ಬೆಂಗಳೂರು : ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೆ ಅಬ್ಬರಿಸುವ ಸೂಚನೆ ಕೊಟ್ಟಿದ್ದಾರೆ. ಹಾಲಿ ಆವೃತ್ತಯ ಐಪಿಎಲ್ನ (IPL 2023) ತನ್ನ ಮೊದಲ ಪಂದ್ಯದಲ್ಲೇ ಅವರು ಅರ್ಧ ಶತಕ ಬಾರಿಸಿದ್ದಾರೆ. ಅಜೇಯ 82 ರನ್ ಬಾರಿಸಿರುವ ಅವರು ಅಭಿಮಾನಿಗಳಿಗೆ ರಸದೌತಣ ಬಡಿಸಿದ್ದಾರೆ. ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಆರ್ಸಿಬಿ ತಂಡ ರೋಹಿತ್ ಶರ್ಮಾ ನೇತೃತ್ವದ ಮುಂಬಯಿ ಇಂಡಿಯನ್ಸ್ ವಿರುದ್ಧ 8 ವಿಕೆಟ್ಗಳ ಸುಲಭ ಜಯ ದಾಖಲಿಸಿದೆ. ಈ ರೀತಿಯಾಗಿ ಅತ್ಯುತ್ತಮ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿಗೆ ಎಲೆಕ್ಟ್ರಿಕ್ ಸ್ಕೂಟರ್ ಒಂದು ಗಿಫ್ಟ್ ಆಗಿ ಸಿಕ್ಕಿದೆ. ಆದರೆ, ಅದು ಸುಮ್ಮನೆ ಸಿಕ್ಕಿದ್ದಲ್ಲ. ಬದಲಾಗಿ ಅವರು ಅತ್ಯುತ್ತಮ ಪ್ರದರ್ಶನ ನೀಡಿ ಮ್ಯಾನ್ಆಫ್ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದಕ್ಕೆ ಕೊಟ್ಟಿದ್ದು.
ಅಂದ ಹಾಗೆ ವಿರಾಟ್ಗೆ ಇವಿ ಸ್ಕೂಟರ್ ಕೊಟ್ಟಿದ್ದು ಆಂಪಿಯರ್ ಕಂಪನಿ. ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಕಂಪನಿ ಆಂಪಿಯರ್ ಸ್ಕೂಟರ್ ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿದೆ. ಈ ಬ್ರಾಂಡ್ ಆರ್ಸಿಬಿ ಅಧಿಕೃತ ಪಾಲುದಾರಿಕೆಯನ್ನು ಪಡೆದುಕೊಂಡಿದೆ. ಹೀಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ವಿರಾಟ್ ಕೊಹ್ಲಿಗೆ ಆಂಪಿಯರ್ ಸ್ಕೂಟರ್ ಅನ್ನು ಕಂಪನಿ ನೀಡಿದೆ. ಭಾನುವಾರ ಪಂದ್ಯ ಮುಕ್ತಾಯಗೊಂಡ ಬಳಿಕ ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿಯ ಸಿಇಒ ಸಂಜಯ್ ಬೇಹ್ಲ್ ವಿರಾಟ್ ಕೊಹ್ಲಿಗೆ ಸ್ಕೂಟರ್ ನೀಡಿದರು. ಅದೇ ರೀತಿ ಆರ್ಸಿಬಿ ಪಂದ್ಯವಿದ್ದ ವೇಳೆ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಆಂಪಿಯರ್ ಸ್ಕೂಟರ್ ಸಿಗಲಿದೆ.
ಆರ್ಸಿಬಿ ಸ್ಕೂಟರ್:
ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಪ್ರವೇಟ್ ಲಿಮಿಟೆಡ್ ಕಂಪನಿಯು ಐಪಿಎಲ್ 16ನೇ ಆವೃತ್ತಿಯ ಹಿನ್ನೆಲೆಯಲ್ಲಿ ಆರ್ಸಿಬಿ ಸ್ಪೆಷಲ್ ಎಡಿಷನ್ ಆಂಪಿಯರ್ ಸ್ಕೂಟರ್ ಬಿಡುಗಡೆಯಾಗಿದೆ. ಆರ್ಸಿಬಿ ಥೀಮ್ ಬಣ್ಣವನ್ನು ಹೊಂದಿರುವ ಈ ಸ್ಕೂಟರ್ ಆರ್ಸಿಬಿ ಅಭಿಮಾನಿಗಳ ಮನ ಸೆಳೆಯಲಿದೆ.
ಇದನ್ನೂ ಓದಿ : IPL 2023: ಐಪಿಎಲ್ನಲ್ಲಿ ನೂತನ ದಾಖಲೆ ಬರೆದ ವಿರಾಟ್ ಕೊಹ್ಲಿ; ಏನದು?
