ಚೆನ್ನೈ: ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಲಿ ಆವತ್ತಿಯ ಐಪಿಎಲ್ನಲ್ಲಿ ಬ್ಯಾಟಿಂಗ್ ವೈಭವ ಪ್ರದರ್ಶಿಸುತ್ತಿದ್ದಾರೆ. ಕೆಳ ಕ್ರಮಾಂಕದಲ್ಲಿ ಅವರು ಬ್ಯಾಟ್ ಮಾಡಲು ಇಳಿಯುತ್ತಿರುವ ಹೊರತಾಗಿಯೂ ಯುವ ಆಟಗಾರರು ನಾಚುವಂತೆ ಬ್ಯಾಟ್ ಬೀಸುತ್ತಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು 7 ಎಸೆತಗಳಿಗೆ ಅಜೇಯ 14 ರನ್ ಬಾರಿಸಿದ್ದರೆ, ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಮೂರು ಎಸೆತಗಳಲ್ಲಿ 12 ರನ್ ಬಾರಿಸಿದ್ದಾರೆ. ಕ್ರೀಸ್ಗೆ ಬಂದವರೇ ಮೊದಲೆರಡು ಎಸೆತಗಳಿಗೆ ಸಿಕ್ಸರ್ ಬಾರಿಸಿದ ಅವರು ಮೂರನೇ ಎಸೆತಕ್ಕೂ ಸಿಕ್ಸರ್ ಬಾರಿಸಲು ಯತ್ನಿಸಿ ಔಟಾಗಿದ್ದಾರೆ. ಅವರ ಬ್ಯಾಟಿಂಗ್ ಅಬ್ಬರಕ್ಕೆ ಸ್ಟೇಡಿಯಮ್ ಮೆಚ್ಚಿ ಚಪ್ಪಾಳೆ ತಟ್ಟಿತ್ತು.
ಧೋನಿ ಕೊನೇ ಓವರ್ನಲ್ಲಿ ಸಿಡಿದೆದ್ದ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 217 ರನ್ಗಳ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು. ಅಲ್ಲದಿದ್ದರೆ ಬ್ಯಾಟಿಂಗ್ಗೆ ನೆರವಾಗುತ್ತಿದ್ದ ಚೆಪಾಕ್ ಪಿಚ್ನಲ್ಲಿ ಸಿಎಸ್ಕೆ ತಂಡ ಸೋಲು ಅನುಭವಿಸಬೇಕಾಗಿತ್ತು. ಆದರೆ ಬೌಲಿಂಗ್ನಲ್ಲೂ ಉತ್ತಮ ಪ್ರದರ್ಶನ ನೀಡಿದ ಚೆನ್ನೈ ತಂಡ 12 ರನ್ಗಳ ಸುಲಭ ವಿಜಯ ತನ್ನದಾಗಿಸಿಕೊಂಡಿತು.
ಇವೆಲ್ಲದರ ನಡುವೆ ಧೋನಿಯ ಬ್ಯಾಟಿಂಗ್ ಬಗ್ಗೆ ಅವರ ಮಾಜಿ ಸಹ ಆಟಗಾರರು ಹಾಗೂ ಹಾಲಿ ಕಾಮೆಂಟೇಟರ್ಗಳಾದ ಸುರೇಶ್ ರೈನಾ ಹಾಗೂ ರಾಬಿನ್ ಉತ್ತಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕ್ರಿಕೆಟ್ನಲ್ಲಿ ತಳವೂರಲು ಮತ್ತು ಸಾಧನೆ ಮಾಡಲು ಬಯಸುವ ಯುವ ಆಟಗಾರರು ಧೋನಿಯನ್ನು ನೋಡಿ ಕಲಿಯಬೇಕಾಗಿದೆ ಎಂದು ಅಭಿಪ್ರಾಯಪ ವ್ಯಕ್ತಪಡಿಸಿದ್ದಾರೆ.
ಜಿಯೊ ಸಿನಿಮಾದಲ್ಲಿ ಮಾತನಾಡಿದ ಅವರು, ಐಪಿಎಲ್ನಲ್ಲಿ ಆಡುವ ಎಲ್ಲ ಯುವ ಆಟಗಾರರು ಧೋನಿಯನ್ನು ನೋಡಿ ಕಲಿಯುವುದು ಸಾಕಷ್ಟಿದೆ. ಡ್ರೆಸಿಂಗ್ ರೂಮ್ ಆಗಲಿ, ಎದುರಾಳಿ ತಂಡದ ಜತೆಗಿನ ವರ್ತನೆಯಾಗಲಿ ಅಥವಾ ಆಟದಲ್ಲಿ ಆಗಲಿ ಧೋನಿ ಹೊಂದಿರುವ ಬದ್ಧತೆಯನ್ನು ಕಲಿಯಬೇಕಾಗಿದೆ. ಶಿಸ್ತು ಮತ್ತು ಸಂಯಮವನ್ನು ಅವರು ಎಲ್ಲ ಕಡೆಯೂ ಕಾಪಾಡಿಕೊಳ್ಳುತ್ತಾರೆ ಎಂದು ಉತ್ತಪ್ಪ ಮತ್ತು ರೈನಾ ಹೇಳಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಕೊನೇ ಓವರ್ನಲ್ಲಿ ಮಾರ್ಕ್ ವುಡ್ ಎಸೆತಕ್ಕೆ ಎರಡು ಸಿಕ್ಸರ್ ಬಾರಿಸಿದ್ದಾರೆ. ವಿಶ್ವದ ಅತಿ ವೇಗದ ಬೌಲರ್ ಎನಿಸಿಕೊಂಡಿರುವ ವುಡ್ ಎಸೆತವನ್ನು ಸಿಕ್ಸರ್ಗೆ ಅಟ್ಟುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಆದರೆ, 41 ವರ್ಷದ ಧೋನಿ ಒಂದು ಕಾಲಿನಲ್ಲಿ ನಿಂತು ಸಿಕ್ಸರ್ ಬಾರಿಸಿದ್ದಾರೆ ಎಂದು ಅವರು ಹೊಗಳಿದ್ದಾರೆ.
