ಅಹಮದಾಬಾದ್: ಗುಜರಾತ್ ತಂಡವನ್ನು ಮಣಿಸುವ ಮೂಲಕ ಎಂ.ಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡ 5ನೇ ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದೇ ವೇಳೆ ಧೋನಿ ಅವರು ತಮ್ಮ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದರು. ಆದರೆ ಟೀಮ್ ಇಂಡಿಯಾದ ಮಾಜಿ ಆಟಗಾರ ವಿರೇಂದ್ರ ಸೆಹವಾಗ್ ಅವರು ಧೋನಿ ಅವರ ಮುಂದಿನ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಧೋನಿ ಅವರು ಹರ್ಷ ಭೋಗ್ಲೆ ಅವರು ಕೇಳಿದ ನಿವೃತ್ತಿಯ ಪತ್ನೆಗೆ ಉತ್ತರಿಸಿದ ಧೋನಿ, “ಉತ್ತರ ಬೇಕೇ? ಪರಿಸ್ಥಿತಿಗೆ ಅನುಗುಣವಾಗಿ, ಇದು ನನ್ನ ನಿವೃತ್ತಿಗೆ ಉತ್ತಮ ಸಮಯ. ಆದರೆ ಈ ಕಳೆದ ವರ್ಷದಲ್ಲಿ ನಾನು ಪಡೆದ ಪ್ರೀತಿ ಮತ್ತು ಮನ್ನಣೆ ನೋಡಿದರೆ, ʼಥ್ಯಾಂಕ್ ಯುʼ ಎಂದು ಹೇಳಿ ನಿರ್ಗಮಿಸುವುದು ಸುಲಭದ ದಾರಿ. ಆದರೆ ಇನ್ನೂ 9 ತಿಂಗಳು ಕಠಿಣವಾಗಿ ದೇಹ ದಂಡಿಸಿ, ಇನ್ನೊಂದು ಆವೃತ್ತಿಯಲ್ಲಿ ನನ್ನ ತಂಡವನ್ನು ಮುನ್ನಡೆಸಿ ಆಡುವುದು ಸೂಕ್ತ” ಎಂದು ಹೇಳುವ ಮೂಲಕ ಧೋನಿ ಅವರು ಮುಂದಿನ ಆವೃತ್ತಿಯಲ್ಲಿಯೂ ಆಡುವ ಸುಳಿವನ್ನು ನೀಡಿದ್ದಾರೆ. ಆದರೆ ಅವರು ತಂಡದಲ್ಲಿ ಯಾವ ಪಾತ್ರ ನಿರ್ವಹಿಸಲಿದ್ದಾರೆ ಎನ್ನುವ ಗುಟ್ಟನ್ನು ಮಾತ್ರ ಬಿಟ್ಟುಕೊಡಲಿಲ್ಲ.
ಧೋನಿ ಅವರು ಈ ಮಾತನ್ನು ಹೇಳಿದ ತಕ್ಷಣ ಅವರ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ಮುಂದಿನ ಆವೃತ್ತಿಯಲ್ಲಿಯೂ ತಮ್ಮ ನೆಚ್ಚಿನ ಆಟಗಾರನ ಆಟವನ್ನು ಕಣ್ತುಂಬಿಕೊಳ್ಳಬಹುದು ಎಂದು. ಆದರೆ ಧೋನಿ ಅವರು ಮುಂದಿನ ಬಾರಿ ಆಡಿದರೂ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿಯಬಹುದು ಎಂದು ಹೇಳಲಾಗುತ್ತಿದೆ. ಈ ಮಾತನ್ನು ಸ್ವತಃ ಚೆನ್ನೈ ತಂಡದ ಕೋಚ್ ಡ್ವೇನ್ ಬ್ರಾವೊ ಕೂಡ ಹೇಳಿದ್ದಾರೆ. ಆದರೆ ವಿರೇಂದ್ರ ಸೆಹವಾಗ್ ಮಾತ್ರ ಧೋನಿ ಎಂದಿಗೂ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
“40 ವರ್ಷ ಆದರೂ ಫಿಟ್ನೆಸ್ ಇದ್ದರೆ ಕ್ರಿಕೆಟ್ ಆಡುವುದು ಕಷ್ಟವಲ್ಲ. ಈ ವರ್ಷ ಧೋನಿ ಮಂಡಿ ನೋವಿನ ಗಾಯದಿಂದಾಗಿ ಹೆಚ್ಚೇನು ಬ್ಯಾಟಿಂಗ್ ನಡೆಸಲಿಲ್ಲ. ಒಟ್ಟಾರೆ ಟೂರ್ನಿಯಲ್ಲಿ ಅವರು ಸುಮಾರು 50 ಎಸೆತಗಳನ್ನು ಎದುರಿಸಿರಬಹುದು. ಇಂಪ್ಯಾಕ್ಟ್ ಪ್ಲೇಯರ್ ನಿಯಮ ಅವರಿಗೆ ಒಪ್ಪುವುದೇ ಇಲ್ಲ. ಏಕೆಂದರೆ ಈಗಾಗಲೇ ಅವರು ಕೇವಲ ನಾಯಕತ್ವದ ಸಲುವಾಗಿ ಮಾತ್ರವೇ ಆಡುತ್ತಿದ್ದಾರೆ” ಎಂದು ಸೆಹವಾಗ್ ಹೇಳಿದರು.
ಇದನ್ನೂ ಓದಿ IPL 2023: ಚಾಂಪಿಯನ್ ಚೆನ್ನೈ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಗೂಗಲ್ ಸಿಇಒ ಸುಂದರ್ ಪಿಚೈ
“ತಂಡದ ನಾಯಕತ್ವ ನಿಭಾಯಿಸಲು ಧೋನಿ ಮೈದಾನದಲ್ಲಿ ಇರಲೇ ಬೇಕು. ಇಂಪ್ಯಾಕ್ಟ್ ಪ್ಲೇಯರ್ ನಿಯಮ ಇರುವುದು ಫೀಲ್ಡಿಂಗ್ ಮಾಡದೆ ಬ್ಯಾಟಿಂಗ್ ಮಾಡುವ ಆಟಗಾರರ ಬಳಕೆ ಮಾಡಿಕೊಳ್ಳಲು. ಅಥವಾ ಬ್ಯಾಟ್ ಮಾಡದೆ ಕೇವಲ ಬೌಲಿಂಗ್ ಮಾಡಲು ಬಳಕೆ ಮಾಡಿಕೊಳ್ಳುವುದಕ್ಕೆ. ಇದು ನಾಯಕತ್ವದ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ನಾಯಕತ್ವವಿಲ್ಲದೆ ಧೋನಿ ಆಡುವುದು ಕಷ್ಟಕರ. ಅದರಲ್ಲೂ ಅವರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಖಂಡಿತಾ ಆಡುವುದಿಲ್ಲ. ನನಗೆ ಅನಿಸಿದ ಪ್ರಕಾರ ಧೋನಿ ಅವರು ಮುಂದಿನ ಬಾರಿ ಚೆನ್ನೈ ತಂಡದ ಕೋಚ್ ಅಥವಾ ಮೆಂಟರ್ ಆಗಿ ಕರ್ತವ್ಯ ನಿರ್ವಹಿಸುವ ಸಾಧ್ಯತೆ ಅಧಿಕ” ಎಂದು ಸೆಹವಾಗ್ ಹೇಳಿದರು.