ಲಾಹೋರ್: ಟಿ20 ವಿಶ್ವ ಕಪ್ನಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನ ಎಲ್ಲಡೆ ಸುದ್ದಿಯಲ್ಲಿರುವಾಗಲೇ ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ವೇಗಿ ವಾಸಿಂ ಅಕ್ರಮ್(Wasim Akram) ನಾನೊಬ್ಬ ಡ್ರಗ್ಸ್ (ಕೊಕೇನ್) ವ್ಯಸನಿಯಾಗಿದ್ದೆ ಎಂದು ಒಪ್ಪಿಕೊಂಡಿದ್ದಾರೆ. ಕ್ರಿಕೆಟ್ ವೃತ್ತಿಬದುಕಿಗೆ ನಿವೃತ್ತಿ ನೀಡಿದ ಬಳಿಕದ ದಿನಗಳಲ್ಲಿ ಕೊಕೇನ್ ವ್ಯಸನಿಯಾಗಿದ್ದ ಸಂಗತಿಯನ್ನು ಅವರು ಬಹಿರಂಗಪಡಿಸಿದ್ದಾರೆ.
ವಾಸಿಂ ಅಕ್ರಮ್ ಅವರು ತಮ್ಮ ಕ್ರಿಕೆಟ್ ವೃತ್ತಿಬದುಕಿನ ಕುರಿತು ಹೊರತಂದ ಹೊಸ ಪುಸ್ತಕ “ಸುಲ್ತಾನ್: ಎ ಮೆಮೊಯರ್”ನಲ್ಲಿ ಈ ಅಚ್ಚರಿಯ ಸಂಗತಿ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ಹೊಸ ಆತ್ಮಕತೆಯಲ್ಲಿ ಡ್ರಗ್ಸ್ ವ್ಯಸನದ ಬಗ್ಗೆ ಮಾತನಾಡಿರುವ ವಾಸಿಂ, ದಕ್ಷಿಣ ಏಷ್ಯಾದಲ್ಲಿ ಜನಪ್ರಿಯ ವ್ಯಕ್ತಿಗಳಲ್ಲಿ ಇಂಥದ್ದೊಂದು ವ್ಯಸನ ಸಹಜವಾಗಿಬಿಟ್ಟಿದೆ. ಒಂದೇ ರಾತ್ರಿಯಲ್ಲಿ 10 ಪಾರ್ಟಿಗಳಿಗೆ ತೆರಳಬಹುದು. ಆದರೆ ಕೊಕೇನ್ ವ್ಯಸನದಿಂದ ನಾನು ಸಾಕಷ್ಟು ತೊಂದರೆ ಅನುಭವಿಸಿದ್ದೆ ಎಂದು ತಿಳಿಸಿದ್ದಾರೆ.
“2009ರಲ್ಲಿ ತೀರಾ ಅಪರೂಪದ ಸೋಂಕಿನಿಂದಾಗಿ ತನ್ನ ಮೊದಲ ಪತ್ನಿ ಹುಮಾ ಅಕಾಲಿಕ ನಿಧನ ಹೊಂದಿದರು. ಹುಮಾ, ತನ್ನ ಕಡೇ ದಿನಗಳಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನನ್ನಿಂದ ಕೊಕೇನ್ ವ್ಯಸನವನ್ನು ದೂರವಾಗುವಂತೆ ಮಾಡಿದರು. ಅಂದಿನಿಂದ ಆ ವ್ಯಸನದಿಂದ ಹೊರಬಂದೆ. ಆ ಕಡೆಗೆ ಮತ್ತೆ ತಿರುಗಿಯೂ ನೋಡಲಿಲ್ಲ,” ಎಂದು ವಾಸಿಂ ಅಕ್ರಮ್ ತಿಳಿಸಿದ್ದಾರೆ.
ಎಡಗೈ ವೇಗಿ ವಾಸಿಂ ಅಕ್ರಮ್ ತಮ್ಮ ಪ್ರಚಂಡ ದಾಳಿಯ ಮೂಲಕ ವಿಶ್ವದ ಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರಾಗಿ ಮಿಂಚಿದ್ದರು. 1984ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ ವಾಸಿಂ ಅಕ್ರಮ್, 900ಕ್ಕೂ ಹೆಚ್ಚಿನ ಅಂತಾರಾಷ್ಟ್ರೀಯ ವಿಕೆಟ್ ಕಬಳಿಸಿದ್ದಾರೆ. 2003ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವ ಕಪ್ ಟೂರ್ನಿಯ ಬಳಿಕ ನಿವೃತ್ತಿ ಘೋಷಿಸಿದ್ದರು. ಪಾಕಿಸ್ತಾನ ತಂಡ 1992ರ ಏಕದಿನ ವಿಶ್ವ ಕಪ್ ಗೆಲ್ಲುವಲ್ಲಿ ಅಕ್ರಮ್ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ T20 World Cup | ರೋಚಕ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಬಾಂಗ್ಲಾಗೆ 3 ರನ್ ಜಯ, ಕೊನೇ ಓವರ್‌ನಲ್ಲಿ ಹೈಡ್ರಾಮಾ