Site icon Vistara News

IPL 2023 : ನಮ್ಮದು ಬೆಸ್ಟ್​ ಟೀಮ್​ ಆಗಿರಲಿಲ್ಲ, ಪ್ಲೇಆಫ್​ ಅರ್ಹತೆ ನಮಗಿರಲಿಲ್ಲ ಎಂದ ಆರ್​ಸಿಬಿ ಕ್ಯಾಪ್ಟನ್​

RCB Faf Du plessis

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL 2023) ಆರ್​ಸಿಬಿಯ ಪ್ರಶಸ್ತಿ ಬರ ಮುಂದುವರಿಯಿತು. 2023ರ ಆವೃತ್ತಿಯಲ್ಲಿ ಪ್ಲೇಆಫ್​​ಗೂ ಪ್ರವೇಶ ಪಡೆಯುವಲ್ಲಿ ವಿಫಲವಾಯಿತು. ಐದನೇ ಸ್ಥಾನ ಪಡೆದುಕೊಂಡು ನಿರ್ಗಮಿಸಿತು. ಭಾನುವಾರ ನಡೆದ ಟೂರ್ನಿಯ ತನ್ನ ಕೊನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್​ ವಿರುದ್ಧ ಸೋತು ಟೂರ್ನಿಯಿಂದ ಹೊರಕ್ಕೆ ಬಿತ್ತು. ವಿರಾಟ್ ಕೊಹ್ಲಿ 61 ಎಸೆತಗಳಲ್ಲಿ ಅಜೇಯ 101 ರನ್ ಸೇರಿದಂತೆ ಎದುರಾಳಿ ಗುಜರಾತ್​ಗೆ 198 ರನ್​​ಗಳ ಕಠಿಣ ಗುರಿ ವಿಧಿಸಿದರೂ, ಆರ್ಸಿಬಿಗೆ ಆರು ವಿಕೆಟ್​​ಗಳ ಸೋಲಿಗೆ ಒಳಗಾಗಿತ್ತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಮಳೆ ನೀಡಿದ ಬಿಡುವಿನ ವೇಳೆ ನಡೆದ ಹಣಾಹಣಿಯಲ್ಲಿ ಗುಜರಾತ್​ ತಂಡದ ಆರಂಭಿಕ ಬ್ಯಾಟರ್​ ಶುಭಮನ್ ಗಿಲ್ ಕೂಡ ಶತಕ ಬಾರಿಸಿ ಆರ್​ಸಿಬಿಯ ಪ್ಲೇಆಫ್ ಕನಸು ನುಚ್ಚುನೂರು ಮಾಡಿದರು. ಅವರ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪುರಸ್ಕಾರವೇ ಲಭಿಸಿತು. ಅಲ್ಲಿಗೆ ಆರ್​ಸಿಬಿ ಅಭಿಮಾನಿಗಳ ಹೃದಯ ಒಡೆದು ಹೋಗಿತ್ತು. ಇಷ್ಟೆಲ್ಲ ಬೇಸರದ ನಡುವೆಯೂ ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್ ತಮ್ಮ ತಂಡದ ತಪ್ಪನ್ನು ಒಪ್ಪಿಕೊಳ್ಳುವುದಕ್ಕೆ ಹಿಂಜರಿದಿಲ್ಲ. ನಮ್ಮ ತಂಡ ಬೆಸ್ಟ್​ ಆಗಿರಲಿಲ್ಲ. ಪ್ಲೇಆಫ್​ಗೆ ಏರುವ ಅರ್ಹತೆಯೂ ನಮಗೆ ಇರಲಿಲ್ಲ ಎಂಬುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಹಾಲಿ ಆವೃತ್ತಿಯ ಲೀಗ್​ ಹಂತದಲ್ಲೇ ನಮ್ಮ ಹೋರಾಟ ಕೊನೆಗೊಂಡಿದ್ದಕ್ಕೆ ತುಂಬಾ ನಿರಾಶೆಗೊಂಡಿದ್ದೇನೆ. ಹಾಗೆಂದು ಸ್ವಯಂ ವಿಮರ್ಶೆ ಮಾಡಿದರೆ ನಾವು ಟೂರ್ನಿಯ ಅತ್ಯುತ್ತಮ ತಂಡಗಳಲ್ಲಿ ಒಂದಾಗಿರಲಿಲ್ಲ ಎಂದು ಪ್ರಾಮಾಣಿಕವಾಗಿ ಹೇಳುತ್ತೇನೆ” ಎಂದು ಪಂದ್ಯದ ಬಳಿಕ ಮಾಡಿದ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ಋತುವಿನುದ್ದಕ್ಕೂ ಕೆಲವು ಉತ್ತಮ ಪ್ರದರ್ಶನಗಳನ್ನು ನೀಡಿದ್ದೇವೆ. ಅದವೇ ನಮ್ಮ ಪಾಲಿಗೆ ಸುಯೋಗ. ಆದರೆ, ನಾವು ಆಡಿದ 14 ಪಂದ್ಯಗಳನ್ನು ಪರೀಕ್ಷಿಸಿದರೆ ನಾನು ಪ್ಲೇಆಫ್​​ಗೇರಲು ಅರ್ಹತೆ ಪಡೆದುಕೊಂಡಿರಲಿಲ್ಲ ಎಂದು ನಾಯಕ ಫಾಫ್​ ಹೇಳಿದ್ದಾರೆ.

