Site icon Vistara News

ಪಂದ್ಯ ಆಡಲು ಹೆಲಿಕಾಪ್ಟರ್ ಮೂಲಕ ನೇರವಾಗಿ ಮೈದಾನಕ್ಕಿಳಿದ ಡೇವಿಡ್​ ​ವಾರ್ನರ್​; ವಿಡಿಯೊ ವೈರಲ್​

david warner helicopter

ಸಿಡ್ನಿ: ಕಳೆದ ವಾರವಷ್ಟೇ ಟೆಸ್ಟ್​ ಮತ್ತು ಏಕದಿನ ಕ್ರಿಕೆಟ್​ಗೆ ವಿದಾಯ ಹೀಳಿದ್ದ ಆಸ್ಟ್ರೇಲಿಯಾದ ಎಡಗೈ ಬ್ಯಾಟರ್​ ಡೇವಿಡ್​ ವಾರ್ನರ್(David Warner)​ ಬಿಗ್​ ಬ್ಯಾಷ್​ ಟಿ20(BBL) ಪಂದ್ಯವನ್ನಾಡಲು ತಮ್ಮ ಹೆಲಿಕಾಪ್ಟರ್ ಮೂಲಕ ನೇರವಾಗಿ ಮೈದಾನಕ್ಕಿಳಿದ್ದಾರೆ. ಇದರ ವಿಡಿಯೊ ವೈರಲ್(viral video) ಆಗಿದೆ.

ಶುಕ್ರವಾರ ನಡೆಯುವ ಸಿಡ್ನಿ ಥಂಡರ್ ಮತ್ತು ಸಿಡ್ನಿ ಸಿಕ್ಸರ್ಸ್ ನಡುವಣ ಬಿಗ್ ಬ್ಯಾಷ್‌ ಲೀಗ್‌ ಪಂದ್ಯವಾಡಲು ಡೇವಿಡ್ ವಾರ್ನರ್ ಹೆಲಿಕಾಪ್ಟರ್ ಮೂಲಕ ಸಿಡ್ನಿ ಮೈದಾನಕ್ಕೆ ಬಂದಿದ್ದಾರೆ. ಅಚ್ಚರಿ ಎಂದರೆ ವಾರ್ನರ್​ ತಮ್ಮ ಸಹೋದರನ ಮದುವೆ ಕಾರ್ಯಕ್ರಮ ಮುಗಿಸಿ ಹೆಲಿಕಾಪ್ಟರ್ ಮೂಲಕ ಬಂದಿದ್ದಾರೆ ಎಂದು ತಿಳಿದುಬಂದಿದೆ.


ಸಿಡ್ನಿ ಥಂಡರ್ ಪ್ರಸಕ್ತ ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಲ್ಲಿ 5 ಸೋಲು ಕಂಡಿದೆ. ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದೆ. ವಾರ್ನರ್ ಆಗಮನದಿಂದ ಸಿಡ್ನಿ ಥಂಡರ್‌ ಭವಿಷ್ಯ ಬದಲಾಗಲಿದೆಯಾ ಎಂದು ಕಾದು ನೋಡಬೇಕಿದೆ. ವಾರ್ನರ್​ ಸದ್ಯ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ಪಾಕ್​ ವಿರುದ್ಧದ ವಿದಾಯ ಟೆಸ್ಟ್​ ಸರಣಿಯಲ್ಲಿ ಶತಕ ಮತ್ತು ಅರ್ಧಶತಕ ಬಾರಿಸಿದ್ದರು.

2011 ಜನವರಿ 4ರಂದು ಬ್ರಿಸ್ಬೇನ್‌ನಲ್ಲಿ ಕಿವೀಸ್​ ವಿರುದ್ಧದ ಪಂದ್ಯವನ್ನಾಡುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಡೇವಿಡ್ ವಾರ್ನರ್ ಒಟ್ಟು 205 ಇನಿಂಗ್ಸ್‌ಗಳಲ್ಲಿ 8,786 ರನ್ ಗಳಿಸಿದ್ದಾರೆ. 26 ಶತಕ ಹಾಗೂ 37 ಅರ್ಧಶತಕ ಬಾರಿಸಿದ್ದಾರೆ. ಅಜೇಯ 335 ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ವಿದಾಯದ ಪಂದ್ಯ ಆಡಿದ ಬಳಿಕ ತಮ್ಮ ಟೆಸ್ಟ್​ ಅನುಭವ ಹಂಚಿಕೊಂಡಿದ್ದ ವಾರ್ನರ್​, “ನಾನು ಕಂಡ ಕನಸು ಸ್ಮರಣೀಯವಾಗಿ ಮುಕ್ತಾಯಕಂಡಿದೆ. ಅದರಲ್ಲೂ ಗೆಲುವಿನ ವಿದಾಯ ಸಿಕ್ಕಿರುವುದು ಮರೆಯಲು ಅಸಾಧ್ಯ. ಕಳೆದ 18 ತಿಂಗಳುಗಳಿಂದ ಆಸ್ಟ್ರೇಲಿಯಾ ಕ್ರಿಕೆಟ್​ನಲ್ಲಿ ಉತ್ತಮ ಸಾಧನೆ ಮಾಡಿದೆ. ಏಕದಿನ ಮತ್ತು ಟೆಸ್ಟ್​ ವಿಶ್ವಕಪ್​ ಗೆದ್ದ ಸಾಧನೆ ನಮ್ಮ ತಂಡದ್ದು. ಇಷ್ಟು ವರ್ಷಗಳ ಕಾಲ ಆಸೀಸ್​ ತಂಡದ ಪರ ಆಡಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ನನ್ನ ಎಲ್ಲ ಕಷ್ಟದ ಕಾಲದಲ್ಲಿ ಜತೆಗಿದ್ದ ತಂಡದ ಸಿಬ್ಬಂದಿ, ಆಟಗಾರರು ಹಾಗೂ ಕುಟುಂಬ ಸದಸ್ಯರಿಗೆ ವಿಶೇಷ ಧನ್ಯವಾದಗಳು” ಎಂದು ವಾರ್ನರ್​ ಹೇಳಿದ್ದರು.

Exit mobile version