Site icon Vistara News

ICC Hall of Fame: ಐಸಿಸಿ ಹಾಲ್ ಆಫ್ ಫೇಮ್​ಗೆ ಸೇರ್ಪಡೆಯಾದ ಸೆಹವಾಗ್​,​ ಎಡುಲ್ಜಿ

icc hall of fame 2023

ದುಬೈ: ಕ್ರಿಕೆಟ್​ ದಂತಕಥೆಗಳನೊಲ್ಲಗೊಂಡ ಪ್ರತಿಷ್ಠಿತ ಐಸಿಸಿ ಹಾಲ್ ಆಫ್ ಫೇಮ್​ಗೆ(ICC Hall of Fame) ಮೂರು ಹೊಸ ಹೆಸರುಗಳನ್ನು ಸೇರ್ಪಡೆಗೊಳಿಸಲಾಗಿದೆ. ಟೀಮ್​ ಇಂಡಿಯಾದ ಮಾಜಿ ಡ್ಯಾಶಿಂಗ್​ ಆಟಗಾರ ವೀರೇಂದ್ರ ಸೆಹವಾಗ್(Virender Sehwag)​, ಶ್ರೀಲಂಕಾದ ಅರವಿಂದ ಡಿ ಸಿಲ್ವಾ(Aravinda de Silva) ಮತ್ತು ಮಹಿಳಾ ಆಟಗಾರ್ತಿ ಡಯಾನಾ ಎಡುಲ್ಜಿ(Diana Edulji) ಸೇರ್ಪಡೆಗೊಂಡ ಮೂವರು ಸಾಧಕರು. ಅಸ್ತಿತ್ವದಲ್ಲಿರುವ ಹಾಲ್ ಆಫ್ ಫೇಮರ್ಸ್, ಮಾಧ್ಯಮ ಪ್ರತಿನಿಧಿಗಳು, ಎಫ್​ಐಸಿಎ ಮತ್ತು ಐಸಿಸಿಯ ಹಿರಿಯ ಕಾರ್ಯನಿರ್ವಾಹಕರ ನಡುವೆ ನಡೆಸಿದ ಮತದಾನದ ಪ್ರಕ್ರಿಯೆಯನ್ನು ಅನುಸರಿಸಿ ಇವರನ್ನು ಹಾಲ್ ಆಫ್ ಫೇಮ್​ಗೆ ಸೇರಿಸಲಾಗಿದೆ.

ಐಸಿಸಿ ಹಾಲ್ ಆಫ್ ಫೇಮ್ ಕ್ರೀಡೆಯ ಸುದೀರ್ಘ ಇತಿಹಾಸದುದ್ದಕ್ಕೂ ಶ್ರೇಷ್ಠ ಅಂತಾರಾಷ್ಟ್ರೀಯ ಕ್ರಿಕೆಟಿಗರನ್ನು ಗೌರವಿಸುತ್ತದೆ, ಮತ್ತು ಡಿ ಸಿಲ್ವಾ, ಎಡುಲ್ಜಿ ಮತ್ತು ಸೆಹವಾಗ್​ ಅವರು ಕ್ರಮವಾಗಿ 110, 111 ಮತ್ತು 112ನೆಯವರಾಗಿ ಸೇರ್ಪಡೆಗೊಂಡಿದ್ದಾರೆ ಎಂದು ಐಸಿಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಸೆಹವಾಗ್​ ಅವರು 14 ವರ್ಷದ ಕ್ರಿಕೆಟ್​ ಬಾಳ್ವೆಯಲ್ಲಿ 17,000 ಸಾವಿರಕ್ಕೂ ಅಧಿಕ ಅಂತಾರಾಷ್ಟ್ರಿಯ ರನ್​ ಬಾರಿಸಿದ್ದಾರೆ. ಶ್ರೀಲಂಕಾದ ಅರವಿಂದ ಡಿ ಸಿಲ್ವಾ ಅವರು 19 ವರ್ಷಗಳ ಕ್ರಿಕೆಟ್​ ವೃತ್ತಿ ಜೀವನದಲ್ಲಿ ಹಲವು ದಾಖಲೆ ಬರೆದಿದ್ದಾರೆ. 1996ರ ವಿಶ್ವಕಪ್​ನಲ್ಲಿ ಲಂಕಾ ಚಾಂಪಿಯನ್​ ಆಗುವಲ್ಲಿ ಡಿ ಸಿಲ್ವಾ ಪ್ರಮುಖ ಪಾತ್ರವಹಿಸಿದರು. ಡಯಾನಾ ಎಡುಲ್ಜಿ ಅವರು ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

“ನನ್ನನ್ನು ಈ ಗೌರವಕ್ಕೆ ಸೇರ್ಪಡೆ ಮಾಡಿದ್ದಕ್ಕೆ ಐಸಿಸಿ ಹಾಗೂ ತೀರ್ಪುಗಾರರಿಗೆ ಧನ್ಯವಾದ ಸಲ್ಲಿಸುತ್ತೇನೆ. ನನ್ನ ಜೀವನದ ಬಹು ದೊಡ್ಡ ಭಾಗವನ್ನು ನಾನು ಹೆಚ್ಚು ಇಷ್ಟಪಟ್ಟಿದ್ದ ಕ್ರಿಕೆಟ್ ಚೆಂಡನ್ನು ಹೊಡೆಯುವ ಕೆಲಸದಲ್ಲಿ ಕಳೆದಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ” ಎಂದು ಸೆಹವಾಗ್​ ಹೇಳಿದ್ದಾರೆ.

ಇದನ್ನೂ ಓದಿ ICC World Cup 2023: 9 ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಗೆಲುವಿನ ಓಟ ಹೀಗಿತ್ತು…

ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪರಿಗಣಿಸಿದ್ದಕ್ಕೆ ಭಾರತ ತಂಡದ ಪರ 100ಕ್ಕಿಂತ ಹೆಚ್ಚು ವಿಕೆಟ್​ಗಳನ್ನು ಕಿತ್ತಿರುವ ಎಡಗೈ ಬೌಲರ್ ಎಡುಲ್ಜಿ ಅವರು ಈ ಪ್ರಶಸ್ತಿ ನೀಡಿದ ಐಸಿಸಿಗೆ ಧನ್ಯವಾದ ತಿಳಿಸಿದ್ದಾರೆ. “ನನ್ನನ್ನು ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಸೇರ್ಪಡೆ ಮಾಡಿದ ಐಸಿಸಿ ಹಾಗೂ ತೀರ್ಪುಗಾರರಿಗೆ ಧನ್ಯವಾದಗಳು. ವಿಶ್ವದಾದ್ಯಂತದ ಪುರುಷ ಮತ್ತು ಮಹಿಳಾ ಕ್ರಿಕೆಟ್ ಪಟುಗಳ ಪಟ್ಟಿಗೆ ಪ್ರಪ್ರಥಮ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿಯಾಗಿ ಸೇರ್ಪಡೆಯಾಗುತ್ತಿರುವುದು ನಿಜಕ್ಕೂ ನನ್ನ ಪಾಲಿಗೆ ದೊಡ್ಡ ಗೌರವವಾಗಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Exit mobile version