ಮುಂಬಯಿ : ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ಕೊರೊನಾ ಸೋಂಕಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಏಷ್ಯಾ ಕಪ್‌ಗೆ (Asia Cup- 2022) ಪ್ರವಾಸ ಹೊರಡಲಿರುವ ಭಾರತ ತಂಡದ ಹಂಗಾಮಿ ಕೋಚ್ ಆಗಿ ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ನೇಮಕಗೊಂಡಿದ್ದಾರೆ. ಯುಎಇನಲ್ಲಿ ೨೦೨೨ನೇ ಆವೃತ್ತಿಯ ಏಷ್ಯಾ ಕಪ್ ನಡೆಯಬೇಕಾಗಿದ್ದು, ಪ್ರವಾಸಕ್ಕೆ ಸಿದ್ದತೆ ನಡೆಸುತ್ತಿದ್ದ ವೇಳೆ ಕೋಚ್ ದ್ರಾವಿಡ್ ಅವರಿಗೆ ಸೋಂಕು ತಗುಲಿದೆ. ಸದ್ಯಕ್ಕೆ ಅವರಿಗೆ ಯುಎಇಗೆ ಪ್ರವಾಸ ಮಾಡಲು ಸಾಧ್ಯವಿಲ್ಲದ ಕಾರಣ ಹೊಣೆಗಾರಿಕೆಯನ್ನು ಲಕ್ಷ್ಮಣ್ ಅವರಿಗೆ ವಹಿಸಲಾಗಿದೆ.
ಲಕ್ಷ್ಮಣ್ ಅವರು ಜಿಂಬಾಬ್ವೆಗೆ ಪ್ರವಾಸ ಹೋಗಿದ್ದ ಭಾರತ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಈ ಸರಣಿಯನ್ನು ಭಾರತ ೩-೧ ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತ್ತು. ಏಷ್ಯಾ ಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡದ ಕೆಲವು ಆಟಗಾರರು ಜಿಂಬಾಬ್ವೆಯಿಂದಲೇ ಯುಎಇಗೆ ಪ್ರವಾಸ ಮಾಡಲಿದ್ದು, ಹಂಗಾಮಿ ಕೋಚ್ ಆಗಿ ನೇಮಕಗೊಂಡ ಲಕ್ಷ್ಮಣ್ ಕೂಡ ಅಲ್ಲಿಂದಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ.
“ಏಷ್ಯಾ ಕಪ್‌ಗೆ ಪ್ರವಾಸ ಹೋಗುವ ಮುನ್ನ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಹೀಗಾಗಿ ಅವರಿಗೆ ಪ್ರವಾಸ ಮಾಡಲು ಸಾಧ್ಯವಾಗುವುದಿಲ್ಲ. ಲಕ್ಷ್ಮಣ್ ಅವರನ್ನು ಹಂಗಾಮಿ ಕೋಚ್ ಆಗಿ ನೇಮಕ ಮಾಡಲಾಗಿದ್ದು, ಒಂದು ಬಾರಿ ದ್ರಾವಿಡ್ ಅವರ ಪರೀಕ್ಷಾ ವರದಿ ನೆಗೆಟಿವ್ ಬಂದ ಬಳಿಕ ತಂಡವನ್ನು ಸೇರಿಕೊಳ್ಳಲಿದ್ದಾರೆ” ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.
ಲಕ್ಷ್ಮಣ್ ಅವರು ಈಗ ಉಪನಾಯಕ ಕೆ. ಎಲ್. ರಾಹುಲ್, ಆಲ್‌ರೌಂಡರ್ ದೀಪಕ್ ಹೂಡ ಹಾಗೂ ವೇಗದ ಬೌಲರ್ ಆವೇಶ್ ಖಾನ್ ಹಾಗೂ ಮೀಸಲು ಆಟಗಾರ ದೀಪಕ್ ಚಾಹರ್ ಜತೆ ಯುಎಇ ಪ್ರವಾಸ ಮಾಡಲಿದ್ದಾರೆ.
ಇದನ್ನೂ ಓದಿ | Asia Cup | ಭಾರತ ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್‌ಗೆ ಕೊರೊನಾ ಸೋಂಕು