ಬಾರ್ಬಡೋಸ್: ಟೀಮ್ ಇಂಡಿಯಾದ ಆಟಗಾರರು ಹಾಲಿ ಟಿ20 ವಿಶ್ವಕಪ್ ಟೂರ್ನಿಯ(T20 World Cup 2024) ಸೂಪರ್-8 ಪಂದ್ಯವನ್ನಾಡಲು ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಲ್ಲಿದ್ದಾರೆ(Barbados). ನಾಳೆ ನಡೆಯುವ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿರುವ ವೇಳೆ ತಂಡದ ಸದಸ್ಯರು ವಿಂಡೀಸ್ ದಂತಕಥೆ ಸರ್ ವೆಸ್ಲಿ ಹಾಲ್(Sir Wesley Hall) ಅವರನ್ನು ಭೇಟಿಯಾಗಿದ್ದಾರೆ. ಇದೇ ವೇಳೆ ವೆಸ್ಲಿ ಹಾಲ್ ಅವರು ವಿರಾಟ್ ಕೊಹ್ಲಿ(Virat Kohli), ರೋಹಿತ್ ಶರ್ಮ(Rohit Sharma) ಮತ್ತು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್(rahul dravid) ಅವರಿಗೆ ತಮ್ಮ ಆತ್ಮಚರಿತ್ರೆ ಪುಸ್ತಕವನ್ನು ಹಸ್ತಾಕ್ಷರದೊಂದಿಗೆ ಉಡುಗೊರೆಯಾಗಿ ನೀಡಿದ್ದಾರೆ.
100 ಶತಕ ಬಾರಿಸುವಂತೆ ಕೊಹ್ಲಿಗೆ ಹಾರೈಕೆ
ವೆಸ್ಲಿ ಹಾಲ್ ಅವರು ವಿರಾಟ್ ಕೊಹ್ಲಿ ಜತೆ ಅತ್ಯಂತ ಆತ್ಮೀಯವಾಗಿ ಮಾತುಕತೆ ನಡೆಸಿದರು. ಇದೇ ವೇಳೆ ಅವರು ನಾನು ನಿಮ್ಮ ಕ್ರಿಕೆಟ್ ಸಾಧನೆಯನ್ನು ನೋಡುತ್ತಿದ್ದೇನೆ. 80 ಶತಕ ಬಾರಿಸಿರುವ ನೀವು 100 ಶತಕವನ್ನು ಪೂರ್ತಿಗೊಳಿಸಬೇಕು ಎಂದು ಹಾರೈಸಿದ್ದಾರೆ. ಇದಕ್ಕೆ ಕೊಹ್ಲಿ ಖಂಡಿತವಾಗಿಯೂ… ಎಂದು ಅಷ್ಟೇ ವಿನಮ್ರದಿಂದ ಉತ್ತರಿಸಿ ಅವರಿಂದ ಆಶೀರ್ವಾದ ಪಡೆದರು.
86 ವರ್ಷ ವಯಸ್ಸಿನ ವೆಸ್ಟ್ ಇಂಡೀಸ್ ದಂತಕಥೆ ಹಾಲ್ ಅವರು ತಮ್ಮ “ಆನ್ಸರಿಂಗ್ ದಿ ಕಾಲ್-ದಿ ಎಕ್ಸ್‌ಟ್ರಾರ್ಡಿನರಿ ಲೈಫ್ ಆಫ್ ಸರ್ ವೆಸ್ಲಿ ಹಾಲ್”(Answering the Call -The extraordinary Life of Sir Wesley Hall) ಹೆಸರಿನ ತಮ್ಮ ಆತ್ಮಚರಿತ್ರೆಯ ಪುಸ್ತಕವನ್ನು ಟೀಮ್ ಇಂಡಿಯಾ ಆಟಗಾರರಿಗೆ ವಿಶೇಷ ಉಡುಗೊರೆಯಾಗಿ ನೀಡಿದರು. ವೆಸ್ಲಿ ಹಾಲ್ ಅವರು ವೆಸ್ಟ್ ಇಂಡೀಸ್ ಪರ 48 ಟೆಸ್ಟ್ ಪಂದ್ಯಗಳನ್ನು ಆಡಿ 192 ವಿಕೆಟ್ ಮತ್ತು 818 ರನ್ ಬಾರಿಸಿದ್ದಾರೆ. 80ರ ದಶಕದಲ್ಲಿ ವಿಂಡೀಸ್ ಪರ ಅಮೋಘ ಸಾಧನೆ ತೋರಿದ್ದರು.
ಹಾಲಿ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಆಡಿದ ಮೂರು ಪಂದ್ಯಗಳಲ್ಲಿಯೂ ಒಂದಂಕಿಗೆ ಸೀಮಿತರಾಗಿ ಘೋರ ಬ್ಯಾಟಿಂಗ್ ವೈಫಲ್ಯ ಕಂಡಿದ್ದರು. ಇದರಲ್ಲೊಂದು ಗೋಲ್ಡನ್ ಡಕ್ ಕೂಡ ಒಳಗೊಂಡಿದೆ. ಮಹತ್ವದ ಸೂಪರ್-8 ಸುತ್ತಿನ ಪಂದ್ಯದಲ್ಲಾದರೂ ಕೊಹ್ಲಿ ನಿರೀಕ್ಷಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗಬೇಕಿದೆ. ಭಾರತ ನಾಳೆ ನಡೆಯುವ ಸೂಪರ್-8 ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯ ಬಾರ್ಬಡೋಸ್ನಲ್ಲಿ ನಡೆಯಲಿದೆ.
ಇದನ್ನೂ ಓದಿ Virat Kohli: ಶಾರುಖ್, ಸಲ್ಮಾನ್ ಹಿಂದಿಕ್ಕಿ ಮೌಲ್ಯಯುತ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ ಕಿಂಗ್ ಕೊಹ್ಲಿ
ಭಾರತ-ಆಸೀಸ್ ಪಂದ್ಯಕ್ಕೆ ಮಳೆ ಭೀತಿ
ಜೂನ್ 24ರಂದು ಗ್ರಾಸ್ ಐಲೆಟ್ನಲ್ಲಿ ನಡೆಯಲಿರುವ ಭಾರತ-ಆಸೀಸ್(Australia vs India) ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಭಾರೀ ಮಳೆಯಾಗಿ ಪಂದ್ಯ ರದ್ದಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ ಇತ್ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ. ಹೀಗಾಗಿ ಭಾರತ ಅಫಘಾನಿಸ್ತಾನ ಮತ್ತು ಬಾಂಗ್ಲಾ ಎದುರಿನ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಸೆಮಿಫೈನಲ್ ಟಿಕೆಟ್ ಖಾತ್ರಿಗೊಳಿಸಬೇಕು. ಜೂನ್ 29ರಂದು ಬ್ರಿಜ್ಟೌನ್ನಲ್ಲಿ ನಿಗದಿಯಾಗಿರುವ ಫೈನಲ್ ಪಂದ್ಯವೂ ಮಳೆ ಭೀತಿ ಎದುರಾಗಿದೆ.