Site icon Vistara News

Asian Games : ಚೀನಾದಲ್ಲಿ ಭಾರತದ ಅಥ್ಲೀಟ್​ಗಳಿಗೆ ಹೆಜ್ಜೆ ಹೆಜ್ಜೆಗೂ ಮೋಸ!

jyoti yarraji

ಬೆಂಗಳೂರು: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನಲ್ಲಿ (Asian Games) ಸ್ವಜನ ಪಕ್ಷಪಾತ ಹಾಗೂ ವಿವಾದಗಳು ನಿರಂತರವಾಗಿ ನಡೆಯುತ್ತಿವೆ. ಬೇರೆ ದೇಶಗಳ ಅದರಲ್ಲೂ ಭಾರತೀಯ ಅಥ್ಲೀಟ್​ಗಳ ವಿಚಾರದಲ್ಲಿ ಅಲ್ಲಿನ ಅಧಿಕಾರಿಗಳು ಉದ್ದೇಶಪೂರ್ವಕ ತಪ್ಪುಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ಭಾರತದ ಅಥ್ಲೀಟ್​ಗಳ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಆರೋಪಗಳಿಗೆ ಸಾಕಷ್ಟು ಉದಾಹರಣೆಗಳೂ ಲಭಿಸುತ್ತಿವೆ. ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಮಾತನಾಡಿದ ಭಾರತದ ಮಾಜಿ ಅಥ್ಲೀಟ್​ (2003ರ ವಿಶ್ವ ಚಾಂಪಿಯನ್​ಷಿಪ್​ನ ಲಾಂಗ್​ ಜಂಪ್​ ಕಂಚಿನ ಪದಕ ವಿಜೇತೆ) ಅಂಜು ಬಾಬಿ ಜಾರ್ಜ್ ಅವರು, ಚೀನಾದವರು ಕ್ರೀಡಾಕೂಟದಲ್ಲಿ ತಮ್ಮ ಕುತಂತ್ರ ಬುದ್ಧಿಯನ್ನು ತೋರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾಧ್ಯಮದವರ ಜತೆ ಮಾತನಾಡಿದ ಅವರು, ನಮ್ಮವರು ಚೀನಾದಲ್ಲಿ ನಡೆಯುತ್ತಿರುವ ಹಾಲಿ ಆವೃತ್ತಿಯ ಏಷ್ಯನ್ ಗೇಮ್ಸ್​ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. 100 ಪದಕಗಳ ಸಾಧನೆ ಮಾಡುವ ಹಾದಿಯಲ್ಲಿದ್ದಾರೆ. ಅದರೆ, ಚೀನಾದಲ್ಲಿ ಪದಕ ಗೆಲ್ಲುವುದು ನಮ್ಮ ಅಥ್ಲೀಟ್​ಗಳ ಪಾಲಿಗೆ ಸವಾಲಿನ ಸಂಗತಿಯಾಗಿತ್ತು. ಕ್ರೀಡಾ ಕೂಟದ ಅಧಿಕಾರಿಗಳು ಭಾರತದ ಅಥ್ಲೀಟ್​ಗಳಿಗೆ ಮೋಸ ಮಾಡಲು ಯತ್ನಿಸಿದ್ದಾರೆ. ಹರ್ಡಲ್ಸ್​ ವೇಳೆ ಜ್ಯೋತಿ ಯರ್ರಾಜಿ, ಮಹಿಳೆಯರ ಜಾವೆಲಿನ್ ಎಸೆತದ ವೇಳೆ ಅನ್ನುರಾಣಿ, ಪುರುಷರ ಜಾವೆಲಿನ್ ಎಸೆತದ ವೇಳೆ ನೀರಜ್ ಚೋಪ್ರಾ ಹಾಗೂ ಕಿಶೋರ್ ಕುಮಾರ್​ ಜೆನಾ ಅವರ ಮಾನಸಿಕ ಸ್ಥೈಯವನ್ನು ಕುಗ್ಗಿಸುವ ಕೆಲಸ ಮಾಡಿದ್ದಾರೆ. ಇವೆಲ್ಲವೂ ಉದ್ದೇಶಪೂರ್ವಕ ಕೃತ್ಯ. ಈ ಕುರಿತು ದೂರು ದಾಖಲಿಸುತ್ತೇವೆ ಎಂದು ಹೇಳಿದ್ದಾರೆ.

ಏನಾಯಿತು?

ಚೀನಾದ ಅಧಿಕಾರಿಗಳು ತಮ್ಮ ಕ್ರೀಡಾಪಟುಗಳನ್ನು ಬೆಂಬಲಿಸಲು ಮೋಸದ ಮಾರ್ಗ ಹಿಡಿದ ಪ್ರಕರಣಕ್ಕೆ ಉದಾಹರಣೆ ಇಲ್ಲಿದೆ. ಭಾರತದ ನೀರಜ್ ಚೋಪ್ರಾ ಮತ್ತು ಕಿಶೋರ್ ಜೆನಾ ಭಾಗವಹಿಸಿದ್ದ ಪುರುಷರ ಜಾವೆಲಿನ್ ಥ್ರೋ ಫೈನಲ್​ನಲ್ಲಿ ಚೀನಾದ ಅಧಿಕಾರಿಗಳು ಉದ್ದೇಶಪೂರ್ವಕ ತಪ್ಪುಗಳನ್ನು ಮಾಡಿದ್ದಾರೆ.

