ಮುಂಬಯಿ: ಭಾರತೀಯ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿ (Virat Kohli) ಮತ್ತು ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ(anushka sharma) ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಕೊಹ್ಲಿಯ ಎಲ್ಲ ಏರಿಳಿತದಲ್ಲಿಯೂ ಪತ್ನಿ ಅನುಷ್ಕಾ ಬೆಂಬಲಕ್ಕೆ ನಿಂತು ಅವರಿಗೆ ಸಾದಾ ಪ್ರೋತ್ಸಾಹವನ್ನು ನೀಡುತ್ತಲೇ ಬಂದಿದ್ದಾರೆ. ಆದರೆ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅನುಷ್ಕಾ ಶರ್ಮಾ ಅವರು ವಿರಾಟ್ ಕೊಹ್ಲಿಯ ಕುಡಿತದ ಚಟದ ಬಗ್ಗೆ ರೋಚಕ ಸಂಗತಿಯೊಂದನ್ನು ತಿಳಿಸಿದ್ದಾರೆ.
ಸಾಮಾನ್ಯವಾಗಿ ನೀವಿಬ್ಬರು ಪಾರ್ಟಿಗಳಿಗೆ ಹೋದಾಗ ಯಾರನ್ನು ಹೆಚ್ಚಾಗಿ ಜನ ಗುರುತಿಸುತ್ತಾರೆ? ಎಂಬ ಪ್ರಶ್ನೆಗೆ ಉತ್ತರಿಸಿದ ಅನುಷ್ಕಾ ಶರ್ಮಾ, ಅದು ವಿರಾಟ್ ಕೊಹ್ಲಿ ಎಂದು ಹೇಳಿದ್ದಾರೆ. ಇದಕ್ಕೆ ಕಾರಣವನ್ನು ಅವರು ತಿಳಿಸಿದ್ದಾರೆ. ಕೊಹ್ಲಿ ಮೂರು ಪೆಗ್ ಹಾಕಿದ ಬಳಿಕ ಡ್ಯಾನ್ಸ್ ಮಾಡಲು ಆರಂಭಿಸುತ್ತಾರೆ. ಹೀಗಾಗಿ ಅಲ್ಲಿದ್ದವರು ಕೊಹ್ಲಿಯ ಕಡೆ ಹೆಚ್ಚು ಗಮನ ಕೊಡುತ್ತಾರೆ. ಒಮ್ಮೆ ಅವರು ನೃತ್ಯ ಆರಂಭಿಸಿದರೆ ಇದನ್ನು ಯಾರಿಂದಲೂ ತಡೆಯಲು ಅಸಾಧ್ಯ ಎಂದು ಹೇಳಿದರು.
ಪತ್ನಿಯ ಈ ಮಾತನ್ನು ನಗುತ್ತಲೇ ಒಪ್ಪಿಕೊಂಡ ವಿರಾಟ್, ಇದು ನಿಜ. ನಾನು ಎರಡು ಪೆಗ್ಗಳಿಗಿಂತಲೂ ಹೆಚ್ಚು ಕುಡಿದೆನೆಂದರೆ ಡ್ಯಾನ್ಸ್ ಮಾಡಲು ಆರಂಭಿಸುತ್ತೇನೆ. ಆ ಬಳಿಕ ನಾನು ಏನು ಮಾಡುತ್ತೇನೆ ಎಂಬ ಅರಿವೇ ನನಗಿರುವುದಿಲ್ಲ. ಆದರೆ ಈ ವರ್ತನೆಯನ್ನು ಈಗ ನೆನಪಿಸಿಕೊಂಡರೆ ನನಗೆ ನಾಚಿಕೆಯಾಗುತ್ತದೆ. ಈಗ ನಾನು ಕುಡಿತದಿಂದ ಮುಕ್ತವಾಗಿದ್ದೇನೆ. ಇದಕ್ಕೆ ಒಂದು ರೀತಿಯಲ್ಲಿ ಪತ್ನಿ ಅನುಷ್ಕಾ ಕೂಡ ಕಾರಣ. ಅವಳು ನನ್ನ ಬದುಕಿನಲ್ಲಿ ಬಂದ ಬಳಿಕ ಹಲವು ವಿಚಾರದಲ್ಲಿ ನಾನು ಸುಧಾರಿಸಿಕೊಂಡಿದ್ದೇನೆ ಎಂದು ಕೊಹ್ಲಿ ಹೇಳಿದರು.