ನೂತನ ದಾಖಲೆ ಬರೆದ ಧೋನಿ
ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ 16ನೇ ಅವೃತ್ತಿಯ ಆರನೇ ಪಂದ್ಯದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ. ಪಂದ್ಯದಲ್ಲಿ ಕೇವಲ ಮೂರು ಎಸೆತಗಳಲ್ಲು ಎದುರಿಸಿ 12 ಬಾರಿಸಿದ ಅವರು ಈ ಸಾಧನೆಗೆ ಪಾತ್ರರಾದರು. ಮಹೇಂದ್ರ ಸಿಂಗ್ ಧೋನಿ ಈ ಪಂದ್ಯದಲ್ಲಿ ಒಟ್ಟು ಮೂರು ಎಸೆತಗಳನ್ನು ಎದುರಿಸಿದ್ದರೂ ಅದರಲ್ಲಿ ಎರಡು ಭರ್ಜರಿ ಸಿಕ್ಸರ್ಗಳನ್ನು ಭಾರಿಸಿದ್ದರು. ಈ ಮೂಲಕ ಚೆನ್ನೈನ ಚೆಪಾಕ್ ಸ್ಟೇಡಿಯಮ್ನಲ್ಲಿ ಸೇರಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಪ್ರೇಕ್ಷಕರಿಗೆ ಖುಷಿ ನೀಡಿದ್ದರು.
ಮಹೇಂದ್ರ ಸಿಂಗ್ ಧೋನಿಗೆ ಸೋಮವಾರದ ಪಂದ್ಯ ಐಪಿಎಲ್ನ 236ನೇ ಹಣಾಹಣಿಯಾಗಿದೆ. ಈ ಪಂದ್ಯದಲ್ಲಿ ಅವರು ಎಂಟು ರನ್ ಬಾರಿಸಿದ ತಕ್ಷಣ ಐಪಿಎಲ್ನಲ್ಲಿ 5000 ರನ್ಗಳನ್ನು ಬಾರಿಸಿದ ದಾಖಲೆ ಮಾಡಿದರು. ಪಂದ್ಯದಲ್ಲಿ ಅವರು 12 ರನ್ ಬಾರಿಸಿರುವ ಕಾರಣ ಅವರ ಒಟ್ಟು ಗಳಿಕೆ 5004ಕ್ಕೆ ಏರಿದೆ. ಅವರೀಗ ಈ ಮೈಲುಗಲ್ಲು ಸ್ಥಾಪಿಸಿದ ಏಳನೇ ಆಟಗಾರ ಎನಿಸಿಕೊಂಡಿದ್ದಾರೆ.
ಧೋನಿಗಿಂತ ಮೊದಲು ವಿರಾಟ್ ಕೊಹ್ಲಿ, ಶಿಖರ್ ಧವನ್, ಡೇವಿಡ್ ವಾರ್ನರ್, ರೋಹಿತ್ ಶರ್ಮಾ, ಸುರೇಶ್ ರೈನಾ ಹಾಗೂ ಎಬಿಡಿ ವಿಲಿಯರ್ಸ್ ಐದು ಸಾವಿರ ರನ್ಗಳ ದಾಖಲೆ ಮಾಡಿದ್ದರು. ಇದೀಗ ರೋಹಿತ್ ಶರ್ಮಾ ಶೀ ದಾಖಲೆ ಮಾಡಿದ ಐದನೇ ಭಾರತೀಯ ಬ್ಯಾಟರ್.
ಐಪಿಎಲ್ನಲ್ಲಿ 5000 ರನ್ಗಳ ಗಡಿ ದಾಟಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ. ಕೊಹ್ಲಿ 224 ಪಂದ್ಯಗಳಲ್ಲಿ ಆಡಿದ್ದು, 5 ಶತಕ ಹಾಗೂ 45 ಅರ್ಧ ಶತಕಗಳ ನೆರವಿನಿಂದ 6706 ರನ್ ಬಾರಿಸಿದ್ದಾರೆ.