ನೀರಜ್ ಚೋಪ್ರಾ ಅವರ ಮೊದಲ ಎಸೆತವು ಸ್ಪಷ್ಟವಾಗಿ 85 ಮೀಟರ್ ಗಡಿಯನ್ನು ದಾಟಿತ್ತು. ಈ ವೇಳೆ ಕೆಲವು ತಾಂತ್ರಿಕ ಸಮಸ್ಯೆ ಇದೆ ಎಂದು ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಎಸೆತವನ್ನು ದಾಖಲು ಮಾಡಲಿಲ್ಲ. ಆದರೂ ಚಾಂಪಿಯನ್ ಥ್ರೋವರ್ ಚಿನ್ನದ ಪದಕ ಗೆದ್ದರು. ನಂತರ ಅದೇ ಸ್ಪರ್ಧೆಯಲ್ಲಿ, ಕಿಶೋರ್ ಜೆನಾ ಅವರ ಎರಡನೇ ಎಸೆತವನ್ನು ಫೌಲ್ ಎಂದು ​ ಪರಿಗಣಿಸಿದ್ದರು. ಅದು ಸ್ಪಷ್ಟವಾಗಿ ಕಾನೂನುಬದ್ಧ ಎಸೆತವಾಗಿತ್ತು.

ಭಾರತೀಯ ಅಧಿಕಾರಿಗಳು ಪ್ರತಿಭಟಿಸಿದ ನಂತರ ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಲಾಯಿತು. ಅಂತಿಮವಾಗಿ, ಜೆನಾ ಕೂಡ ವೈಯಕ್ತಿಕ ಅತ್ಯುತ್ತಮ ಸಾಧನೆಯೊಂದಿಗೆ ಬೆಳ್ಳಿ ಪದಕವನ್ನು ಪಡೆದರು. ಈ ಸಂದರ್ಭದಲ್ಲಿ ಏನಾಯಿತು ಎಂಬುದನ್ನು ಗಣನೆಗೆ ತೆಗೆದುಕೊಂಡು, ಎಎಫ್ಐ ಉಪಾಧ್ಯಕ್ಷೆ ಅಂಜು ಬಾಬಿ ಜಾರ್ಜ್ ತಮ್ಮ ಅಸಮಾಧಾನ ಬಹಿರಂಗಪಡಿಸಿದ್ದಾರೆ. ಚೀನಾದ ಅಧಿಕಾರಿಗಳ ವಿರುದ್ಧ ಔಪಚಾರಿಕ ಪ್ರತಿಭಟನೆಯನ್ನು ದಾಖಲಿಸಲು ಫೆಡರೇಶನ್ ಮುಂದಾಗಿದೆ ಎಂದು ಅವರು ಹೇಳಿದ್ದಾರೆ.

ಜ್ಯೋತಿಗೂ ಅನ್ಯಾಯ ಮಾಡಲು ಯತ್ನಿಸಿದ್ದರು

100 ಮೀಟರ್ ಹರ್ಡಲ್ಸ್​​ನಲ್ಲಿ ಜ್ಯೋತಿ ಯರ್ರಾಜಿ ಅವರಿಗೂ ಅನ್ಯಾಯ ಮಾಡಲು ಅಲ್ಲಿನ ಅಧಿಕಾರಿಗಳು ಯತ್ನಿಸಿದ್ದರು. ಚೀನಾದ ಓಟಗಾರ್ತಿ ಯಾನಿ ವು ಅಂತಿಮ ವಿಷಲ್ ಹೊಡೆಯುವ ಮೊದಲೇ ಓಟ ಆರಂಭಿಸಿದ್ದರು. ಹೀಗಾಗಿ ಅವರನ್ನು ಅಮಾನತು ಮಾಡುವ ಬದಲು ಜ್ಯೋತಿ ವಿರುದ್ಧ ಕ್ರಮ ಕೈಗೊಂಡು, ಮೈದಾನದಿಂದ ಹೊರಹೋಗುವಂತೆ ಹೇಳಿದರು. ಅಲ್ಲದೆ, ಯಾನಿ ವು ಅವರಿಗೆ ಸ್ಪರ್ಧಿಸಲು ಅವಕಾಶ ಕೊಟ್ಟರು.

ಬಳಿಕ ಟಿವಿ ರಿಪ್ಲೈಗಳನ್ನು ನೋಡಿದ ಯರ್ರಾಜಿ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಅವರನ್ನು ಅಮಾನತು ಮಾಡುವ ಬದಲು ಎಲ್ಲರಿಗೂ ಸ್ಪರ್ಧಿಸಲು ಅವಕಾಶ ಕೊಟ್ಟರು ಅಲ್ಲಿನ ಅಧಿಕಾರಿಗಳು. ಅಂತಿಮವಾಗಿ ಜ್ಯೋತಿ 12.91 ಸೆಕೆಂಡುಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು. ತಪ್ಪು ಮಾಡಿದರೂ ಸ್ಪರ್ಧಿಸಲು ಅವಕಾಶ ಪಡೆದ ವು ಎರಡನೇ ಸ್ಥಾನ ಪಡೆದರು. ಭಾರತವು ಆಕ್ಷೇಪ ಮಾಡಿದ ಬಳಿಕ ವು ಅವರನ್ನು ಅಮಾನತು ಮಾಡಿ ಜ್ಯೋತಿಗೆ ಬೆಳ್ಳಿಯ ಪದಕ ಕೊಟ್ಟಿದ್ದಾರೆ.

ಚೀನಾದ ಅಧಿಕಾರಿಗಳು ಕ್ರೀಡಾಕೂಟದ ಉದ್ದಕ್ಕೂ ಇದೇ ರೀತಿಯ ಉದ್ದೇಶಪೂರ್ವಕ ತಪ್ಪುಗಳನ್ನು ಮಾಡಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ.

Exit mobile version