ನ್ಯೂಯಾರ್ಕ್: ಕಳೆದ ಎರಡು ಪಂದ್ಯಗಳಲ್ಲಿ ಒಂದಂಕಿಗೆ ಸೀಮಿತರಾಗಿ ಘೋರ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ(Virat Kohli) ಅಮೆರಿಕ(United States vs India) ವಿರುದ್ಧ ಇಂದು(ಬುಧವಾರ) ನಡೆಯುವ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ತೋರುವ ಆತ್ಮವಿಶ್ವಾಸದಲ್ಲಿದ್ದಾರೆ. ಜತೆಗೆ ವಿಶ್ವ ದಾಖಲೆಯೊಂದನ್ನು ನಿರ್ಮಿಸುವ ಅವಕಾಶವೂ ಅವರ ಮುಂದಿದೆ.
ಹೌದು, ವಿರಾಟ್ ಕೊಹ್ಲಿ ಅವರು ಇಂದಿನ ಪಂದ್ಯದಲ್ಲಿ 8 ಬೌಂಡರಿ ಬಾರಿಸಿದರೆ, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಮೊದಲ ಆಟಗಾರ ಎನ್ನುವ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಲಿದ್ದಾರೆ. ಸದ್ಯ ಈ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ(Mahela Jayawardene) ಹೆಸರಿನಲ್ಲಿದೆ. ಜಯವರ್ಧನೆ 111 ಬೌಂಡರಿ ಬಾರಿಸಿದ್ದರೆ, ಕೊಹ್ಲಿ ಸದ್ಯ 103* ಬೌಂಡರಿ ಬಾರಿಸಿದ್ದಾರೆ.
ಕಳೆದ ಐರ್ಲೆಂಡ್ ಮತ್ತು ಪಾಕ್ ವಿರುದ್ಧದ ಪಂದ್ಯದಲ್ಲಿಯೇ ಕೊಹ್ಲಿಗೆ ಈ ದಾಖಲೆ ನಿರ್ಮಿಸುವ ಅವಕಾಶವಿತ್ತು. ಆದರೆ ಕೊಹ್ಲಿ ಪಾಕ್ ವಿರುದ್ಧ ಒಂದು ಬೌಂಡರಿ ಮಾತ್ರ ಬಾರಿಸಿದ್ದರು. ಇದೀಗ ಈ ಪಂದ್ಯದಲ್ಲಾದರೂ ಅವರು ಉತ್ತಮ ಬ್ಯಾಟಿಂಗ್ ನಡೆಸಿ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಲಿದ್ದಾರಾ? ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ IND vs USA: ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ 2 ಮಹತ್ವದ ಬದಲಾವಣೆ; ಯಾರಿಗೆ ಕೊಕ್?
ಜೈಸ್ವಾಲ್ ಓಪನಿಂಗ್?
ಈಗಾಗಲೇ ಕೊಹ್ಲಿಯನ್ನು ಆರಂಭಿಕನಾಗಿ ಆಡಿಸಿದ್ದಕ್ಕೆ ಹಲವು ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ದ್ವಿತೀಯ ಕ್ರಮಾಂಕದಲ್ಲಿ ಆಡಿದರೇ ಸೂಕ್ತ ಎಂದಿದ್ದಾರೆ. ಇಂದಿನ ಪಂದ್ಯದಲ್ಲಿ ಜೈಸ್ವಾಲ್ಗೆ ಅವಕಾಶ ನೀಡಿದ್ದೇ ಆದರೆ, ರೋಹಿತ್ ಜತೆ ಜೈಸ್ವಾಲ್ ಇನಿಂಗ್ಸ್ ಆರಂಭಿಸಬಹುದು.