ಇದನ್ನೂ ಓದಿ : IPL 2023: ಆರ್​ಸಿಬಿ ತೊರೆಯುವ ಕಾಲ ಬಂದಿದೆ; ಕೊಹ್ಲಿಗೆ ಸಲಹೆ ನೀಡಿದ ಪೀಟರ್ಸನ್​

ಈ ಗೆಲುವು ಸಾಧಿಸಿದ್ದರೆ ಆರ್​ಸಿಬಿ ನಾಲ್ಕನೇ ಮತ್ತು ಅಂತಿಮ ಪ್ಲೇ ಆಫ್ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡುತ್ತಿತ್ತು. ಆರ್​ಸಿಬಿ ಸೋತಿದ್ದರಿಂದ ಮುಂಬೈ ಇಂಡಿಯನ್ಸ್​ಗೆ ಅವಕಾಶ ಸಿಕ್ಕಿತು. ಅದಕ್ಕಿಂತ ಮೊದಲ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ಸ್ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್​ಗಳಿಂದ ಮಣಿಸಿತ್ತು.

ಗುಜರಾತ್ ವಿರುದ್ಧದ ಸೋಲು ನಮಗೆ ನೋವುಂಟು ಮಾಡಿದೆ. ಭಾನುವಾರದ ಪಂದ್ಯದಲ್ಲಿ ನಾವು ಗೆಲುವಿಗಾಗಿ ಶತಪ್ರಯತ್ನ ಮಾಡಿದ್ದೆವು. ಆದರೆ ಅದೃಷ್ಟ ನಮಗೆ ಕೈಕೊಟ್ಟಿತು. ಹಾಲಿ ಆವೃತ್ತಿಯಲ್ಲಿ ಮ್ಯಾಕ್ಸ್​ವೆಲ್ ಅತ್ಯುತ್ತಮ ಪ್ರದರ್ಶನ ನೀಡಿದರು. ಅವರು ನಮ್ಮ ಪಾಲಿಗೆ ಅನುಕೂಲಕರ ಆಟವನ್ನು ಆಡಿದರು. ನನ್ನ ಮತ್ತು ವಿರಾಟ್​ ಕೊಹ್ಲಿಯ ಜತೆಯಾಟವೂ ಚೆನ್ನಾಗಿತ್ತು. ಹೆಚ್ಚಿನ ಪಂದ್ಯಗಳಲ್ಲಿ 50 ಪ್ಲಸ್​ ಜತೆಯಾಟ ನೀಡಿದ್ದೆವು. ಆದರೆ, ಎಲ್ಲವೂ ನಮಗೆ ಅನುಕೂರವಾಗಿರಲಿಲ್ಲ ಎಂದು ಫಾಫ್​ ಡು ಪ್ಲೆಸಿಸ್​ ಹೇಳಿದ್ದಾರೆ.

ವೇಗಿ ಮೊಹಮ್ಮದ್ ಸಿರಾಜ್ ಉತ್ತಮ ಆಟವನ್ನು ಆಡಿದರು. ಎದುರಾಳಿಯನ್ನು ಕಟ್ಟಿ ಹಾಕಲು ಪ್ರತಿ ಬಾರಿಯೂ ಪ್ರಯತ್ನಿಸಿತು. ಇವೆಲ್ಲವೂ ಕೆಲವೊಂದು ಸಕಾರಾತ್ಮಕ ಸಂಗತಿಗಳಾಗಿದ್ದವು. ಆದರೆ, ಕೆಲವು ವಿಭಾಗಗಳು ಸಕಾರಾತ್ಮಕವಾಗಿರಲಿಲ್ಲ. ಎಲ್ಲರೂ ಉತ್ತಮ ಪ್ರದರ್ಶನ ನೀಡಿಲ್ಲ ಎಂಬುದಾಗಿ ಫಾಫ್​ ಡು ಪ್ಲೆಸಿಸ್​ ಹೇಳಿದ್ದಾರೆ.

Exit mobile version