ಮುಂಬಯಿ: ಟೀಮ್ ಇಂಡಿಯಾದ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಮುರಿದಿದ್ದಾರೆ. ಏಕದಿನ ಕ್ರಿಕೆಟ್ನ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ಬಾರಿ 1000 ರನ್ ಪೂರ್ತಿಗೊಳಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ವಿರಾಟ್ ಭಾಜನರಾಗಿದ್ದಾರೆ.
ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ಸದ್ಯ ಉತ್ತಮವಾಗಿ ರನ್ ಗಳಿಸುತ್ತಿದೆ. ವಿರಾಟ್ ಅವರು ಈ ಪಂದ್ಯದಲ್ಲಿ 34 ರನ್ ಗಳಿಸುತ್ತಿದ್ದಂತೆ ಕ್ಯಾಲೆಂಡರ್ ವರ್ಷದಲ್ಲಿ 1000 ರನ್ ಪೂರ್ತಿಗೊಳಿಸಿದರು. ಇದೇ ವೇಳೆ ಸಚಿನ್ ಅವರ ದಾಖಲೆಯನ್ನು ಮುರಿದರು. ಸಚಿನ್ ಅವರು ಒಟ್ಟು ಕ್ಯಾಲೆಂಡರ್ ವರ್ಷದಲ್ಲಿ 7 ಬಾರಿ ಸಾವಿರ ರನ್ ಬಾರಿಸಿದ್ದರು. ಇದೀಗ ವಿರಾಟ್ ಅವರು 8 ಬಾರಿ ಈ ಸಾಧನೆ ಮಾಡಿ ಸಚಿನ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಭಾರತ ಪರ ಕ್ಯಾಲೆಂಡರ್ ವರ್ಷವೊಂದರಲ್ಲಿ ಮೊದಲ ಬಾರಿ 1000 ರನ್ ಪೂರೈಸಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ ಅವರು 1997ರಲ್ಲಿ ಈ ಸಾಧನೆ ಮಾಡಿದ್ದರು. ಇದಾದ ಬಳಿಕ ಮೊಹಮ್ಮದ್ ಅಜರುದ್ದೀನ್ 1998ರಲ್ಲಿ ಈ ದಾಖಲೆ ಬರೆದಿದ್ದರು.
ಇದನ್ನೂ ಓದಿ AFG vs NED: ಡಚ್ಚರ ಸವಾಲು ಗೆದ್ದು ಸೆಮಿ ರೇಸ್ನಲ್ಲಿ ಉಳಿದೀತೇ ಆಫ್ಘನ್?
ವಿರಾಟ್ ಅವರು (2011, 2012, 2013, 2014, 2017, 2018, 2019, 2023) ರಲ್ಲಿ ಸಾವಿರ ರನ್ ಪೂರ್ತಿಗೊಳಿಸಿದರೆ, ಸಚಿನ್ ಅವರು (1994, 1996-1997, 1998 2000, 2003, 2007) ಈ ಸಾಧನೆ ಮಾಡಿದ್ದರು.
ವಿರಾಟ್ ಕೊಹ್ಲಿ ಅವರು ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ಏಕದಿನ ಕ್ರಿಕೆಟ್ನ 49 ಶತಕವನ್ನು ಪೂರ್ತಿಗೊಳಿಸಲಿದ್ದಾರೆ ಎನ್ನುವಷ್ಟರಲ್ಲಿ, 88 ರನ್ಗೆ ವಿಕೆಟ್ ಕೈಚೆಲ್ಲಿ ಮತ್ತೊಮ್ಮೆ ಎಡವಿದರು. ಕಳೆದ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿಯೂ ಅವರು 95 ರನ್ಗೆ ಔಟಾಗುವ ಮೂಲಕ ಈ ಅವಕಾಶದಿಂದ ವಂಚಿತರಾಗಿದ್ದರು. ಇದೀಗ ಮತ್ತೆ ಎಡವಿದ್ದಾರೆ.
First player to slam 1⃣0⃣0⃣0⃣+ ODI runs in 8⃣ calendar years 👑#PlayBold #INDvSL #CWC23 #ViratKohli @imVkohli pic.twitter.com/U5GPt3sh2M
— Royal Challengers Bangalore (@RCBTweets) November 2, 2023
34 ವರ್ಷದ ವಿರಾಟ್ ಕೊಹ್ಲಿ ಅವರು ಇದುವರೆಗೆ ಒಟ್ಟು 288* ಏಕದಿನ ಪಂದ್ಯಗಳನ್ನು ಆಡಿ 58.27 ರ ಸರಾಸರಿಯಲ್ಲಿ 13525 ರನ್ ಗಳಿಸಿದ್ದಾರೆ. ಇದರಲ್ಲಿ 48* ಶತಕ ಮತ್ತು 71 ಅರ್ಧಶತಕ ಒಳಗೊಂಡಿದೆ. ಬೌಲಿಂಗ್ನಲ್ಲೂ 4 ವಿಕೆಟ್ ಪಡೆದಿದ್ದಾರೆ. ಟೆಸ್ಟ್ನಲ್ಲಿ 111 ಪಂದ್ಯಗಳಲ್ಲಿ 8676 ರನ್ ಗಳಿಸಿದ್ದು, 29 ಶತಕ, 7 ದ್ವಿಶತಕ ಮತ್ತು 29 ಅರ್ಧಶತಕ ಸಿಡಿಸಿದ್ದಾರೆ. 254 ಅವರ ಗರಿಷ್ಠ ವೈಯಲ್ತಿಕ ಮೊತ್ತಾವಾಗಿದೆ. 115 ಟಿ20 ಪಂದ್ಯವಾಡಿ 4,008 ರನ್ ಬಾರಿಸಿದ್ದಾರೆ. ಇದರಲ್ಲಿ 37 ಅರ್ಧಶತಕ ಮತ್ತು 1 ಶತಕ ದಾಖಲಾಗಿದೆ.