ಟ20 ವಿಶ್ವಕಪ್ನಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಬ್ಯಾಟರ್ಗಳು
ಆಟಗಾರ | ದೇಶ | ಇನಿಂಗ್ಸ್ | ಬೌಂಡರಿ |
ಮಹೇಲಾ ಜಯವರ್ಧನೆ | ಶ್ರೀಲಂಕಾ | 31 | 111 |
ವಿರಾಟ್ ಕೊಹ್ಲಿ | ಭಾರತ | 29 | 104* |
ತಿಲಕರತ್ನೆ ದಿಲ್ಶನ್ | ಶ್ರೀಲಂಕಾ | 35 | 101 |
ಡೇವಿಡ್ ವಾರ್ನರ್ | ಆಸ್ಟ್ರೇಲಿಯಾ | 37 | 97* |
ರೋಹಿತ್ ಶರ್ಮ | ಭಾರತ | 38 | 96* |
ಕ್ರಿಸ್ ಗೇಲ್ | ವೆಸ್ಟ್ ಇಂಡೀಸ್ | 31 | 78 |
ಜಾಸ್ ಬಟ್ಲರ್ | ಇಂಗ್ಲೆಂಡ್ | 29 | 74* |
ಕೇನ್ ವಿಲಿಯಮ್ಸನ್ | ನ್ಯೂಜಿಲ್ಯಾಂಡ್ | 26 | 69* |
ಬ್ರೆಂಡನ್ ಮೆಕಲಮ್ | ನ್ಯೂಜಿಲ್ಯಾಂಡ್ | 25 | 67 |
ಕುಮಾರ್ ಸಂಗಕ್ಕಾರ | ಶ್ರೀಲಂಕಾ | 31 | 63 |
ಸಚಿನ್ ಭೇಟಿಯಾದ ಕೊಹ್ಲಿ
ಸತತವಾಗಿ 2 ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡ ಬೆನ್ನಲ್ಲೇ ವಿರಾಟ್ ಕೊಹ್ಲಿ ಅವರು ನ್ಯೂಯಾರ್ಕ್ನಲ್ಲಿರುವ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಿದ್ದಾರೆ. ಉಭಯ ಆಟಗಾರರ ಭೇಟಿಯ ಫೋಟೊ ವೈರಲ್ ಆಗಿದೆ. ಮೂಲಗಳ ಪ್ರಕಾರ ಬ್ಯಾಟಿಂಗ್ ಸಲಹೆ ಪಡೆಯಲೆಂದೇ ಕೊಹ್ಲಿ ಸಚಿನ್ ಭೇಟಿಯಾಗಿದ್ದು ಎನ್ನಲಾಗಿದೆ.
2 ಬದಲಾವಣೆ
ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾ ತನ್ನ ಆಡುವ ಬಳಗಲ್ಲಿ 2 ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆಲ್ರೌಂಡರ್ಗಳಾದ ಶಿವಂ ದುಬೆ(Shivam Dube) ಮತ್ತು ರವೀಂದ್ರ ಜಡೇಜಾ(Ravindra Jadeja) ಅವರನ್ನು ಕೈಬಿಡಲಾಗುವುದು ಎಂಬ ಮಾತುಗಳು ಕೇಳಿಬಂದಿವೆ.
ಶಿವಂ ದುಬೆ ಆಲ್ರೌಂಡರ್ ಕೋಟದಲ್ಲಿ ಕಳೆದ 2 ಪಂದ್ಯಗಳಲ್ಲಿ ಆಡಿದ್ದರೂ ಕೂಡ ಬೌಲಿಂಗ್ ನಡೆಸಿರಲಿಲ್ಲ. ಅಲ್ಲದೆ ಪಾಕ್ ವಿರುದ್ಧ ಬ್ಯಾಟಿಂಗ್ ಅವಕಾಶ ಸಿಕ್ಕರೂ ಇದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಕೇವಲ 3 ರನ್ ಗಳಿಸಿದ್ದರು. ಜತೆಗೆ ಕಳಪೆ ಫೀಲ್ಡಿಂಗ್ ಮೂಲಕ ಕ್ಯಾಚ್ ಒಂದನ್ನು ಕೂಡ ಕೈಚೆಲ್ಲಿದ್ದರು. ಜಡೇಜಾ ಕೂಡ ಆಡಿದ 2 ಪಂದ್ಯಗಳಲ್ಲಿಯೂ ವಿಕೆಟ್ ಲೆಸ್ ಎನಿಸಿಕೊಂಡಿದ್ದಾರೆ. ಹೀಗಾಗಿ ಉಭಯ ಆಟಗಾರರನ್ನು ಕೈ ಬಿಟ್ಟು ಇವರ ಸ್ಥಾನದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಕುಲ್ದೀಪ್ ಯಾದವ್ ಅವರನ್ನು ಆಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.