ಕೊಲೊಂಬೊ: ಭಾರತ ತಂಡದ ಮಾಜಿ ನಾಯಕ ಹಾಗೂ ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ ಆಗಿರುವ ವಿರಾಟ್ ಕೊಹ್ಲಿಯನ್ನು (Virat kohli) ಬಾಂಗ್ಲಾದೇಶ ವಿರುದ್ಧದ ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ಆಡಿಸಿಲ್ಲ. ನಾಯಕ ರೋಹಿತ್ ಶರ್ಮಾ ತಂಡದಲ್ಲಿ 5 ಬದಲಾವಣೆ ಮಾಡಿದ್ದರು . ಅವರಲ್ಲಿ ಒಬ್ಬರು ವಿರಾಟ್ ಕೊಹ್ಲಿ. ಆದರೆ ರೆಸ್ಟ್ ಪಡೆಯುವುದು ಕೊಹ್ಲಿಯ ಜಾಯಮಾನವಲ್ಲ. ಬದಲಾಗಿ ತಂಡದ ವಾಟರ್ಬಾಯ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಹಿರಿಯ ಹಾಗೂ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಕೊಹ್ಲಿ ಆಟಗಾರರಿಗೆ ನೀರು ತಂದುಕೊಡುವ ಕೆಲಸ ಮಾಡುತ್ತಾರೆ ಎಂಬುದು ಕ್ರಿಕೆಟ್ ಕ್ಷೇತ್ರಕ್ಕೆ ಅಚ್ಚರಿಯ ಸಂಗತಿ.
ಅಂದ ಹಾಗೆ ವಿರಾಟ್ ಕೊಹ್ಲಿ ವಾಟರ್ ಬಾಯ್ ಆಗಿ ಕಾರ್ಯ ನಿರ್ವಹಿಸುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅವರು ವಾಟರ್ಬಾಯ್ ಪಾತ್ರ ನಿರ್ವಹಿಸಿದ್ದರು. ಆದರೆ, ಈ ಬಾರಿ ಅವರು ಗಮನ ಸೆಳೆದಿರುವುದು ತಮ್ಮ ವಿನೋದದ ಓಟದ ಕಾರಣಕ್ಕೆ. ಅವರ ಈ ಓಟ ಇಂಟರ್ನೆಟ್ನಲ್ಲಿ ಟ್ರೆಂಡ್ ಆಗಿದೆ. ಒಂದು ಓವರ್ ಮುಕ್ತಾಯಗೊಂಡ ತಕ್ಷಣ ವಾಟರ್ ಬಾಯ್ಗಳು ನೀರು ತೆಗೆದುಕೊಂಡು ಮೈದಾನದಲ್ಲಿರುವ ಆಟಗಾರರಿಗೆ ತಲುಪಿಸಬೇಕು. ಕೆಲವೊಂದು ಬಾರಿ ಕೋಚ್ಗಳ ಹೇಳುವ ಸಂದೇಶವನ್ನೂ ರವಾನೆ ಮಾಡಬೇಕಾಗುತ್ತದೆ. ಅಂತೆಯೇ ವಿರಾಟ್ ಕೊಹ್ಲಿ ಬಾಂಗ್ಲಾ ವಿರುದ್ಧದ ಹಣಾಹಣಿಯಲ್ಲಿ ಈ ಕೆಲಸ ಮಾಡಿದ್ದರು.
ಇಲ್ಲೂ ಶ್ರದ್ಧೆ
ವಿರಾಟ್ ಕೊಹ್ಲಿ ಬದ್ಧತೆ ಹಾಗೂ ಶ್ರದ್ಧತೆ ಇನ್ನೊಂದು ಹೆಸರು. ಅವರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಅಥ್ಲೀಟ್. ಅಂತೆಯೇ ವಾಟರ್ ಬಾಯ್ ಆಗಿಯೂ ಅವರು ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಅವರು ಓಡಿಕೊಂಡು ನೀರು ತೆಗೆದುಕೊಂಡು ಹೋಗುವ ಚಿತ್ರವನ್ನು ಎಕ್ಸ್ನಲ್ಲಿ ಪ್ರಕಟಿಸಿರುವ ಐಪಿಎಲ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕೊಹ್ಲಿಗೆ ಪಂದ್ಯದಿಂದ ರೆಸ್ಟ್. ಆದರೆ, ಅವರು ರೆಸ್ಟ್ ತೆಗೆದುಕೊಳ್ಳುವುದಿಲ್ಲ ಎಂದು ಬರೆದುಕೊಂಡಿದೆ. ಅದೇ ರೀತಿ ಇನ್ಸ್ಟಾಗ್ರಾಮ್ನಲ್ಲಿ ಸಣ್ಣ ವಿಡಿಯೊ ತುಣುಕನ್ನೂ ಹಾಕಿದೆ.
