ಜೊಹಾನ್ಸ್ಬರ್ಗ್: ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮಂಗಳವಾರದಿಂದ ಆರಂಭಗೊಳ್ಳಲಿರುವ ಬಾಕ್ಸಿಂಗ್ ಡೇ ಟೆಸ್ಟ್(Boxing Day Test) ಪಂದ್ಯಕ್ಕೆ ಎಲ್ಲ ಸಿದ್ಧತೆಗಳನ್ನು ನಡೆಸುತ್ತಿವೆ. ಈ ಮಧ್ಯೆ ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್(AB de Villiers) ಅವರು ವಿರಾಟ್ ಕೊಹ್ಲಿಯ(Virat Kohli) ವಿಕೆಟ್ ಪಡೆಯುವ ತಂತ್ರವನ್ನು ತಮ್ಮ ದೇಶದ ಆಟಗಾರರಿಗೆ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಕುಚಿಕು ಗೆಳೆಯರು. ಕೊಹ್ಲಿಯ ಯಾವುದೇ ಸಾಧನೆ ಇರಲಿ ಮೊದಲು ಹಾರೈಸುವುದು ವಿಲಿಯರ್ಸ್. ಆದರೆ, ಅಚ್ಚರಿ ಎಂಬಂತೆ ಎಬಿಡಿ ಅವರು ಟೆಸ್ಟ್ ಸರಣಿಯಲ್ಲಿ ಕೊಹ್ಲಿಯ ವಿಕೆಟ್ ಹೇಗೆ ಪಡೆಯಬೇಕೆಂಬುದನ್ನು ದಕ್ಷಿಣ ಆಫ್ರಿಕಾ ಆಟಗಾರರಿಗೆ ತಿಳಿಸಿಕೊಟ್ಟಿದ್ದಾರೆ. ಕೊಹ್ಲಿಯ ವಿಕೆಟ್ ಪಡೆಯಲು ಎಬಿಡಿ ತಂತ್ರವನ್ನು ಹೇಳಿಕೊಟ್ಟರೂ ಇವರಿಬ್ಬರ ಸ್ನೇಹಕ್ಕೆ ಯಾವುದೇ ಅಡ್ಡಿಯಾಗದು.
ಕೊಹ್ಲಿ ವಿಕೆಟ್ ಪಡೆಯುವುದು ಹೇಗೆ?
ಬಾಕ್ಸಿಂಗ್ ಟೆಸ್ಟ್ ಪಂದ್ಯದ ಕುರಿತು ಪಿಟಿಐ ಜತೆ ಮಾತನಾಡುವ ವೇಳೆ ಎಬಿಡಿ ಕೊಹ್ಲಿಯ ವಿಕೆಟ್ ಪಡೆಯುವುದು ಗೇಗೆ ಎನ್ನುವ ಸಲಹೆಯನ್ನು ತಂಡದ ಸಹ ಆಟಗಾರರಿಗೆ ತಿಳಿಸಿಕೊಟ್ಟಿದ್ದಾರೆ. ಆಫ್ ಸ್ಟಂಪ್ ಜಾಗದಲ್ಲಿ ಪದೇಪದೆ ಬೌಲಿಂಗ್ ನಡೆಸಿದರೆ ಇದು ಕೊಹ್ಲಿಗೆ ತಪ್ಪು ಮಾಡಲು ಪ್ರೇರೇಪಿಸುತ್ತದೆ. ಈ ಮೂಲಕ ಅವರ ವಿಕೆಟ್ ಪಡೆಯಬಹುದು ಎಂದು ಎಬಿಡಿ ಹೇಳಿದ್ದಾರೆ.
“ಕೊಹ್ಲಿಯಂತಹ ಸ್ಟಾರ್ ಹಾಗೂ ಅನುಭವಿ ಆಟಗಾರರನ ವಿಕೆಟ್ ಪಡೆಯಲು ಇರುವ ಒಂದು ಸರಳ ಸೂತ್ರವೆಂದರೆ, ಅವರಿಗೆ ಆಫ್ ಸ್ಟಂಪ್ ಬೌಲಿಂಗ್ ನಡಸುವುದು. ಲೈನ್ ಆಂಡ್ ಲೆನ್ತ್ನಲ್ಲಿ ಬೌಲಿಂಗ್ ಮಾಡಿ ಅವರನ್ನು ಔಟ್ ಮಾಡುವುದು ಅಷ್ಟು ಸುಲಭವಲ್ಲ. ಅವರು ಇದುವರೆಗೆ ಔಟ್ ಆಗಿರುವ ನಿದರ್ಶನಗಳನ್ನು ನೋಡಿದರೆ ಇದು ನಿಮಗೆ ತಿಳಿಯುತ್ತದೆ. ವಿಕೆಟ್ನಿಂದ ಹೊರ ಹೋಗುವ ಚೆಂಡಿಗೆ ಹೆಚ್ಚು ಬಾರಿ ಬ್ಯಾಟ್ ತಾಗಿಸಿ ವಿಕೆಟ್ ಕೈಚೆಲ್ಲಿದ್ದಾರೆ. ಆದ್ದರಿಂದ ನಮ್ಮ ತಂಡದ ಬೌಲರ್ಗಳು ಕೊಹ್ಲಿಗೆ ಆಫ್ ಸ್ಟಂಪ್ನಲ್ಲಿ ಬೌಲಿಂಗ್ ಮಾಡಿದರೆ ಉತ್ತಮ” ಎಂದು ಡಬಿಡಿ ಹೇಳಿದ್ದಾರೆ.
ಪಂದ್ಯಕ್ಕೆ ಮಳೆ ಭೀತಿ
ಇತ್ತಂಡಗಳ ನಡುವಣ ಈ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡಚಣೆಯ ಭೀತಿ ಕಾಡಿದೆ. ಪಂದ್ಯದ ಮೊದಲ ದಿನದಾಟಕ್ಕೆ ಶೇ. 96ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. 2ನೇ ದಿನಕ್ಕೆ ಮಳೆ ಭೀತಿ ಶೇ. 25ಕ್ಕೆ ತಗ್ಗಲಿದೆ. 3ನೇ ದಿನದಾಟದಲ್ಲಿ ಬೆಳಗ್ಗಿನ ಅವಧಿಗೆ ಮಾತ್ರ ಮಳೆ ಭೀತಿ ಇದೆ. 4 ಮತ್ತು 5ನೇ ದಿನದಾಟಗಳಲ್ಲಿ ಮಳೆ ಕಾಡುವ ಭೀತಿ ಏರಿಕೆ ಕಂಡು ಶೇ. 60ರಷ್ಟು ಇರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಒಟ್ಟಾರೆ ಪಂದ್ಯ ಸಂಪೂರ್ಣವಾಗಿ 5 ದಿನಗಳ ಕಾಲ ನಡೆಯುವು ಕಷ್ಟ ಸಾಧ್ಯ ಎನ್ನಲಾಗಿದೆ.
ಅಭ್ಯಾಸ ಆರಂಭ
ಏಕದಿನ ಸರಣಿಯಿಂದ ಹೊರಗುಳಿದಿದ್ದ ತಂಡದ ಪ್ರಧಾನ ಕೋಚಿಂಗ್ ಸಿಬ್ಬಂದಿಗಳೆಲ್ಲ ಮತ್ತೆ ವಾಪಸ್ ಆಗಿದ್ದು ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಆಟಗಾರರು ಭಾನುವಾರ ಸೆಂಚುರಿಯನ್ನಲ್ಲಿ ಅಭ್ಯಾಸ ನಡೆಸಿದ್ದಾರೆ.