ತಿರುವನಂತಪುರ: ನವೆಂಬರ್ 26 ರಂದು ತಿರುವನಂತಪುರಂನ ಗ್ರೀನ್ಫೀಲ್ಡ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು (Ind vs Aus) ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಸರಣಿಯ ಆರಂಭಿಕ ಪಂದ್ಯದಲ್ಲಿ ಬೌಲರ್ಗಳ ನೀರಸ ಪ್ರದರ್ಶನದ ನಂತರ, ಭಾರತದ ಯುವ ಬೌಲಿಂಗ್ ಘಟಕವು ಬಲಿಷ್ಠ ಆಸ್ಟ್ರೇಲಿಯಾದ ಬ್ಯಾಟಿಂಗ್ ಲೈನ್ಅಪ್ ಅನ್ನು ಎದುರಿಸಲು ಸಜ್ಜಾಗಿದೆ. ವಿಶಾಖಪಟ್ಟಣಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ವೇಗಿ ಮುಖೇಶ್ ಕುಮಾರ್ ಅವರನ್ನು ಹೊರತುಪಡಿಸಿದರೆ, ಭಾರತದ ಬೌಲರ್ಗಳು ರನ್ ಹರಿವನ್ನು ತಡೆಯಲು ಕಷ್ಟಪಟ್ಟರು. ಅದೇ ರೀತಿ ನಿಖರತೆಯ ಕೊರತೆಯನ್ನು ಎದುರಿಸಬೇಕಾಯಿತು.
ವಿಶ್ವ ಕಪ್ನಲ್ಲಿ ನೆದರ್ಲ್ಯಾಂಡ್ಸ್ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಅಭ್ಯಾಸ ಪಂದ್ಯದ ವೇಳೆಯ ವಿಡಿಯೊ ಇಲ್ಲಿದೆ
ಆಸ್ಟ್ರೇಲಿಯಾದ ಶಿಬಿರಕ್ಕೆ ಸರಣಿಯ ಆರಂಭಿಕ ಪಂದ್ಯದಲ್ಲಿ ಜೋಶ್ ಇಂಗ್ಲಿಸ್ ಅವರ ಶತಕವು ಸಕಾರಾತ್ಮಕ ಉತ್ತೇಜನವನ್ನು ನೀಡಿತ್ತು. ವಿಶೇಷವಾಗಿ ಅವರು ಆರಂಭಿಕರಾಗಿ ಅವರು ಜವಾಬ್ದಾರಿ ವಹಿಸಿಕೊಂಡಾಗ ಶತಕ ಹರಿದು ಬಂದಿತ್ತು. ಆದಾಗ್ಯೂ, ಸ್ಟೀವ್ ಸ್ಮಿತ್ ಅವರನ್ನು ಅಗ್ರ ಕ್ರಮಾಂಕಕ್ಕೆ ಏರಿಸುವ ನಿರ್ಧಾರವು ನಿರೀಕ್ಷೆ ಉಂಟು ಮಾಡಲಿಲ್ಲ. ಅನುಭವಿ ಬ್ಯಾಟರ್ ವೇಗದ ಬೌಲಿಂಗ್ ಗೆ ಹೆಣಗಾಡುತ್ತಿದ್ದರು. ಎರಡೂ ತಂಡಗಳು ತಮ್ಮ ಬೌಲಿಂಗ್ ವಿಭಾಗಗಳಲ್ಲಿ ಗಮನಾರ್ಹ ಸುಧಾರಣೆಗಳ ಮೇಲೆ ಕಣ್ಣಿಟ್ಟಿವೆ. ಪಿಚ್ ಪರಿಸ್ಥಿತಿಗಳ ಆಧಾರದ ಮೇಲೆ ಲೆಗ್ ಸ್ಪಿನ್ನರ್ ಆಡಮ್ ಜಂಪಾ ಅವರನ್ನು ಪರಿಚಯಿಸಲು ಆಸ್ಟ್ರೇಲಿಯಾ ಯೋಚಿಸುತ್ತಿದೆ.