ಈ ಕುರಿತು ಮಾತನಾಡಿದ ಸಿಇಒ ಸಂಜಯರ್ ಬೆಹ್ಲ್, ಆಂಪಿಯರ್ ಪ್ರಿಮಸ್ ಆಂಪಿಯರ್ ಎಲ್ಲ ರೀತಿಯ ಸವಾರಿಗೂ ಅನುಕೂಲಕರವಾಗಿರುವ ವಾಹನವಾಗಿದೆ. ಆಕರ್ಷಕವಾಗಿದ್ದು ಎಲ್ಲ ರೀತಿಯ ಗ್ರಾಹಕರ ಗಮನ ಸೆಳೆಯುತ್ತಿದೆ. ಹೀಗಾಗಿ ಆರ್ಸಿಬಿ ಜತೆ ಪಾಲುದಾರಿಕೆ ಪಡೆದುಕೊಂಡು ಎಲ್ಲ ವರ್ಗದ ಮಂದಿಯ ಇಷ್ಟಪಡುವ ವಾಹನ ತಯಾರಿಸಲಾಗಿದೆ ಎಂದು ಹೇಳಿದರು.
ಸ್ಕೂಟರ್ ಹೇಗಿದೆ?
ಆಂಪಿಯರ್ ಪ್ರಿಮಸ್ ಸ್ಕೂಟರ್ 1,10,117 ರೂಪಾಯಿಗೆ ಮಾರುಕಟ್ಟೆಯಲ್ಲಿದೆ. ಇದು 3ಕೆಡಬ್ಲ್ಯುಎಚ್ ಎಲ್ಎಫ್ಪಿ ಬ್ಯಾಟರಿ ಹೊಂದಿದ್ದು 3.4 ಕೆಡಬ್ಲ್ಯು ಮೋಟಾರ್ ಹೊಂದಿದೆ. ಒಂದು ಬಾರಿ ಚಾರ್ಚ್ ಮಾಡಿದರೆ ಈ ಸ್ಕೂಟರ್ 107 ಕಿಲೋ ಮೀಟರ್ ದೂರ ಸಾಗಲಿದೆ. ಈ ಸ್ಕೂಟರ್ ಗರಿಷ್ಠ 77 ಕಿಲೋ ಮೀಟರ್ ವೇಗದಲ್ಲಿ ಸಾಗುತ್ತದೆ. ಸ್ಕೂಟರ್ ಒಂದೇ ವೇರಿಯಂಟ್ ಹಾಗೂ ನಾಲ್ಕು ಬಣ್ಣಗಳಲ್ಲಿ ಇವೆ. ಇದರಲ್ಲಿ ಇಕೊ, ಸಿಟಿ ಮತ್ತು ಪವರ್ ಎಂಬ ಮೂರು ಮೂಡ್ಗಳಿವೆ. ಸ್ಕೂಟರ್ ಫುಲ್ ಚಾರ್ಜ್ ಆಗಲು ಐದು ಗಂಟೆಗಳು ಬೇಕು. ಸ್ಕೂಟರ್ನ ಒಟ್ಟು ತೂಕ 130 ಕೆ.ಜಿಯಿದೆ.
ಆಂಪಿಯರ್ ಪ್ರಿಮಸ್ ಸ್ಕೂಟರ್ನಲ್ಲಿ ಎಲ್ಸಿಡಿ ಡಿಸ್ಪ್ಲೆ ಇದ್ದು ಸ್ಮಾರ್ಟ್ಫೋನ್ಗಳನ್ನು ಕನೆಕ್ಟ್ ಮಾಡಿಕೊಳ್ಳಬಹುದು. ಓಡೊಮೀಟರ್, ಸ್ಪೀಡೋ ಮೀಟರ್, ಲೊ ಬ್ಯಾಟರಿ, ಇಂಡಿಕೇಟರ್, ಚಾರ್ಜಿಂಗ್ ಲೆವೆಲ್ ಮತ್ತು ಕ್ಲಾಕ್ ಫೀಚರ್ಗಳಿವೆ. ಎಲ್ಇಡಿ ಹೆಡ್ಲೈಡ್, ಹ್ಯಾಲೊಜಿನ್ ಟೈಲ್ಲೈಟ್ ಇದರಲ್ಲಿದ್ದು, ಮೊಬೈಲ್ ಚಾರ್ಜಿಂಗ್ಗೆ ಯುಎಸ್ಬಿ ಪೋರ್ಟ್ ನೀಡಲಾಗಿದೆ.
ಮುಂಬದಿಯಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಗಳಿದ್ದರೆ, ಹಿಂದೆ ಡ್ಯುಯಲ್ ಶಾಕ್ಸ್ ಅಬ್ಸಾರ್ಬರ್ ಇದೆ. ಹಿಂದೆ ಮತ್ತು ಮುಂದೆ ಡ್ರಮ್ ಬ್ರೇಕ್ ಇದ್ದು ಸಿಬಿಎಸ್ ಅಯ್ಕೆಯನ್ನೂ ನೀಡಲಾಗಿದೆ. ಸ್ಕೂಟರ್ನಲ್ಲಿ 12 ಇಂಚಿನ ಅಲಾಯ್ ವೀಲ್ ಇದೆ. ಕಂಪನಿಯು ಸ್ಕೂಟರ್, ಬ್ಯಾಟರಿ ಹಾಗೂ ಮೋಟಾರ್ಗೆ 30 ಸಾವಿರ ಕಿಲೋಮೀಟರ್ನಷ್ಟು ವಾರಂಟಿ ನೀಡಿದೆ.