ಅನುಷ್ಕಾಳೇ ನನ್ನ ಸ್ಫೂರ್ತಿ
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವಿರಾಟ್ ಕೊಹ್ಲಿ ಅವರು ತಮ್ಮ ಪತ್ನಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. “ಅನುಷ್ಕಾ ಅವರ ಭೇಟಿ ನನ್ನ ಜೀವನದಲ್ಲಿ ಹೊಸ ದೃಷ್ಟಿಕೋನವನ್ನು ಕೊಟ್ಟಿದೆ. ಹಾಗೇ ಎಲ್ಲವನ್ನೂ ಸ್ವೀಕರಿಸುವ ಭಾವನೆಯನ್ನು ಬೆಳೆಸಿಕೊಳ್ಳಲು ಸಹಕರಿಸಿದೆ” ಎಂದು ಕೊಹ್ಲಿ ಹೇಳಿದ್ದರು.
ಇದನ್ನೂ ಓದಿ IPL 2023: ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ; ಐಪಿಎಲ್ ಫ್ರಾಂಚೈಸಿಗಳಿಗೆ ಬಿಸಿಸಿಐ ಆದೇಶ
“ನನ್ನ ಜೀವನವು ಸಂಪೂರ್ಣವಾಗಿ ವಿಭಿನ್ನ ದೃಷ್ಟಿಕೋನವನ್ನು ಹೊಂದಿತ್ತು. ನೀವು ಒಬ್ಬ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಾಗ, ನಿಮ್ಮೊಳಗೆ ಆ ಬದಲಾವಣೆಗಳನ್ನು ಪ್ರಕ್ರಿಯೆಗೊಳಿಸಲು ಪ್ರಾರಂಭಿಸುತ್ತೀರಿ. ಅವಳ ಜೀವನದ ದೃಷ್ಟಿಕೋನವು ವಿಭಿನ್ನವಾಗಿತ್ತು ಮತ್ತು ಅದು ನನ್ನನ್ನು ಉತ್ತಮವಾಗಿ ಬದಲಾಯಿಸಲು ಮತ್ತು ವಿಷಯಗಳನ್ನು ಹೆಚ್ಚು ಒಪ್ಪಿಕೊಳ್ಳುವಂತೆ ಪ್ರೇರೇಪಿಸಿತು. ತಾಯಿಯಾಗಿ ಅನುಷ್ಕಾ ಮಾಡಿದ ತ್ಯಾಗಗಳು ದೊಡ್ಡವು. ಅವಳನ್ನು ನೋಡಿದಾಗ, ನನಗೆ ಏನೇ ಸಮಸ್ಯೆಗಳಿದ್ದರೂ ಏನೂ ಅಲ್ಲ ಎಂದು ಎನಿಸಿಬಿಡುತ್ತದೆ” ಎಂದು ಕೊಹ್ಲಿ ಪತ್ನಿ ಅನುಷ್ಕಾ ಬಗ್ಗೆ ಮೆಚ್ಚುಗೆಯ ಮಾತುಗಳನಾಡಿದ್ದರು. ಸದ್ಯ ವಿರಾಟ್ ಕೊಹ್ಲಿ 16ನೇ ಆವೃತ್ತಿಯ ಐಪಿಎಲ್ಗಾಗಿ ಅಭ್ಯಾಸ ನಡೆಸುತ್ತಿದ್ದಾರೆ.