ಮಳೆಯ ಸಾಧ್ಯತೆ ಇದೆ
ತಿರುವನಂತಪುರಂನಲ್ಲಿ ನವೆಂಬರ್ 26 ರಂದು ಮಳೆಯಾಗುವ ಸಾಧ್ಯತೆ 55% ಎಂದು ಹವಾಮಾನ ಮುನ್ಸೂಚನೆ ಸೂಚಿಸುತ್ತದೆ. ಇತ್ತೀಚಿನ ಕೆಲವು ದಿನಗಳಲ್ಲಿ ಅಲ್ಲಿ ಮಳೆಯಾಗಿದೆ ಮತ್ತು ಪಂದ್ಯದ ದಿನದಂದು ಕೆಲವು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಇದು ಆಟದ ಮೇಲೆ ಪರಿಣಾಮ ಬೀರಬಹುದು. Accuweather.com ಪ್ರಕಾರ, ಮಳೆಯಾಗುವ ಸಾಧ್ಯತೆ ಶೇ.55 ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಶೇ.11ರಷ್ಟಿದೆ. ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಳೆಯು ಆಟಕ್ಕೆ ಅಡ್ಡಿಪಡಿಸುವ ಸಾಧ್ಯತೆಗಳಿವೆ. ಆದಾಗ್ಯೂ ಪಂದ್ಯವನ್ನು ಆಯೋಜಿಸಲು ಸಮಸ್ಯೆ ಆಗದು.
ಬೌಲರ್ಗಳಿಗೆ ಅನುಕೂಲಕರ ಪಿಚ್
ಐತಿಹಾಸಿಕವಾಗಿ, ಗ್ರೀನ್ಫೀಲ್ಡ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿನ ಪಿಚ್ ದೊಡ್ಡ ಮೊತ್ತ ಪೇರಿಸಲು ಅನುಕೂಲ ಮಾಡಿಕೊಡುವುದಿಲ್ಲ. ಈ ಸ್ಥಳದಲ್ಲಿ ಹಿಂದಿನ ಅಂತಾರರಾಷ್ಟ್ರೀಯ ಪಂದ್ಯಗಳು ಕಡಿಮೆ ಮೊತ್ತ ಅಥವಾ ಸಂಕ್ಷಿಪ್ತ ಪಂದ್ಯಗಳಿಗೆ ಸಾಕ್ಷಿಯಾಗಿವೆ. ಈ ಕ್ರೀಡಾಂಗಣದಲ್ಲಿ ಕಳೆದ 10 ಪಂದ್ಯಗಳಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 148 ಆಗಿದೆ. ಈ ಮೈದಾನದಲ್ಲಿ ಫ್ಲಡ್ ಲೈಟ್ ಅಡಿಯಲ್ಲಿ ಚೇಸಿಂಗ್ ಮಾಡುವುದು ಕಠಿಣವಾಗುವುದರಿಂದ ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡುವುದು ಇಲ್ಲಿ ಉತ್ತಮವೆಂದು ತೋರುತ್ತದೆ.
ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಭಾರತ: ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷ್ದೀಪ್ ಸಿಂಗ್, ಮುಖೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ : Ind vs Aus : ಗೆಲುವಿನ ಮುನ್ನಡೆ ಪಡೆಯುವುದೇ ಸೂರ್ಯಕುಮಾರ್ ಬಳಗ
ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್/ ಮ್ಯಾಥ್ಯೂ ಶಾರ್ಟ್, ಸ್ಟೀವನ್ ಸ್ಮಿತ್, ಜೋಶ್ ಇಂಗ್ಲಿಸ್, ಆ್ಯರೋನ್ ಹಾರ್ಡಿ/ ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ಸಿ / ವಿಕೆ), ಸೀನ್ ಅಬಾಟ್, ತನ್ವೀರ್ ಸಂಘಾ / ಆಡಮ್ ಜಂಪಾ, ನಾಥನ್ ಎಲ್ಲಿಸ್, ಜೇಸನ್ ಬೆಹ್ರೆನ್ಡಾರ್ಫ್.
ಭಾರತ-ಆಸ್ಟ್ರೇಲಿಯಾ ಟಿ20 ಮುಖಾಮುಖಿ ದಾಖಲೆ
- ಆಡಿದ ಪಂದ್ಯಗಳು 27
- ಭಾರತ 16
- ಆಸ್ಟ್ರೇಲಿಯಾ 10
- ಟೈ 0
- ಫಲಿತಾಂಶ ರಹಿತ 1
- ಮೊದಲ ಪಂದ್ಯ 22 ಸೆಪ್ಟೆಂಬರ್, 2007
- ಕೊನೆಯ ಪಂದ್ಯ 23 ನವೆಂಬರ್ 2023
ಭಾರತ ವಿರುದ್ಧ ಆಸ್ಟ್ರೇಲಿಯಾ ಪ್ರಸಾರ ವಿವರಗಳು
- ದಿನಾಂಕ ಭಾನುವಾರ, ನವೆಂಬರ್ 26
- ಸಮಯ: ಸಂಜೆ 07:00 (ಭಾರತೀಯ ಕಾಲಮಾನ)
- ಲೈವ್ ಸ್ಟ್ರೀಮಿಂಗ್ ಜಿಯೋ ಸಿನೆಮಾ
- ಲೈವ್ ಬ್ರಾಡ್ಕಾಸ್ಟ್ ಸ್ಪೋರ್ಟ್ಸ್18