Site icon Vistara News

Virat Kohli: ಕೊಹ್ಲಿಯ ಕಾಲಿಗೆ ಬಿದ್ದ ಅಭಿಮಾನಿ ಈಗ ಪೊಲೀಸರ ಅತಿಥಿ; ವಿಚಾರಣೆ ವೇಳೆ ಸುಳ್ಳಿನ ಕಂತೆ

Fan breaches security

ಬೆಂಗಳೂರು: ಸೋಮವಾರ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(RCB vs PBKS) ಹಾಗೂ ಪಂಜಾಬ್‌ ಕಿಂಗ್ಸ್‌ ನಡುವಿನ ಪಂದ್ಯದ ವೇಳೆ ಅಭಿಮಾನಿಯೋರ್ವ ಮೈದಾನಕ್ಕೆ ನುಗ್ಗಿ ವಿರಾಟ್‌ ಕೊಹ್ಲಿಯ(Virat Kohli) ಕಾಲಿಗೆ ಬಿದ್ದ ಪ್ರಸಂಗ ಜರುಗಿತ್ತು(Fan touches Virat’s feet). ಇದೀಗ ಆತನ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್‌ ಆರಂಭಿಸಲು ಸಿದ್ಧತೆ ನಡೆಸುತ್ತಿತ್ತು. ಈ ವೇಳೆ ಕೊಹ್ಲಿ ಕ್ರೀಸ್‌ನಲ್ಲಿದ್ದರು. ಇದೇ ಸಂದರ್ಭ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಅಭಿಮಾನಿಯೋರ್ವ ಪಿಚ್‌ ಕಡೆ ಬಂದು ಕೊಹ್ಲಿ ಕಾಲಿಗೆ ಬಿದ್ದು, ಆಲಿಂಗನ ಮಾಡಿದ್ದ. ಕೂಡಲೇ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಮೈದಾನದಿಂದ ಹೊರಹಾಕಿದ್ದರು. ಇದರ ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿತ್ತು. ಇದೀಗ ಈತನ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಚಾರಣೆ ವೇಳೆ ಸುಳ್ಳು ಹೇಳಿದ ಅಭಿಮಾನಿ….


ವಿರಾಟ್​ ಕೊಹ್ಲಿಯ ಅಪ್ಪಟ ಅಭಿಮಾನಿಯಾಗಿರುವ ಈತ ರಾಯಚೂರು ಮೂಲದವನಾಗಿದ್ದಾನೆ. ಈತನ ಹೆಸರು ಕುರುಮಪ್ಪ‌. ಆದರೆ, ಪೊಲೀಸ್​ ವಿಚಾರಣೆ ವೇಳೆ ತನ್ನ ಮೂಲ ಹೆಸರನ್ನು ಮರೆ ಮಾಚಿ ರಂಜಿತ್ ಎಂದು ಹೇಳಿದ್ದ. ದಾಖಲೆಗಳನ್ನು ಪರಿಶೀಲಿಸುವ ವೇಳೆ ಈತ ರಂಜಿತ್​ ಅಲ್ಲ ಕುರುಮಪ್ಪ‌ ಎಂಬ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಆತನ ವಿರುದ್ಧ ಎಫ್ಐಆರ್ ದಾಖಲಿಸಿ ಕರ್ತವ್ಯಕ್ಕೆ ಅಡ್ಡಿ, ಮೈದಾನಕ್ಕೆ ಅತಿಕ್ರಮಣ ಪ್ರವೇಶದಡಿ ಕೇಸ್ ದಾಖಲಿಸಿದ್ದಾರೆ.

ಇದನ್ನೂ ಓದಿ Virat Kohli: ಪಂಜಾಬ್​ ವಿರುದ್ಧ ಅರ್ಧಶತಕ ಬಾರಿಸಿ ಕೊಹ್ಲಿ ನಿರ್ಮಿಸಿದ ದಾಖಲೆಗಳು ಹೀಗಿವೆ!

ಪಂದ್ಯ ಗೆದ್ದ ಆರ್​ಸಿಬಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 176 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆರ್​ಸಿಬಿ 19.2 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 178 ರನ್ ಬಾರಿಸಿ ಗೆಲುವು ಸಾಧಿಸಿತು. ನಿಧಾನಗತಿಯಲ್ಲಿ ಆಡಿದ ಕೊಹ್ಲಿ 49 ಎಸೆತಕ್ಕೆ 77 ರನ್ ಬಾರಿಸಿದರು.

ಚಿನ್ನಸ್ವಾಮಿಯಲ್ಲಿ 25ನೇ ಅರ್ಧಶತಕ


2008ರಿಂದ ಆರ್​ಸಿಬಿ ಏಕೈಕ ತಂಡದ ಪರ ಆಡುತ್ತಿರುವ ವಿರಾಟ್​ ಕೊಹ್ಲಿ ಅವರು ನಿನ್ನೆ ನಡೆದ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ನಲ್ಲಿ 25ನೇ ಅರ್ಧಶತಕ ಪೂರ್ತಿಗೊಳಿಸಿದರು. ಇದು ಕ್ರೀಡಾಂಗಣವೊಂದರಲ್ಲಿ ಆಟಗಾರ ಬಾರಿಸಿದ ಗರಿಷ್ಠ ಅರ್ಧಶತಕದ ದಾಖಲೆಯೂ ಹೌದು. ಡೇವಿಡ್​ ವಾರ್ನರ್​ ಅವರು ಹೈದರಾಬಾದ್‌ನಲ್ಲಿ 18, ಆರ್​ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್‌ ಚಿನ್ನಸ್ವಾಮಿಯಲ್ಲಿ 16, ರೋಹಿತ್‌ ಶರ್ಮಾ ಮುಂಬೈಯ ವಾಂಖೇಡೆಯಲ್ಲಿ 15 ಬಾರಿ ಈ ಸಾಧನೆ ಮಾಡಿದ್ದಾರೆ.

Exit mobile version