಿದರು. ರೋಹಿತ್ ಅವರು ಕಳೆದ ವಿಶ್ವಕಪ್ನಲ್ಲಿ 648 ಬಾರಿಸಿದ್ದರು.
ಕೊಹ್ಲಿ ಸಾಧನೆ
ವಿರಾಟ್ ಕೊಹ್ಲಿ ಅವರು ಇದುವರೆಗೆ ಒಟ್ಟು 291* ಏಕದಿನ ಪಂದ್ಯಗಳನ್ನು ಆಡಿ, 279 ಇನಿಂಗ್ಸ್ನಿಂದ 58.82 ರ ಸರಾಸರಿಯಲ್ಲಿ 14709* ರನ್ ಗಳಿಸಿದ್ದಾರೆ. ಇದರಲ್ಲಿ 49* ಶತಕ ಮತ್ತು 72 ಅರ್ಧಶತಕ ಒಳಗೊಂಡಿದೆ. ಬೌಲಿಂಗ್ನಲ್ಲೂ 5 ವಿಕೆಟ್ ಪಡೆದಿದ್ದಾರೆ. ಟೆಸ್ಟ್ನಲ್ಲಿ 111 ಪಂದ್ಯಗಳಲ್ಲಿ 8676 ರನ್ ಗಳಿಸಿದ್ದು, 29 ಶತಕ, 7 ದ್ವಿಶತಕ ಮತ್ತು 29 ಅರ್ಧಶತಕ ಸಿಡಿಸಿದ್ದಾರೆ. 254 ಅವರ ಗರಿಷ್ಠ ವೈಯಲ್ತಿಕ ಮೊತ್ತಾವಾಗಿದೆ. 115 ಟಿ20 ಪಂದ್ಯವಾಡಿ 4,008 ರನ್ ಬಾರಿಸಿದ್ದಾರೆ. ಇದರಲ್ಲಿ 37 ಅರ್ಧಶತಕ ಮತ್ತು 1 ಶತಕ ದಾಖಲಾಗಿದೆ. ಮೂರು ಮಾದರಿಯ ಕ್ರಿಕೆಟ್ನಲ್ಲಿ ಒಟ್ಟು 26 ಸಾವಿರಕ್ಕಿಂತೂ ಅಧಿಕ ರನ್ ಬಾರಿಸಿದ್ದಾರೆ.
ಡಿ ಕಾಕ್ಗೂ ಇದೆ ಅವಕಾಶ
ದಕ್ಷಿಣ ಆಫ್ರಿಕಾದ ಎಡಗೈ ಆಟಗಾರ ಡಿ ಕಾಕ್ ಹಾಲಿ ಆವೃತ್ತಿಯಲ್ಲಿ ನಾಲ್ಕು ಶತಕ ಬಾರಿಸಿದ್ದು ಸದ್ಯ 9 ಪಂದ್ಯಗಳಿಂದ 591 ರನ್ ಬಾರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲು ಇನ್ನು 83 ರನ್ಗಳ ಅಗತ್ಯವಿದೆ. ಗುರುವಾರ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅವರು ಈ ಮೊತ್ತವನ್ನು ಬಾರಿಸಿದರೆ ಸಚಿನ್ ದಾಖಲೆ ಪತನಗೊಳ್ಳಲಿದೆ.
ರಚಿನ್ಗೆ 109 ರನ್ ಅಗತ್ಯ
ರಚಿನ್ ರವೀಂದ್ರ ಮೂರನೇ ಸ್ಥಾನದಲ್ಲಿದ್ದು ಸದ್ಯ ಅವರು 565*ರನ್ ಬಾರಿಸಿದ್ದಾರೆ. ಭಾರತ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಅವರು 109 ರನ್ ಬಾರಿಸಿದರೆ ಸಚಿನ್ ದಾಖಲೆ ಮುರಿಯಲಿದ್ದಾರೆ. ಸದ್ಯ ಅವರ ಪ್ರಚಂಡ ಬ್ಯಾಟಿಂಗ್ ನೋಡುವಾಗ ಈ ಮೊತ್ತವನ್ನು ಪೇರಿಸುವ ಎಲ್ಲ ಲಕ್ಷಣವಿದೆ.