ದುಬೈ : ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಐಸಿಸಿಯ ಅಕ್ಟೋಬರ್ ತಿಂಗಳ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಹಾಗೂ ಜಿಂಬಾಬ್ವೆ ತಂಡದ ಸಿಕಂದರ್ ರಾಜಾ ಪ್ರಶಸ್ತಿಗಾಗಿ ನಾಮ ನಿರ್ದೇಶನಗೊಂಡಿರುವ ಇನ್ನಿಬ್ಬರು ಆಟಗಾರರಾಗಿದ್ದು, ಕೊಹ್ಲಿಗೆ ಪೈಪೋಟಿ ಒಡ್ಡಲಿದ್ದಾರೆ.
ವಿರಾಟ್ ಕೊಹ್ಲಿ ಕಳೆದ ತಿಂಗಳು ಕೇವಲ ನಾಲ್ಕು ಟಿ೨೦ ಇನಿಂಗ್ಸ್‌ಗಳಲ್ಲಿ ಆಡಿದ್ದಾರೆ. ಆದರೆ, ಅದರಲ್ಲಿ ಮೂರು ಇನಿಂಗ್ಸ್‌ಗಳು ಸ್ಮರಣೀಯವಾಗಿದೆ. ಪಾಕಿಸ್ತಾನ ವಿರುದ್ಧದ ಟಿ೨೦ ವಿಶ್ವ ಕಪ್‌ನಲ್ಲಿ ಅವರು ಬಾರಿಸಿರುವ ಅಜೇಯ ೮೨ ರನ್, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಭಾಗವಾದ ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಅವರು ಬಾರಿಸಿರುವ ೨೮ ಎಸೆತಗಳಲ್ಲಿ ೪೯ ರನ್‌ಗಳು ಹಾಗೂ ನೆದರ್ಲೆಂಡ್ಸ್ ವಿರುದ್ಧದ ವಿಶ್ವ ಕಪ್ ಪಂದ್ಯದಲ್ಲಿ ಅವರು ಬಾರಿಸಿರುವ ೬೨ ರನ್‌ಗಳು ಕಳೆದ ತಿಂಗಳ ಅವರ ಶ್ರೇಷ್ಠ ಪ್ರದರ್ಶನವಾಗಿದೆ. ಹೀಗಾಗಿ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ಡೇವಿಡ್ ಮಿಲ್ಲರ್ ಭಾರತ ವಿರುದ್ಧದ ಸರಣಿಯ ಪಂದ್ಯದಲ್ಲಿ ೪೭ ಎಸೆತಗಳಲ್ಲಿ ಅಜೇಯ ೧೦೬ ರನ್ ಬಾರಿಸಿರುವ ಜತೆಗೆ ಅಂತೆಯೇ ವಿಶ್ವ ಕಪ್ ಪಂದ್ಯದಲ್ಲಿ ಭಾರತ ವಿರುದ್ಧವೇ ೫೯ ರನ್ ಬಾರಿಸಿದ್ದರು. ಹೀಗಾಗಿ ಅವರನ್ನೂ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.
ಜಿಂಬಾಬ್ವೆಯ ಸಿಕಂದರ್ ರಾಜಾ ಕೂಡ ಅಕ್ಟೋಬರ್‌ನಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿದ್ದರು. ಐರ್ಲೆಂಡ್ ವಿರುದ್ಧ ೮೨ ರನ್ ಸೇರಿದಂತೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಬ್ಬರಿಸಿದ್ದರು.
ಮಹಿಳೆಯರ ವಿಭಾಗದಲ್ಲಿ ಭಾರತದ ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮ ಹಾಗೂ ಪಾಕಿಸ್ತಾನದ ನಿದಾ ದರ್ ನಾಮನಿರ್ದೇಶನಗೊಂಡಿದ್ದಾರೆ.
ಇದನ್ನೂ ಓದಿ | Virat Kohli | ದಕ್ಷಿಣ ಆಫ್ರಿಕಾ ವಿರುದ್ಧ 12 ರನ್ ಗಳಿಸಿದರೂ ವಿಶ್ವ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