ನ್ಯೂಯಾರ್ಕ್: ವಿರಾಟ್ ಕೊಹ್ಲಿ(Virat Kohli) ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗ. ಅವರ ಅಭಿಮಾನಿಗಳಿಗೆ ಯಾವುದೇ ಗಡಿಯ ಮಿತಿ ಇಲ್ಲ. ಭಾರತದ ಬದ್ಧ ಎದುರಾಳಿ ಪಾಕಿಸ್ತಾನದಲ್ಲಿಯೂ ವಿರಾಟ್ ಕೊಹ್ಲಿ ಅಪಾರ ಅಭಿಮಾನಿಗಳಿದ್ದಾರೆ. ಅಭಿಮಾನಿಗಳು ಅವರ ಜತೆ ಒಂದು ಫೋಟೊ ತೆಗೆದುಕೊಳ್ಳಲು, ಆಟೋಗ್ರಾಫ್ ಪಡೆಯಲು ಮತ್ತು ಅವರನ್ನು ಭೇಟಿಯಾಗಲೆಂದೇ ವರ್ಷಾನುಗಟ್ಟಲೆ ಕಾದು ಕುಳಿತಿರುತ್ತಾರೆ. ಆದರೆ, ನ್ಯೂಯಾರ್ಕ್ನಲ್ಲಿ ಕೊಹ್ಲಿ ಯಾರೆಂಬುದೇ ಹಲವರಿಗೆ ತಿಳಿದಿಲ್ಲ.
ಕ್ರಿಕೆಟ್ ಹೆಚ್ಚು ಪ್ರಸಿದ್ಧಿ ಪಡೆಯದ ನ್ಯೂಯಾರ್ಕ್ನಲ್ಲಿ ಅನೇಕ ಕ್ರಿಕೆಟಿಗರು ಇಲ್ಲಿನ ಪಾರ್ಕ್, ರಸೆಗಳಲ್ಲಿ ಸಾಮಾನ್ಯ ಜನರಂತೆ ತಿರುಗಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ಕೂಡ ಇಲ್ಲಿನ ಜಿಮ್ ಸೆಂಟರ್ ಒಂದಕ್ಕೆ ಜಿಮ್(Kohli SPOTTED In Gym) ಮಾಡಲು ಏಕಾಂಗಿಯಾಗಿ ತೆರಳಿದ್ದಾರೆ. ಯಾರು ಕೂಡ ಕೊಹ್ಲಿ ಬಳಿ ಬಂದು ಸೆಲ್ಫಿ, ಆಟೋಗ್ರಾಫ್ಗೆ ಮುಂದಾಗಲಿಲ್ಲ. ಏಕೆಂದರೆ ಅಲ್ಲಿನ ಜನರಿಗೆ ಕೊಹ್ಲಿ ಎಂದರೆ ಅಷ್ಟಾಗಿ ತಿಳಿದಿಲ್ಲ. ಹೀಗಾಗಿ ಕೊಹ್ಲಿ ಕೂಡ ಯಾವುದೇ ಕಿರಿಕಿರಿ ಇಲ್ಲದೆ ಪ್ರಶಾಂತವಾಗಿ ಸಾಮಾನ್ಯರಂತೆ ಜಿಮ್ಗೆ ತೆರಳಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ(viral video). ಕೆಲ ದಿನಗಳ ಹಿಂದೆ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ ಅವರಿಗೆ ಇಲ್ಲಿನ ಕ್ರಿಕೆಟ್ ಗೇಮ್ ಸೆಂಟರ್ನಲ್ಲಿ ಸಿಬ್ಬಂದಿ ಬೌಲಿಂಗ್ ಹೇಗೆ ನಡೆಸಬೇಕು ಎಂದು ಹೇಳಿಕೊಡುವ ವಿಡಿಯೊ ವೈರಲ್ ಆಗಿತ್ತು. ಆತನಿಗೆ ಸ್ಟೇನ್ ಕ್ರಿಕೆಟಿಗ ಎನ್ನುವುದು ತಿಳಿದಿರಲಿಲ್ಲ. ಸ್ಟೇನ್ ಅವರೇ ಈ ವಿಡಿಯೊವನ್ನು ಹಂಚಿಕೊಂಡಿದ್ದರು.
ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಕೂಡ ಕೆಲ ದಿನಗಳ ಹಿಂದೆ ನ್ಯೂಯಾರ್ಕ್ನ ಪಾರ್ಕ್ಗಳಲ್ಲಿ ನಾವು ಆರಾಮವಾಗಿ ವ್ಯಾಯಾಮ ಮಾಡುತ್ತಿದ್ದೇವೆ. ಇಲ್ಲಿನ ಜನತೆಗೆ ನಾವು ಯಾರೆಂದು ಕೂಡ ತಿಳಿದಿಲ್ಲ. ಇದೊಂದು ಹೊಸ ಅನುಭವ ಎಂದು ಹೇಳಿಕೊಂಡಿದ್ದರು. ಬಾಸ್ಕೆಟ್ ಬಾಲ್, ಬೇಸ್ ಬಾಲ್, ಫುಟ್ಬಾಲ್ ಹೆಚ್ಚಾಗಿ ನೆಚ್ಚಿಕೊಂಡಿರುವ ಅಮೆರಿಕದಲ್ಲಿ ಕ್ರಿಕೆಟ್ ಈಗ ತಾನೆ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ಜತೆಗೆಯಲ್ಲೂ ಕ್ರಿಕೆಟ್ ಪ್ರೀತಿ ಹೆಚ್ಚಾಗಬಹುದು.
ಇದನ್ನೂ ಓದಿ T20 World Cup 2024: ಪಾಕ್ಗೆ ಇನ್ನೂ ಇದೆ ಸೂಪರ್-8 ಅವಕಾಶ? ಇಲ್ಲಿದೆ ಲೆಕ್ಕಾಚಾರ
ನಾಳೆ ಭಾರತ-ಅಮೆರಿಕ ಮುಖಾಮುಖಿ
ಸತತ 2 ಗೆಲುವು ಸಾಧಿಸಿ ‘ಎ’ ಗುಂಪಿನಲ್ಲಿ ಅಜೇಯ ಓಟ ಮುಂದಿವರಿಸಿರುವ ಭಾರತ ಮತ್ತು ಅಮೆರಿಕ ನಾಳೆ ನಡೆಯುವ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಒಂದು ತಂಡಕ್ಕೆ ಸೋಲು ಎದುರಾಗುವುದು ಖಚಿತ. ಈ ತಂಡ ಯಾವುದೆಂಬುದು ಪಂದ್ಯದ ಕೌತುಕ. ಇತ್ತಂಡಗಳ ಮೊದಲ ಕ್ರಿಕೆಟ್ ಮುಖಾಮುಖಿಯೂ ಇದಾಗಿದೆ.
ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್ನಲ್ಲಿ ಅತ್ಯಧಿಕ ರನ್ಗಳಿಸಿದ ಆಟಗಾರನಾಗಿ ಮೂಡಿಬಂದಿದ್ದರೂ ಕೂಡ ಟಿ20 ವಿಶ್ವಕಪ್ನಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. 2 ಪಂದ್ಯಗಳಲ್ಲಿಯೂ ಒಂದಂಕಿಗೆ ಸೀಮಿತರಾಗಿದ್ದರು. ಇದೀಗ ಅಮೆರಿಕ ವಿರುದ್ಧದ ಪಂದ್ಯದಲ್ಲಾದರೂ ಅವರು ಬ್ಯಾಟಿಂಗ್ ಲಯಕ್ಕೆ ಮರಳುವ ಅನಿವಾರ್ಯತೆ ಇದೆ.