ವಿನೋದದ ಓಟ
ವಿರಾಟ್ ಕೊಹ್ಲಿ ಮೈದಾನದಲ್ಲಿ ಸಿಕ್ಕಾಪಟ್ಟೆ ಆಕ್ರಮಣಕಾರಿ ಆಟಗಾರ. ಎದುರಾಳಿ ತಂಡದ ಆಟಗಾರರನ್ನು ಗುರಾಯಿಸುವುದು ಸೇರಿದಂತೆ ನಾನಾ ಅಪಥ್ಯ ವರ್ತನೆಗಳನ್ನು ಮಾಡುತ್ತಾರೆ. ಅದರೆ, ಅವರು ವೈಯುಕ್ತಿಕವಾಗಿ ತುಂಬಾ ವಿನೋದ ತುಂಬಿದ ವ್ಯಕ್ತಿ. ಮೈದಾನದಲ್ಲಿ ಡಾನ್ಸ್ ಮಾಡುವ ಮೂಲಕ ಹಲವು ಬಾರಿಗೆ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದಾರೆ. ಅಂತೆಯೇ ಅವರು ಈ ಬಾರಿ ವಾಟರ್ ಬಾಯ್ ಅಗಿ ಓಡುವ ಮೂಲಕವೂ ತಮಾಷೆ ಸೃಷ್ಟಿಸಿದ್ದಾರೆ.
— RVCJ Media (@RVCJ_FB) September 15, 2023
ಓವರ್ ಒಂದು ಮುಗಿದ ತಕ್ಷಣ ವಾಟರ್ ಕ್ಯಾನ್ ಹಿಡಿದುಕೊಂಡು ಹೊರಟ ಅವರು ಮಕ್ಕಳಂತೆ ಓಡಲು ಆರಂಭಿಸುತ್ತಾರೆ. ಅವರನ್ನು ಹಿಂಬಾಲಿಸುತ್ತಿದ್ದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ನೋಡಿ ನಗುತ್ತಾರೆ. ಸ್ವಲ್ಪ ಹೊತ್ತು ಸರಿಯಾಗಿ ಓಡಿದ ಅವರು ಬಳಿಕ ಅದೇ ರೀತಿ ತಮಾಷೆಯಾಗಿ ಓಡಲು ಆರಂಭಿಸುತ್ತಾರೆ. ಅವರ ಈ ವರ್ತನೆಗಳು ಹಲವು ಪ್ರೇಕ್ಷರ ಮೊಬೈಲ್ ಕ್ಯಾಮೆರಾ ಕಣ್ಣಿಗೆ ಬಿದ್ದಿತ್ತು. ಈ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದವು.
ಭಾರತ ತಂಡದಲ್ಲಿ ನಾಲ್ಕು ಬದಲಾವಣೆ
ಬಾಂಗ್ಲಾದೇಶ ವಿರುದ್ಧದ ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಭಾರತ ತಂಡ ಉತ್ತಮ ಆರಂಭ ಕಂಡಿದೆ. ರೋಹಿತ್ ಶರ್ಮಾ ಪಡೆ ಈಗಾಗಲೇ ಫೈನಲ್ಗೆ ಅರ್ಹತೆ ಪಡೆದಿದ್ದು, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್ ಮತ್ತು ಮೊದಲ ಆಯ್ಕೆಯ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಸೇರಿದಂತೆ ಐದು ಆಟಗಾರರಿಗೆ ಟೀಮ್ ಮ್ಯಾನೇಜ್ಮೆಂಟ್ ವಿಶ್ರಾಂತಿ ನೀಡಿದೆ. ಮೊಹಮ್ಮದ್ ಶಮಿ ಮತ್ತು ಶಾರ್ದೂಲ್ ಠಾಕೂರ್, ತಿಲಕ್ ವರ್ಮಾ, ಸೂರ್ಯಕುಮಾರ್ ತಂಡಕ್ಕೆ ಎಂಟ್ರಿ ಪಡೆದುಕೊಂಡಿದ್ದಾರೆ.